ಬೆಂಗಳೂರು (ಸೆ.27): ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕವಾಗಿ ಆರೋಪ ಬಂದರೂ ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಇವತ್ತು ಸಿಎಂ‌ ಆಗಿರ್ತಾರೆ, ನಾಳೆ ಇರಲ್ಲ, ಪಕ್ಷ ಮಾತ್ರ ಮುಂದುವರಿಯುತ್ತದೆ. ಪಕ್ಷದ ಮುಂದೆ ಯಾರೋ ದೊಡ್ಡವರಲ್ಲ ಎಂಬ ಮಾತಿನ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತಕ್ಕೆ ತನಿಖೆ ವಿಚಾರದ ಬಗ್ಗೆ ಮಾತನಾಡಿದ ಅವರು, ಗೋದ್ರಾ ಘಟನೆ ನಡೆದಾಗ ಮೋದಿ ರಾಜೀನಾಮೆ ಕೊಟ್ಟರಾ? ಆ ಕಾಲದಲ್ಲಿ ಮೋದಿ, ಅಮಿತ್ ಶಾ ವಿರುದ್ದ ಸಾಕಷ್ಟು ಕೇಸ್ ದಾಖಲಾಗಿದ್ದವು. ವೈಯಕ್ತಿಕವಾಗಿ ಯಾರನ್ನೂ ಟಾರ್ಗೆಟ್ ಮಾಡಬಾರದು. ಅವರ ಇಮೇಜ್ ಡ್ಯಾಮೇಜ್ ಮಾಡೋ ಯತ್ನ ಮಾಡಬಾರದು. ಅವರ ಜೊತೆ ಪಕ್ಷಕ್ಕೂ ಡ್ಯಾಮೇಜ್ ಆಗುತ್ತದೆ. ನಿಮ್ಮ ಇಂಟ್ರಸ್ಟ್ ಇರೋದು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡೋದು, ಆದ್ರೆ ವೈಯಕ್ತಿಕ ಅಲ್ಲ. ಆದರೆ, ಸಿದ್ದರಾಮಯ್ಯ ಸಿಎಂ‌ ಇವತ್ತು ಇರ್ತಾರೆ, ನಾಳೆ ಇರಲ್ಲ, ಪಕ್ಷ ಮಾತ್ರ ಮುಂದುವರಿಯುತ್ತದೆ ಎಂದು ಹೇಳಿದರು.

ಗೋಧ್ರಾ ಪ್ರಕರಣದಲ್ಲಿ ನೀವು ರಾಜೀನಾಮೆ ಕೊಟ್ರಾ? ಪ್ರಧಾನಿ ಮೋದಿಗೆ ಸಿಎಂ ತಿರುಗೇಟು

ಕಾಂಗ್ರೆಸ್ ಪಕ್ಷವನ್ನ ಮುಗಿಸುವ ಹಾಗೂ ಪಕ್ಷದ ಮತಗಳನ್ನ ಡಿಸ್ಟ್ರಬ್ ಮಾಡೋದಿದೆ. ಹೀಗಾಗಿ ಇದನ್ನ ಬಿಜೆಪಿಯವರು ಮಾಡುತ್ತಿದ್ದಾರೆ. ಇರಲಿ, ಕಾನೂನು ಅದರ ಕ್ರಮ ತೆಗೆದುಕೊಳ್ಳುತ್ತದೆ. ಮುಂದೆ ಅಂತಹ ಸ್ಥಿತಿ ಬಂದ್ರೆ ಕ್ರಮ ತೆಗೆದುಕೊಳ್ಳುವ ಚಿಂತನೆ ಮಾಡುತ್ತೇವೆ. ಕಾನೂನು ಅದರ ಕ್ರಮ ತೆಗೆದುಕೊಳ್ಳುತ್ತದೆ. ಪ್ರತಿ ದಿನ ಮುಡಾ, ಮೂಡ ಅಂತ ಕೇಳ್ತಾನೆ ಇದೀವಿ. ವಿಪಕ್ಷಗಳ ನಾಯಕರು ಸಣ್ಣ ವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡ ಸಮಸ್ಯೆ ಎಂಬಂತೆ ಇಶ್ಯು ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಮೇಲೆ ಎಫ್ ಐ ಆರ್ ದಾಖಲಾದ ಮೇಲೆ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಜೊತೆಗೆ ನಿಲ್ಲುತ್ತಾ ಅನ್ನೋದು ಹೈಪೊಥಿಟಿಕಲ್‌ ಪ್ರಶ್ನೆ. ನಾವು ಅವರ ಜೊತೆ ನಿಂತಿದ್ದೇವೆ, ಅವರಿಗೆ ಬೆಂಬಲ ಕೊಟ್ಟಿದ್ದೇವೆ. ಯಾಕೆಂದರೆ ಅವರು ಪಕ್ಷವನ್ನು ಪ್ರತಿನಿಧಿಸುತ್ತಾರೆ ಅವರು ವೈಯುಕ್ತಿಕ ಅಲ್ಲ. ಮೋದಿ‌ ದಲಿತ ನಾಯಕ ಹಾಗೂ ದಲಿತ ಫಂಡ್ ಬಗ್ಗೆ ಹರಿಯಾಣದಲ್ಲಿ ಮಾತನಾಡಿದಕ್ಕೆ ಹರಿಯಾಣದಲ್ಲೆ ಉತ್ತರ ಕೊಡುತ್ತೇವೆ. ಇನ್ನು ಸಿಬಿಐಗೆ ಮುಕ್ತ ತನಿಖೆ ಅವಕಾಶ ವಾಪಸ್ ಪಡೆದಿದ್ದು ಇದೇ ಮೊದಲಲ್ಲ‌. ದೇವರಾಜ್ ಅರಸು ಕಾಲದಲ್ಲೂ ಹೀಗೆ ಮಾಡಲಾಗಿತ್ತು ಎಂದು ಸಮಜಾಯಿಸಿ ನೀಡಿದರು.

ನಾನ್ಯಾಕೆ ರಾಜೀನಾಮೆ ಕೊಡಲಿ, ನಾನು ಯಾವ ತಪ್ಪು ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

ನಾನೇ ಗೃಹ ಸಚಿವನಾಗಿದ್ದಾಗ ವೀರಪ್ಪನ್ ಪ್ರಕರಣ, ತೆಲಗಿ ಪ್ರಕರಣ ಹಾಗೂ ಕೋಲಾರದ ಒಂದು ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದರು. ಆದರೆ, ಅವರು ತನಿಖೆ ಮಾಡಲಿಲ್ಲ. ವೀರಪ್ಪನ್ ನೂರಾರು ಜನರನ್ನ ಕೊಂದನು. ತೆಲಗಿ ಸಾವಿರಾರು ಕೋಟಿ ರೂ. ಸರ್ಕಾರದ ಹಣ ಬಳಸಿಕೊಂಡನು. ಆಗ ಸಿಬಿಐ ಅದನ್ನ ತನಿಖೆ ಮಾಡಲಿಲ್ಲ. ಇನ್ನು ರಾಜಭವನ ಹಾಗೂ ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಬಗ್ಗೆ ನಾನು ಮಾತನಾಡಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.