ಬೆಂಗಳೂರು[ಫೆ.17]: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವೀರಯೋಧ ಎಚ್‌.ಗುರು ಅವರ ಚಿತಾಭಸ್ಮವನ್ನು ಘಟನೆ ನಡೆದು ಒಂದು ವರ್ಷವಾದರೂ ವಿಸರ್ಜನೆ ಮಾಡದಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಎಂ.ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಎಸ್‌.ಎಂ.ಕೃಷ್ಣ, ವರ್ಷವಾದರೂ ವೀರಯೋಧ ಗುರುವಿನ ಚಿತಾಭಸ್ಮವನ್ನು ಯಾವ ಕಾರಣಕ್ಕಾಗಿ ವಿಸರ್ಜಿಸಿಲ್ಲ ಎಂಬುದನ್ನು ಪತ್ತೆ ಹಚ್ಚಿ ಶಾಸೊತ್ರೕಕ್ತವಾಗಿ ವಿಸರ್ಜನಾ ಕಾರ್ಯ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ಕಣ್ಣೀರಿಡುತ್ತಲೇ ಹುತಾತ್ಮಯೋಧ ಗುರುವಿನ ಸಮಾಧಿಗೆ ಪೂಜೆ ಮಾಡಿದ ಪತ್ನಿ

ಚಿತಾಭಸ್ಮ ವಿಸರ್ಜಿಸದೆ, ಅವರ ಸ್ಮಾರಕ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಪುಲ್ವಾಮಾ ದಾಳಿ ಅತ್ಯಂತ ಘೋರ ಕೃತ್ಯವಾಗಿದೆ. ದಾಳಿಗೆ ಇಡೀ ದೇಶವೇ ಕಂಬನಿ ಮಿಡಿದಿತ್ತು. ದಾಳಿಯಲ್ಲಿ ವೀರ ಮರಣವನ್ನಪ್ಪಿದ ರಾಜ್ಯದ ಯೋಧನ ಸ್ಮಾರಕ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಆಡಳಿತ ವರ್ಗವು ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ಅತ್ಯಂತ ಖಂಡನೀಯ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯೋಧ ಗುರು ಅವರ ಬಲಿದಾನ ಮುಂದಿನ ಪೀಳಿಗೆಗೆ ಆದರ್ಶವಾಗಬೇಕಾಗಿದೆ. ಅದನ್ನು ಕಾರ್ಯರೂಪಕ್ಕೆ ಇಳಿಸಬೇಕಾದ ಅಗತ್ಯ ಇದೆ. ಇಂತಹ ವಿಚಾರದಲ್ಲಿ ಸರ್ಕಾರ ಮತ್ತು ಆಡಳಿತವು ತುರ್ತು ಗಮನಹರಿಸುವುದು ಅತ್ಯವಶ್ಯಕವಿದೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಸ್ಥಾಪನೆಗೊಂಡ ಕಾವೇರಿ ನೀರಾವರಿ ನಿಗಮದ ಮೂಲಕ ತುರ್ತಾಗಿ ವೀರಯೋಧರ ಸ್ಮಾರಕ ನಿರ್ಮಾಣಕ್ಕೆ ಕ್ರಮ ವಹಿಸಿ, ಯೋಧನ ಬಲಿದಾನವನ್ನು ನೆನೆಯುವಂತಹ ಕಾರ್ಯವಾಗಬೇಕು.

ಗುರು ಅವರು ಹುತಾತ್ಮರಾಗಿ ಒಂದು ವರ್ಷವಾದರೂ ವಿಸರ್ಜನೆಯಾಗದೆ ನಿರ್ಲಕ್ಷ್ಯಕ್ಕೊಳಗಾಗಿರುವ ವೀರಯೋಧ ಗುರುವಿನ ಚಿತಾಭಸ್ಮ ಯಾವ ಕಾರಣಕ್ಕೆ ವಿಸರ್ಜನೆಯಾಗಿಲ್ಲ ಎಂದು ಪತ್ತೆಹಚ್ಚಿ ಶಾಸೊತ್ರೕಕ್ತವಾಗಿ ವಿಸರ್ಜನಾ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಕ್ತ ಸೂಚನೆ ನೀಡಬೇಕು. ಈ ಮೂಲಕ ವೀರಯೋಧನ ಆತ್ಮಕ್ಕೆ ಶಾಂತಿ ಮತ್ತು ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಹುತಾತ್ಮ ಯೋಧ ಗುರು ಮೊದಲ ವರ್ಷದ ಪುಣ್ಯಸ್ಮರಣೆ