ಬೆಂಗಳೂರು: ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದ ಶಾಸಕರನ್ನು ಖರೀದಿಸುವ ಯತ್ನ ನಡೆಸಿರುವುದು ಆಡಿಯೋ ಬಹಿರಂಗದಿಂದ ಜಗಜ್ಜಾಹೀರಾಗಿದೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ದಿನ ಸದ್ಯದಲ್ಲೇ ಬರಲಿದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಶುಕ್ರವಾರ  ಸುದ್ದಿಗಾರರೊಂದಿಗೆ ಮಾತನಾಡಿ, ಆಡಿಯೋದಲ್ಲಿ ಸ್ಪಷ್ಟವಾಗಿ ಆಮಿಷವೊಡ್ಡುತ್ತಿರುವುದು ಕಂಡು ಬಂದರೂ ಮಿಮಿಕ್ರಿ ಎಂದು ಹೇಳಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಅದು ‘ಮಿಮಿಕ್ರಿನಾ ಯಡಿಯೂರಪ್ಪನಾ’ ಎಂಬುದನ್ನೂ ತನಿಖೆ ಮಾಡಿಸುತ್ತೇವೆ. ‘ಈ ಹಿಂದೆಯೂ ಅನಂತಕುಮಾರ್ ಬಳಿ ಮಾತನಾಡಿ ಸಿಕ್ಕಿ ಹಾಕಿಕೊಂಡಿದ್ದರು. ಅದನ್ನು ನಾವೇ ಎಸಿಬಿಯಿಂದ ತನಿಖೆ ನಡೆಸಿ ಮುಂದಕ್ಕೆ ತೆಗೆದುಕೊಂಡು ಹೋಗಬಹುದಿತ್ತು. ಆದರೆ, ಅದನ್ನು ಮುಂದುವರೆಸಿರಲಿಲ್ಲ. ಇದೀಗ ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. 

ಅದರಲ್ಲಿ ಸ್ಪೀಕರ್ ಅವರ ವಿರುದ್ಧವೂ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ತನಿಖೆಗೆ ಒತ್ತಾಯಿಸುವಂತೆ ಸ್ಪೀಕರ್‌ಗೂ ದೂರು ನೀಡುತ್ತೇವೆ. ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರು ರಾಜೀನಾಮೆ ನೀಡುವ ದಿನ ಬರುತ್ತದೆ’ ಎಂದು ಸವಾಲು ಎಸೆದರು.