ಬೆಂಗಳೂರು(ಸೆ.17): ಮುಖ್ಯಮಂತ್ರಿಗಳ ಪರಿಹಾರ ನಿಧಿಯ ದೈನಂದಿನ ಕಾರ್ಯ ವಿಧಾನಗಳನ್ನು ಅಂತರ್ಜಾಲದ ಮೂಲಕ ನಿರ್ವಹಿಸಲು ಸಿದ್ಧಪಡಿಸಿರುವ ತಂತ್ರಾಂಶವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಲೋಕಾರ್ಪಣೆ ಮಾಡಿದ್ದಾರೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನೊಂದ ಸಂತ್ರಸ್ತರಿಗಾಗಿ ಹಾಗೂ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ಕೂಡ ಪರಿಹಾರ ನಿಧಿಯ ಮೊತ್ತವನ್ನು ಬಳಸಲಾಗುತ್ತಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು, ನಿಗಮ-ಮಂಡಳಿಗಳು ನೀಡುವ ದೇಣಿಗೆಯಿಂದ ಪರಿಹಾರ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಈ ತಂತ್ರಾಂಶ ಸಹಕಾರಿಯಾಗಲಿದೆ ಎಂದರು.

ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ ಒಟ್ಟು 14,275 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 11,530 ಪ್ರಕರಣಗಳಿಗೆ 61.88 ಕೋಟಿ ರು. ಅನ್ನು ಪರಿಹಾರವಾಗಿ ಬಿಡುಗಡೆ ಮಾಡಲಾಗಿದೆ. 587 ಪ್ರಕರಣಗಳಿಗೆ 9.16 ಕೋಟಿ ರು.ಗಳ ಭರವಸೆ ಪತ್ರಗಳನ್ನು ಸಂಬಂಧಿಸಿದ ಆಸ್ಪತ್ರೆಗಳ ಹೆಸರಿಗೆ ವಿತರಿಸಲಾಗಿದ್ದು, ಒಟ್ಟು 12,117 ಪ್ರಕರಣಗಳಿಗೆ 71.04 ಕೋಟಿ ರು.ಗಳ ಪರಿಹಾರವನ್ನು ವಿತರಿಸಲಾಗಿದೆ ಎಂದು ಹೇಳಿದರು.

ಸಿಎಂ ಬಿಎಸ್‌ವೈ ಜೊತೆ ಅಮೆರಿಕ ಕಾನ್ಸಲ್ ಜನರಲ್ ಸಭೆ, ಮಹತ್ವದ ಚರ್ಚೆ..!

2020 ಏಪ್ರಿಲ್‌ನಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಅಂತರ್ಜಾಲದ ಮೂಲಕ ಸ್ವೀಕರಿಸಿ ಪರಿಹಾರದ ಮೊತ್ತವನ್ನು ಡಿಬಿಟಿ ಯೋಜನೆಯ ಮೂಲಕ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಧ್ಯವರ್ತಿಗಳು ಬಡ ಅರ್ಜಿದಾರರನ್ನು ಶೋಷಿಸುವುದು ಹಾಗೂ ನಕಲಿ ಫಲಾನುಭವಿಗಳ ಹಾವಳಿಯನ್ನು ತಪ್ಪಿಸಿ, ಅರ್ಹ ಫಲಾನುಭವಿಗಳ ಅವಶ್ಯಕತೆಗೆ ತಕ್ಕಂತೆ ಶೀಘ್ರವಾಗಿ ಪರಿಹಾರ ಮೊತ್ತವನ್ನು ತಲುಪಿಸುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡಿಕೆಯಲ್ಲಿ ಆಗಬಹುದಾದ ವಿಳಂಬವನ್ನು ತಡೆಯಲು ತಂತ್ರಾಂಶವು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಬಿಪಿಎಲ್‌ ಪಡಿತರ ಚೀಟಿ ಮತ್ತು ಆಧಾರ್‌ ಗುರುತಿನ ಚೀಟಿಯ ಡಾಟಾವನ್ನು ಮಾನದಂಡವಾಗಿ ಉಪಯೋಗಿಸುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಅರ್ಜಿದಾರರಿಗೆ ಯಾವುದೇ ವಿಳಂಬವಿಲ್ಲದೆ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಪರಿಹಾರವನ್ನು ಈ ತಂತ್ರಾಂಶದ ಮೂಲಕ ಒದಗಿಸಬಹುದಾಗಿದೆ. ವಿಧಾನಸಭೆ, ವಿಧಾನಪರಿಷತ್‌ ಸೇರಿದಂತೆ ಲೋಕಸಭೆ, ರಾಜ್ಯಸಭಾ ಸದಸ್ಯರಿಗೆ ಪ್ರತ್ಯೇಕ ಲಾಗಿನ್‌ ಒದಗಿಸಲಾಗಿರುವ ಹಿನ್ನೆಲೆಯಲ್ಲಿ ಅರ್ಜಿದಾರರು ನೇರವಾಗಿ ಶಾಸಕರ ಕಚೇರಿಗೆ ಅಥವಾ ಸಂಸದರ ಕಚೇರಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.

ಬೆಂಗಳೂರು ಒನ್‌, ಕರ್ನಾಟಕ ಒನ್‌, ಬಾಪೂಜಿ ಸೇವಾ ಕೇಂದ್ರ, ಸೇವಾ ಸಿಂಧು ಕೇಂದ್ರಗಳಲ್ಲಿ ಹಾಗೂ ಯಾವುದಾದರೂ ಅಂತರ್ಜಾಲ ಕೇಂದ್ರಗಳಲ್ಲಿ ಸಾರ್ವಜನಿಕರು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳ ಸ್ಥಿತಿಗತಿಯನ್ನು ಆನ್‌ಲೈನ್‌ ಮೂಲಕವೇ ಪರಿಶೀಲಿಸಿಕೊಳ್ಳ ಬಹುದಾಗಿದ್ದು, ಪರಿಹಾರ ಧನ ಬಿಡುಗಡೆ ವಿವರ ಇತ್ಯಾದಿಗಳನ್ನು ಮೊಬೈಲ್‌ ಸಂದೇಶದ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇ-ಆಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್‌ ಚಾವ್ಲಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್‌ ಉಪಸ್ಥಿತರಿದ್ದರು.

ಇಂಟರ್‌ನೆಟ್‌ ಲಿಂಕ್‌

ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ಕಚೇರಿಗೆ ವಿದ್ಯುನ್ಮಾನ ಅರ್ಜಿ ಸಲ್ಲಿಸಲು ಅಂತರ್ಜಾಲ ಕೊಂಡಿ: Cmrf.karnataka.gov.in ಹಾಗೂ http://sevadsindhu.karnataka.gov.in ಸಂಪರ್ಕಿಸಬಹುದು.