Asianet Suvarna News Asianet Suvarna News

ಬಿಎಸ್‌ವೈಗೆ ಎದುರಾಯ್ತು ಹೊಸ ಸಂಕಷ್ಟ

ಬಿಜೆಪಿ ಮುಖಂಡ ಬಿ.ಎಸ್ ಯಡಿಯೂರಪ್ಪಗೆ ಇದೀಘ ಹೊಸ ಸಂಕಷ್ಟ ಎದುರಾಗಿದೆ. ಬಿಎಸ್ ವೈ ಆಡಿಯೋ ಸಂಬಂಧ ಇದೀಗ ಎಸ್ ಐಟಿ ತನಿಖೆ ನಡೆಸಲಾಗುತ್ತಿದೆ.

SIT investigation Against BS Yeddyurappa Over operation Kamala Audio
Author
Bengaluru, First Published Feb 12, 2019, 7:26 AM IST

ಬೆಂಗಳೂರು :  ಶಾಸಕರ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸುವ ಸಂಬಂಧ ವಿಧಾನಸಭೆಯ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರಿಗೆ 50 ಕೋಟಿ ರು. ನೀಡಲಾಗಿದೆ ಎಂಬ ಆರೋಪದ ಆಡಿಯೋ ಸಿ.ಡಿ. ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಲಿದೆ. ಈ ಬಗ್ಗೆ ಸ್ವತಃ ಸ್ಪೀಕರ್‌ ಅವರೇ ರೂಲಿಂಗ್‌ ನೀಡಿದ್ದು, ತನಿಖೆಗೆ 15 ದಿನಗಳ ಗಡುವನ್ನೂ ವಿಧಿಸಿದ್ದಾರೆ.

ಆದರೆ, ಸ್ಪೀಕರ್‌ ರಮೇಶ್‌ಕುಮಾರ್‌ ಅವರ ಈ ಆದೇಶಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳೇ ಈ ಆಡಿಯೋ ಸಿ.ಡಿ. ಮಾಡಿಸಿದ್ದಾರೆ. ಹೀಗಿರುವಾಗ ಅವರ ಅಧೀನದಲ್ಲಿರುವ ಸಂಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲು ಸಾಧ್ಯವಿಲ್ಲ. ನ್ಯಾಯಾಂಗ ತನಿಖೆ ಅಥವಾ ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿದೆ.

ಸೋಮವಾರದ ಅಧಿವೇಶನದ ಕಲಾಪದಲ್ಲಿ ಬೆಳಗ್ಗೆಯಿಂದ ಭೋಜನ ವಿರಾಮದವರೆಗೆ ನಡೆದ ಚರ್ಚೆಯ ನಂತರ ಎಸ್‌ಐಟಿಗೆ ವಹಿಸುವ ತೀರ್ಮಾನವನ್ನು ಸ್ಪೀಕರ್‌ ಪ್ರಕಟಿಸಿದರೆ, ಭೋಜನ ವಿರಾಮದ ನಂತರ ನಡೆದ ಕಲಾಪದಲ್ಲಿ ಬಿಜೆಪಿ ಅದನ್ನು ವಿರೋಧಿಸಿದ್ದರಿಂದ ಬೇರೆ ಯಾವುದೇ ಕಲಾಪ ನಡೆಯಲಿಲ್ಲ. ಬಿಜೆಪಿ ತನ್ನ ನಿಲುವಿನಿಂದ ಹಿಂದೆ ಸರಿಯದೇ ಇದ್ದುದರಿಂದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಬೇಕಾಯಿತು. ಮಂಗಳವಾರವೂ ಬಿಜೆಪಿ ತನ್ನ ನಿಲುವನ್ನೇ ಪ್ರತಿಪಾದಿಸಲು ನಿರ್ಧರಿಸಿದೆ.

ಎರಡು ದಿನಗಳ ರಜೆಯ ನಂತರ ಸೋಮವಾರ ವಿಧಾನಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್‌ ರಮೇಶ್‌ಕುಮಾರ್‌ ತಾವೇ ಸ್ವಯಂ ಪ್ರೇರಣೆಯಿಂದ ವಿಷಯ ಪ್ರಸ್ತಾಪಿಸಿ ತಮ್ಮ ನೋವು ಮತ್ತು ಸಂಕಟವನ್ನು ಸದನದ ಮುಂದಿಟ್ಟರು. ಒಂದು ಹಂತದಲ್ಲಿ ಆರೋಪದಿಂದ ಬೇಸತ್ತು ತಾವು ಈ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಚಿಂತನೆ ಮಾಡಿದ್ದಾಗಿಯೂ ಹೇಳಿದರು.

ನಾನು ಆ ಧ್ವನಿ ಸುರುಳಿಯನ್ನು ಕೇಳಿದ್ದೇನೆ. ಅದರಲ್ಲಿ ಮಾತನಾಡಿದವರು ಈ ಸದನದ ಸದಸ್ಯರು ಎಂಬುದು ಮನವರಿಕೆಯಾಗಿದೆ. ಆದರೆ, ಯಾರು ಎಂಬುದು ಗೊತ್ತಾಗುವುದಿಲ್ಲ. ಒಂದೋ ಆರೋಪ ಮಾಡಿದವರು ರಾಜಕೀಯದಿಂದ ದೂರ ಉಳಿಯಬೇಕು. ಇಲ್ಲವೇ ನಾನು ರಾಜಕೀಯದಿಂದ ದೂರ ಹೋಗಬೇಕು. ಆದರೆ, ಯಾವುದೇ ಕಾರಣಕ್ಕೂ ನಾನು ಈ ಆರೋಪದ ಕಸದ ಬುಟ್ಟಿಯನ್ನು ಹೊತ್ತುಕೊಂಡು ಹೋಗಲು ಸಾಧ್ಯವಿಲ್ಲ ಎಂದು ತೀಕ್ಷ$್ಣವಾಗಿ ಹೇಳಿದರು.

ನಂತರ ಮಾತನಾಡಿದ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ಸದಸ್ಯರು ತರೇಹವಾರಿ ಅಭಿಪ್ರಾಯಗಳನ್ನು ಮಂಡಿಸಿದರು. ಆದರೆ, ಎಲ್ಲರೂ ಸ್ಪೀಕರ್‌ ರಮೇಶ್‌ಕುಮಾರ್‌ ಅವರಲ್ಲಿ ಅಪರಿಮಿತ ವಿಶ್ವಾಸವನ್ನು ತೋರಿದರು.

ಅಂತಿಮ ಹಂತದಲ್ಲಿ ಮಾತನಾಡಿದ ಸ್ಪೀಕರ್‌ ರಮೇಶ್‌ಕುಮಾರ್‌, ನಾನು ಈ ಘಟನೆಯಿಂದ ವಿಚಲಿತನಾಗಿದ್ದೇನೆ. ಇದರಿಂದ ಬಂಧಮುಕ್ತನಾಗಬೇಕಾದರೆ ತನಿಖೆ ಆಗಲೇಬೇಕು. ಹೀಗಾಗಿ, ಸರ್ಕಾರದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ 15 ದಿನಗಳೊಳಗಾಗಿ ನನಗೆ ನೆಮ್ಮದಿ ಕೊಡಬೇಕು. ಇದನ್ನು ನಾನು ಸೂಚನೆ ಎಂಬುದಾಗಿ ಹೇಳುವುದಿಲ್ಲ. ನನ್ನ ವಿರುದ್ಧವೇ ಆರೋಪ ಕೇಳಿಬಂದಿರುವುದರಿಂದ ಸಲಹೆ ಎಂಬರ್ಥದಲ್ಲಿ ಹೇಳುತ್ತೇನೆ ಎಂದರು.

ಸ್ಪೀಕರ್‌ ಹೇಳಿಕೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶಾಸಕರನ್ನು ಸೆಳೆಯುವ ಕುರಿತ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವುದಾಗಿ ಸದನಕ್ಕೆ ತಿಳಿಸಿದರು.

ಆಗ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ಸ್ಪೀಕರ್‌ ವಿರುದ್ಧದ ಆರೋಪದ ಆಡಿಯೋ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಬಾರದು. ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಆದರೆ ಅದಕ್ಕೆ ಒಪ್ಪದ ಸ್ಪೀಕರ್‌, ನಾನು ಹೇಳುವುದನ್ನು ಹೇಳಿದ್ದೇನೆ ಎಂದು ಸದನದ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

ಭೋಜನ ವಿರಾಮದ ನಂತರ ಕಲಾಪ ಆರಂಭವಾದಾಗಲೂ ಬಿಜೆಪಿ ಸದಸ್ಯರು ತಮ್ಮ ವಾದವನ್ನು ಮತ್ತೆ ಮಂಡಿಸಿದರು. ಅಲ್ಲದೆ, ಸರ್ಕಾರದ ಅಡಿಯಲ್ಲಿ ಎಸ್‌ಐಟಿ ಬರುವುದರಿಂದ ನಿಷ್ಪಕ್ಷಪಾತ ತನಿಖೆಯ ವಿಶ್ವಾಸ ನಮಗಿಲ್ಲ. ಮುಖ್ಯಮಂತ್ರಿಗಳ ಅಡಿ ಬರುವ ಎಸ್‌ಐಟಿ ಕೆಳಗಡೆ ನಮ್ಮನ್ನು ಹಾಕಬೇಡಿ. ನಮ್ಮ ತಲೆ ಕೊಡಲು ನಾವು ಸಿದ್ಧರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ತನಿಖೆ ನಡೆಸಿದರೆ ಸ್ಪೀಕರ್‌ ಮೇಲಿನ ಆರೋಪದ ಬಗ್ಗೆ ಮಾತ್ರ ತನಿಖೆಯಾಗಬೇಕು. ಆಡಿಯೋದಲ್ಲಿರುವ ಇತರೆ ವಿಚಾರ ತನಿಖೆ ಮಾಡಬಾರದು ಎಂದು ಒತ್ತಾಯಿಸಿದರು.

ಬಿಜೆಪಿ ಶಾಸಕರ ವಾದಕ್ಕೆ ಸ್ಪೀಕರ್‌ ರಮೇಶ್‌ ಕುಮಾರ್‌ ಒಪ್ಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ತೀವ್ರ ಗದ್ದಲ ಸೃಷ್ಟಿಸಿದ ಘಟನೆಗೂ ಸದನ ಸಾಕ್ಷಿಯಾಯಿತು. ಇದೇ ಕಾರಣಕ್ಕೆ ಒಂದು ಬಾರಿ ಮುಂದೂಡಲ್ಪಟ್ಟಿದ್ದ ಸದನ ಪುನರ್‌ ಆರಂಭದ ಬಳಿಕವೂ ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಬಿಜೆಪಿ ಆಕ್ಷೇಪವೇನು?

- ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಇಡೀ ಘಟನೆಗೆ ಪ್ರೇರಣೆಯಾಗಿರುವುದರಿಂದ ಅವರ ಅಧೀನದಲ್ಲಿರುವ ಸಂಸ್ಥೆಯಿಂದ ನ್ಯಾಯಯುತ ತನಿಖೆ ನಿರೀಕ್ಷಿಸುವುದು ಅಸಾಧ್ಯ

- ಸರ್ಕಾರದಿಂದ ರಚನೆಯಾಗುವ ಎಸ್‌ಐಟಿ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಅವರ ವಿಚಾರಣೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಸಾಧ್ಯವಿಲ್ಲ

- ನಿಷ್ಪಕ್ಷ ತನಿಖೆ ನಡೆಯಬೇಕಾದಲ್ಲಿ ಪ್ರಕರಣದ ಕುರಿತು ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ. ಇಲ್ಲದಿದ್ದರೆ ಸದನ ಸಮಿತಿಯಿಂದಲಾದರೂ ತನಿಖೆ ಆಗಲಿ

- ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಿಂದ ತನಿಖೆ ನಡೆದುದೇ ಆದ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರನ್ನು ಬಲಿಪಶು ಮಾಡಿ ಸಿಲುಕಿಸುವ ಅನುಮಾನ ದಟ್ಟವಾಗಿದೆ

- ವಿಧಾನಸಭೆಯಲ್ಲಿ ಚರ್ಚೆ ನಡೆದಿರುವುದು ಕೇವಲ ಸ್ಪೀಕರ್‌ ವಿರುದ್ಧ ಕೇಳಿಬಂದಿರುವ 50 ಕೋಟಿ ರು.ಗಳ ಆರೋಪ ಬಗ್ಗೆ ಮಾತ್ರ. ಹೀಗಾಗಿ, ಆ ಬಗ್ಗೆ ಮಾತ್ರ ತನಿಖೆ ಆಗಬೇಕು

- ಒಟ್ಟಾರೆ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ತನಿಖೆ ನಡೆಸಬೇಕಾದಲ್ಲಿ ಅವುಗಳ ಬಗ್ಗೆಯೂ ವಿಧಾನಸಭೆಯ ಕಲಾಪದಲ್ಲಿ ಪ್ರಸ್ತಾಪಿಸಲು ಮುಕ್ತ ಅವಕಾಶ ಕೊಡಬೇಕು


ಕಾಂಗ್ರೆಸ್‌ ವಾದವೇನು?

- ಇದು ಯಾರೋ ಹಾದಿ​ಹೋ​ಕರು ಮಾಡಿದ ಆರೋ​ಪ​ವಲ್ಲ. ಬದ​ಲಾಗಿ, ಸದ​ನದಲ್ಲಿ ಪ್ರಮುಖ ಸ್ಥಾನ ಅಲಂಕ​ರಿ​ಸಿ​ರು​ವ​ವರೇ ವಿಧಾನಸಭಾ ಅಧ್ಯಕ್ಷರ ಮೇಲೆ ಆರೋಪ ಮಾಡಿ​ದಂತಿದೆ

- ಸ್ಪೀಕರ್‌ 50 ಕೋಟಿ ರು.ಗೆ ಬುಕ್‌ ಆಗಿದ್ದಾರೆ ಎಂಬ ಚರ್ಚೆ ದೇಶಾ​ದ್ಯಂತ ನಡೆ​ದಿದೆ. ದೇಶದ ಜನರ ಮುಂದೆ ಕರ್ನಾ​ಟ​ಕದ ಸ್ಪೀಕರ್‌ ಘನತೆ ಎತ್ತಿ ಹಿಡಿ​ಯಲು ತನಿಖೆ ಆಗಬೇಕು

- ಅತೃಪ್ತರನ್ನು ಸೆಳೆವ ಆಪರೇಷನ್‌ನಿಂದಾಗಿ ಶಾಸ​ಕರ ಬಗ್ಗೆ ಅನು​ಮಾನ ಬರು​ವಂತಾಗಿದೆ. ಈಗ ಸ್ಪೀಕರ್‌ ಬಗ್ಗೆಯೂ ಆರೋಪ ಬಂದಿದೆ. ಸುಮ್ಮ​ನಿ​ದ್ದರೆ ವ್ಯವ​ಸ್ಥೆಗೇ ಕಳಂಕ ತಟ್ಟ​ಬ​ಹು​ದು

- ವಿಧಾನಸಭಾ ಸದ​ಸ್ಯನ ಬಗ್ಗೆ ಆರೋಪ ಬಂದರೆ ಅದು ವೈಯ​ಕ್ತಿಕ. ಸ್ಪೀಕರ್‌ ಬಗ್ಗೆ ಬಂದರೆ ಇಡೀ ಸದ​ನದ ಮೇಲೆ ಆರೋಪ ಬಂದಂತೆ. ಸದ​ನದ ಗೌರವ ಕಾಪಾ​ಡಲು ತನಿ​ಖೆ​ ಆಗ​ಬೇ​ಕು

- ಸ್ಪೀಕರ್‌ ಕುರಿತಾಗಿ 50 ಕೋಟಿ ರು. ಲಂಚಾರೋಪ ಮಾಡಿರುವ ಬಗ್ಗೆ ಗಂಭೀರ ಸ್ವರೂ​ಪದ ತನಿಖೆ ಮಾಡ​ದಿ​ದ್ದರೆ ಪ್ರಕ​ರಣ ಮುಚ್ಚಿಹಾಕಿ​ದ ಗುಮಾನಿ ಸಾರ್ವ​ಜ​ನಿ​ಕರಿಗೆ ಬರ​ಬ​ಹು​ದು


ಸಮಗ್ರ ಬೆಳವಣಿಗೆ ತನಿಖೆ

ಶಾಸಕರ ಗೌರವವನ್ನು ಉಳಿಸಬೇಕಾಗಿದೆ. ಕಳೆದ ಹಲವು ದಿನಗಳಿಂದ ತರೇಹವಾರಿ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ. ಸರ್ಕಾರ ರಚನೆ ಆದಾಗಿನಿಂದಲೂ ಈ ರೀತಿಯ ಬೆಳವಣಿಗೆಗಳು ನಡೆಯುತ್ತಲೇ ಇವೆ. ಇದಕ್ಕೆಲ್ಲ ಇತಿಶ್ರೀ ಹಾಡುವ ಉದ್ದೇಶದಿಂದ ಇದರ ಮೂಲ ಹೊರತರಬೇಕಾಗಿದೆ. ಎಸ್‌ಐಟಿ ರಚಿಸಿ ಸಮಗ್ರ ತನಿಖೆ ನಡೆಸಲಾಗುವುದು.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ


ಎಚ್‌ಡಿಕೆಯೇ ಆರೋಪಿ

ಸಿಎಂ ತಮ್ಮ ಕೈಕೆಳಗೆ ಇರುವ ಸಂಸ್ಥೆಯಿಂದ ತನಿಖೆ ನಡೆಸುವುದನ್ನು ನಾಡಿನ ಜನತೆ ಒಪ್ಪುವುದಿಲ್ಲ. ನಾವು ಓಡಿ ಹೋಗುವುದಿಲ್ಲ. ಬಿಜೆಪಿಯೂ ಸಹ ತನಿಖೆಗೆ ಒತ್ತಾಯ ಮಾಡುತ್ತಿದೆ. ಸರ್ಕಾರ ಅಪರಾಧ ಸ್ಥಾನದಲ್ಲಿದೆ. ಕುಮಾರಸ್ವಾಮಿ ಮೊದಲನೇ ಆರೋಪಿಯಾಗಿದ್ದಾರೆ. ಹೀಗಾಗಿ ನ್ಯಾಯಾಂಗ ಅಥವಾ ಸದನ ಸಮಿತಿಯಿಂದ ತನಿಖೆ ನಡೆಸಬೇಕು.

- ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

Follow Us:
Download App:
  • android
  • ios