ಖ್ಯಾತ ಗಾಯಕ ಸೋನು ನಿಗಮ್ ಅವರು ಕನ್ನಡಿಗರ ಬಗ್ಗೆ ಆಡಿದ್ದ ವಿವಾದಾತ್ಮಕ ಮಾತಿಗೆ ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡರಿಗೆ ಕರೆ ಮಾಡಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಸಂಸ್ಕಾರ ಎಂದು ಹೇಳಿರುವ ನಾರಾಯಣ ಗೌಡರು, ಸೋನು ನಿಗಮ್ ವಿರುದ್ಧದ ಹೋರಾಟವನ್ನು ಕೈಬಿಡುವುದಾಗಿ ಘೋಷಿಸಿದ್ದಾರೆ.

ಬೆಂಗಳೂರು (ಅ.19): ಕನ್ನಡ ನೆಲದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ (Sonu Nigam) ಕೊನೆಗೂ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ಈ ಹಿಂದೆ ಕನ್ನಡಿಗರ ಬಗ್ಗೆ ಆಡಿದ್ದರೆನ್ನಲಾದ ವಿವಾದಾತ್ಮಕ ಮಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರಿಗೆ ನೇರವಾಗಿ ದೂರವಾಣಿ ಕರೆ ಮಾಡಿ, ತಾವು ಮಾಡಿದ ತಪ್ಪಿಗೆ ಬೇಷರತ್ ಕ್ಷಮೆ ಕೋರಿದ್ದಾರೆ.

ಇದರೊಂದಿಗೆ ಕಳೆದ ಕೆಲ ದಿನಗಳಿಂದ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಗಳ ವಿರುದ್ಧ ಕರವೇ ಸಾರಿದ್ದ ಪ್ರತಿಭಟನೆಯ ಕಿಚ್ಚಿಗೆ ಹಾಗೂ ಭುಗಿಲೆದ್ದಿದ್ದ ವಿವಾದಕ್ಕೆ ಸುಖಾಂತ್ಯ ಸಿಕ್ಕಿದೆ.

ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಸಂಸ್ಕಾರ: ನಾರಾಯಣ ಗೌಡ

ಸೋನು ನಿಗಮ್ ಅವರೊಂದಿಗೆ ಮಾತನಾಡಿದ ಬಳಿಕ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ತಮ್ಮ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಭಾವನಾತ್ಮಕ ಹಾಗೂ ಸ್ಪಷ್ಟ ಸಂದೇಶವನ್ನು ಹಂಚಿಕೊಂಡಿದ್ದಾರೆ:

‘ಗಾಯಕ ಸೋನು ನಿಗಮ್ ಇಂದು ನನ್ನೊಂದಿಗೆ ಮಾತನಾಡಿದರು. ತಾವು ಹಿಂದೆ ಆಡಿದ ಒಂದು ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುದು ಅವರಿಗೆ ಅರ್ಥವಾಗಿದೆ. ಅವರು ಬೇಷರತ್ತಾಗಿ ಕ್ಷಮೆ ಯಾಚಿಸುವುದಾಗಿ ಹೇಳಿದರು. ನಾನು ಹಿಂದೆಯೂ ಹೇಳಿದ್ದೇನೆ, ನಾವೆಲ್ಲರೂ ಸೋನು ನಿಗಮ್ ಅವರ ಹಾಡುಗಳನ್ನು ಇಷ್ಟಪಟ್ಟವರು. ಅವರ ಕುರಿತು ವೈಯಕ್ತಿಕವಾಗಿ ನಮಗೆ ಯಾವ ದ್ವೇಷ ಅಥವಾ ಮುನಿಸು ಇರಲಿಲ್ಲ. ಆದರೆ ಆ ಒಂದು ಮಾತನ್ನು ಅರಗಿಸಿಕೊಳ್ಳಲು ನಮ್ಮಿಂದ ಆಗಿರಲಿಲ್ಲ. ಅದಕ್ಕಾಗಿ ನಮ್ಮ ಆಕ್ರೋಶ, ಪ್ರತಿಭಟನೆ ಸಹಜವಾಗಿಯೇ ಇತ್ತು. ಇದೀಗ ಅವರು ಕ್ಷಮೆ ಯಾಚಿಸಿದ್ದಾರೆ. ಇಲ್ಲಿಗೆ ಇದನ್ನು ಮುಗಿಸುವುದು ಒಳ್ಳೆಯದು. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ ಮತ್ತು ಸಂಸ್ಕಾರ’ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.

ಹಿರಿಯ ಗಾಯಕರನ್ನು ಸ್ಮರಿಸಿದ ಕರವೇ ಅಧ್ಯಕ್ಷರು:

ಕನ್ನಡ ಚಿತ್ರರಂಗವನ್ನು ಬೆಳೆಸಿದ ಅನ್ಯಭಾಷಿಕ ಗಾಯಕರ ಕೊಡುಗೆಯನ್ನು ಸ್ಮರಿಸಿದ ಅವರು: ‘ಘಂಟಸಾಲ, ಪಿ.ಬಿ. ಶ್ರೀನಿವಾಸ್, ಕೆ.ಜೆ. ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್, ಕೆ.ಎಸ್. ಚಿತ್ರಾ ಮುಂತಾದ ಅದ್ಭುತ ಗಾಯಕರು ಕನ್ನಡಿಗರಲ್ಲದಿದ್ದರೂ ನಾವು ಅವರನ್ನು ತಾಯ್ನಾಡಿನವರಂತೆ ಪ್ರೀತಿಸಿದ್ದೇವೆ. ಅವರು ನಮ್ಮ ಕನ್ನಡ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದ ಮಹಾನುಭಾವರು. ಆ ಕೃತಜ್ಞತೆ ಕನ್ನಡಿಗರಿಗೆ ಸದಾ ಇರುತ್ತದೆ. ಸೋನು ನಿಗಮ್ ಕೂಡ ಅದೇ ಸಾಲಿನಲ್ಲಿ ಬರುವ ಮಹಾನ್ ಗಾಯಕರಲ್ಲಿ ಒಬ್ಬರು. ಆದ್ದರಿಂದ ಈ ಕಹಿ ಘಟನೆಯನ್ನು ಮರೆತುಬಿಡೋಣ’ ಎಂದಿದ್ದಾರೆ.

ಹೋರಾಟ ಹಿಂಪಡೆದ ಕರವೇ: ಇದು ಎಲ್ಲರಿಗೂ ಪಾಠ!

‘ಸೋನು ನಿಗಮ್ ವಿರುದ್ಧದ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಇಲ್ಲಿಗೆ ಕೈಬಿಡುತ್ತದೆ. ಇದು ಕನ್ನಡದ ವಿಚಾರದಲ್ಲಿ ಹಗುರವಾಗಿ ಮಾತನಾಡುವ ಎಲ್ಲರಿಗೂ ಒಂದು ಪಾಠವಾಗಬೇಕು. ನಾನು ವೈಯಕ್ತಿಕವಾಗಿ ಸಂಗೀತ ಪ್ರೇಮಿ. ಸಂಗೀತ ಮನುಷ್ಯನ ಎಲ್ಲಾ ಸಂಕಟಗಳನ್ನು ಮರೆಸುವ ಸಂಜೀವಿನಿ. ಸೋನು ನಿಗಮ್ ಅವರು ಕರ್ನಾಟಕದಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸಲಿ, ಇನ್ನಷ್ಟು ಸುಮಧುರ ಕನ್ನಡ ಗೀತೆಗಳನ್ನು ಹಾಡಲಿ. ಪ್ರೀತಿ ಗೆಲ್ಲಲಿ’ ಎಂದು ನಾರಾಯಣ ಗೌಡ ಹಾರೈಸಿದ್ದಾರೆ.

ಕರವೇ ಅಧ್ಯಕ್ಷರ ಈ ಪ್ರಬುದ್ಧ ಮತ್ತು ಘನತೆಯ ನಡೆಗೆ ಕನ್ನಡಿಗರು ಹಾಗೂ ಸಂಗೀತ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.