ಮುಡಾ ಹಗರಣ ಪ್ರಕರಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣಗೆ ಲೋಕಾಯುಕ್ತ ನೋಟಿಸ್ ನೀಡಿದ್ದು, ಇದಕ್ಕೆ ಸ್ನೇಹಮಯಿ ಕೃಷ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖಾಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಮೈಸೂರು (ಫೆ.20): ಮುಡಾ ಹಗರಣ ಪ್ರಕರಣ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ನಾನು ಮಾಡಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರ ಇಲ್ಲವೆಂದು ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ. ಹಾಗಾದರೆ ನಾನು ಕಸ ಕೊಟ್ಟಿದ್ದೀನಾ ಎಂದು ಪ್ರಶ್ನಿಸಿದರು.

ಲೋಕಾಯುಕ್ತ ಅಧಿಕಾರಿಗಳು ನನಗೆ ಮಾತ್ರ ಮೋಸ ಮಾಡಿಲ್ಲ. ದೇಶದ ನ್ಯಾಯಾಲಯಕ್ಕೇ ಮೋಸ ಮಾಡಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇನೆ. ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್ ಅನ್ನು ಸಂಪೂರ್ಣವಾಗಿ ನೋಡಿದ ಬಳಿಕ ಮುಂದೇನು ಮಾಡಬೇಕೆಂದು ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಪತ್ನಿ, ಭಾಮೈದಗೆ ಲೋಕಾಯುಕ್ತ ಕ್ಲೀನ್‌ಚಿಟ್, 'ಮುಡಾ'ದಲ್ಲಿ ಶುದ್ಧರಾಮಯ್ಯ! ಇಂದು ಕೋರ್ಟ್‌ಗೆ ವರದಿ, ಮುಂದೇನು?

ನಾನು ನೀಡಿರುವ ಸಾಕ್ಷ್ಯಾಧಾರಗಳು ತನಿಖೆಗೆ ಯೋಗ್ಯವಾಗಿಲ್ಲ ಎಂದಿರುವ ಲೋಕಾಯುಕ್ತ ಅಧಿಕಾರಿಗೆ ತನಿಖಾಧಿಕಾರಿಯಾಗಿ ತನಿಖೆ ನಡೆಸುವ ಯೋಗ್ಯತೆಯೇ ಇಲ್ಲ. ಲೋಕಾಯುಕ್ತ ನೋಟಿಸ್ ನೀಡಿರುವುದರಿಂದ ನಾನು ಎದೆಗುಂದುವುದಿಲ್ಲ. ನನ್ನ ಹೋರಾಟ ಹತ್ತಿಕ್ಕುವುದಕ್ಕಿಂತ ಆರೋಪಿಗಳ ರಕ್ಷಣೆ ಮಾಡುವುದೇ ಲೋಕಾಯುಕ್ತ ಅಧಿಕಾರಿಗಳ ಉದ್ದೇಶವಾಗಿದೆ. ನನ್ನ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನಾನು ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.