ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ಆದ್ರೂ ಸಮಾಧಾನವಾಗದ ಸ್ನೇಹಮಯಿ ಕೃಷ್ಣ: ಸಿಬಿಐಗೆ ವಹಿಸಲು ಅರ್ಜಿ ಸಲ್ಲಿಕೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ನಿವೇಶನ ಪಡೆದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಚಾಮರಾಜನಗರ (ಸೆ.27): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆಂಬ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಾಗ್ತಿದ್ದಂತೆ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸೋಮವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿದ ಬೆನ್ನಲ್ಲಿಯೇ ಮಾಧ್ಯಮಳೊಂದಿಗೆ ಮಾತನಾಡಿದ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು, ರಾಜ್ಯದ ಮೇಲಾಧಿಕಾರಿಗಳಿಂದ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತ ಎಸ್‌ಪಿ ಎಫ್ಐಆರ್ ದಾಖಲಿಸಿದ್ದಾರೆ. ಇದರಿಂದ ನಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಪ್ರಾಮಾಣಿಕ ಹೋರಾಟಕ್ಕೆ ಜಯ ಸಿಗುತ್ತೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಒಬ್ಬ ಸಾಮಾನ್ಯ ಪ್ರಜೆ ರಾಜ್ಯದ ಭ್ರಷ್ಟ ಮುಖ್ಯಮಂತ್ರಿ ವಿರುದ್ದ ಹೋರಾಟ ಮಾಡಿ, ಶಿಕ್ಷೆ ಕೊಡಿಸಬಹುದು ಎಂಬುದಕ್ಕೆ ಇದು ಉದಾಹರಣೆ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: ಮುಡಾ ಹಗರಣದಲ್ಲಿ ಎಫ್ಐಆರ್: ಸಿಎಂ ಸಿದ್ದರಾಮಯ್ಯ ಎ1, ಪಾವರ್ತಿ ಎ2 ಮತ್ತು ಭಾಮೈದ ಮಲ್ಲಿಕಾರ್ಜುನ ಎ3
ಈ ದೇಶದ ಜನತೆ ಇಂತಹ ಭ್ರಷ್ಟಾಚಾರ ಮಾಡುವಂತಹ ಅಕ್ರಮಗಳನ್ನ ತಡೆಗಟ್ಟಬೇಕು. ಎಫ್ ಐ ಆರ್ ದಾಖಲಾದರೂ ಲೋಕಾಯುಕ್ತ ಎಸ್.ಪಿ ಉದೇಶ್ ವಿರುದ್ದ ಕಾನೂನು ಹೋರಾಟ ಮಾಡುವುದು ನಿಶ್ಚಿತ. ಎಸ್.ಪಿ ನ್ಯಾಯಾಲಯದ ಆದೇಶಕ್ಕೆ ಪೂರಕವಾಗಿ ನಡೆದು ಕೊಂಡಿಲ್ಲ. ಮೇಲಾಧಿಕಾರಿ ಒತ್ತಡ ಹಾಗೂ ಆದೇಶದ ಬಳಿಕ ಈಗ ಎಫ್ ಐ ಆರ್ ಮಾಡಿದ್ದಾರೆ. ಅವರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಅದಕ್ಕೆ ಶಿಕ್ಷೆ ಕೊಡಿಸುವುದು ಖಚಿತ. ಈ ಪ್ರಕರಣವನ್ನ ಸಿಬಿಐಗೆ ಕೊಡಿಸುತ್ತೇನೆ ಎಂದು ಹೇಳಿದರು.
ಇನ್ನು ಒಂದು ಮೊಬೈಲ್ ಫೋನ್ ಗೆ ಹೆದರಿಕೊಳ್ಳುವಂತಹ ಲೋಕಾಯುಕ್ತ ಎಸ್.ಪಿ ಉದೇಶ್ ಪ್ರಮಾಣಿಕ ತನಿಖೆ ನಡೆಸುತ್ತಾರಾ.? ಪ್ರಕರಣ ಸಿಬಿಐಗೆ ಹೋಗುವ ವರ್ಗೂ ನಿರಂತರ ಹೋರಾಟ ಮಾಡಲಾಗುವುದು. ಸೋಮವಾರ ಹೈ ಕೋರ್ಟ್ ನಲ್ಲಿ ನಮ್ಮ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಈ ಹಿಂದೆ ತನಿಖಾ ಸಂಸ್ಥೆಗಳಿಗೆ ನ್ಯಾಯಾಲಯ ಛಿಮಾರಿ ಹಾಕಿದೆ. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಕೊಡಲ್ಲವೆಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಆದರೆ, ಸಿಎಂ ಒಂದೊಂದು ಸಮಯಕ್ಕೆ ಒಂದೊಂದು ರೀತಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ: ಸುಳಿವು ಕೊಟ್ಟ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ!
ಇದೇ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಬೇರೆಯವರು ಸಿಎಂ ಆಗಿದ್ದಾರೆ, ಬೇರೆಯವರ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ, ಈಗ ಸಿಎಂ ಆಗಿರುವ ತಮ್ಮ ವಿರುದ್ದ ದೂರು ದಾಖಲಾದಾಗ ಉಲ್ಟಾ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಲಿ ಎಂದು ಚಾಮರಾಜನಗರದಲ್ಲಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.