Asianet Suvarna News Asianet Suvarna News

ಸರ್ಕಾರ, ರಾಜ್ಯಪಾಲರ ಮಧ್ಯೆ ಶೀತಲ ಸಮರ: ಗೌರ್ನರ್‌ ಸಿಬ್ಬಂದಿ ತನಿಖೆಗೆ ಅನುಮತಿ ಕೇಳಿದ ಎಸ್‌ಐಟಿ

ರಾಜಭವನದ ಸಚಿವಾಲಯದಿಂದಲೇ ಮಾಹಿತಿ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳ ತನಿಖೆ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅನುಮತಿ ಕೋರಿ ಪತ್ರ ಬರೆಯಲಾಗಿದೆ. 

SIT asked permission for Karnataka Governor's staff investigation grg
Author
First Published Sep 28, 2024, 5:00 AM IST | Last Updated Sep 28, 2024, 5:00 AM IST

ಬೆಂಗಳೂರು(ಸೆ.28):  ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಪತ್ರದ ಶೀತಲ ಸಮರ ತಾರಕಕ್ಕೇರಿದ್ದು, ಕೇಂದ್ರ ಸಚಿವ ಎಚ್‌. ಡಿ.ಕುಮಾರಸ್ವಾಮಿ ವಿರುದ್ಧ ಅಭಿಯೋಜನೆಗೆ ಅನುಮತಿ ಕೋರಿದ್ದ ಪತ್ರ ಸೋರಿಕೆ ಸಂಬಂಧ ರಾಜಭವನದ ಸಚಿವಾಲಯದ ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಎಸ್‌ಐಟಿ ಮುಖ್ಯಸ್ಥರು ಪತ್ರ ಬರೆದಿದ್ದಾರೆ. 

ಮನೀಶ್ ಖರ್ಬೀಕರ್ ಅವರಿಗೆ ಅಕ್ರಮ ಗಣಿಗಾರಿಕೆ ಕುರಿತ ಎಸ್‌ಐಟಿ ಮುಖ್ಯಸ್ಥ ಚಂದ್ರಶೇಖರ್ ಪತ್ರ ಬರೆದು ಅನುಮತಿ ಕೋರಿದ್ದಾರೆ. ಕಾನೂನು ಕ್ರಮ ಮತ್ತು ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಬರೆದಿದ್ದ ಮನವಿ ಪತ್ರ ಸೋರಿಕೆಯಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಆಂತರಿಕ ತನಿಖೆ ನಡೆಸಿದ ಬಳಿಕ ಲೋಕಾಯುಕ್ತ ಎಸ್‌ಐಟಿಯಲ್ಲಿ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಖಚಿತವಾಗಿದೆ. ಮಾಹಿತಿ ಸೋರಿಕೆಯಲ್ಲಿಎಸ್ ಐಟಿ ಪಾತ್ರ ಇಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ರಾಜಭವನದ ಸಚಿವಾಲಯದಲ್ಲಿ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಲಾಗಿದೆ. 

ಮತ್ತೊಂದು ಹಂತಕ್ಕೆ ತಲುಪಿದ ರಾಜ್ಯಪಾಲ- ಸರ್ಕಾರದ ಗುದ್ದಾಟ..!

ರಾಜ್ಯಪಾಲರು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಆ.20ರಂದು ಪತ್ರ ಬರೆದು ಮಾಹಿತಿ ಸೋರಿಕೆ ವರದಿ ಕೇಳಿದ್ದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ದ 2023ರ ಸೆ.24ರಂದು ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಕೆಯಾಗಿದ್ದು, ಎಂಟು ತಿಂಗಳಿನಿಂದ ಕಡತ ರಾಜ್ಯಪಾಲರ ಸಚಿವಾಲಯದಲ್ಲಿಯೇ ಬಾಕಿ ಉಳಿದಿತ್ತು. ಈ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಸಾರವಾದ ಬಳಿಕ ಸಾಕಷ್ಟು ಚರ್ಚೆ ಆಗಿತ್ತು. ಈ ಹಿನ್ನೆಲೆಯಲ್ಲಿ ಆಂತರಿಕ ತನಿಖೆ ನಡೆಸಲಾಗಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 19ರ ಪ್ರಕಾರ ಪ್ರಸ್ತಾವನೆ ಸಲ್ಲಿಕೆ ಬಳಿಕ ನಾಲ್ಕು ತಿಂಗಳೊಳಗೆ ವಿಲೇವಾರಿ ಮಾಡಬೇಕು. ಆದರೆ, ರಾಜ್ಯಪಾಲರ ಸಚಿವಾಲಯವು ಕಡತವನ್ನು ಎಂಟು ತಿಂಗಳಿಗೂ ಹೆಚ್ಚು ಕಾಲ ಉಳಿಸಿಕೊಂಡಿತ್ತು. ಇದು ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಲಾಗಿದೆ. 

ರಾಜಭವನದ ಸಚಿವಾಲಯದಿಂದಲೇ ಮಾಹಿತಿ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳ ತನಿಖೆ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅನುಮತಿ ಕೋರಿ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios