Asianet Suvarna News Asianet Suvarna News

Kanakadasa Jayanti: ಪಂಚ ಕೃತಿ ಮೂಲಕ ಮೂಲಭೂತ ಶಾಶ್ವತ ಜೀವನ ಮೌಲ್ಯಗಳನ್ನು ತಿಳಿಸಿದ ಹರಿಭಕ್ತ

15ನೇ ಶತಮಾನದ ಕವಿ ಕನಕದಾಸರು ತಮ್ಮ ಜೀವನದ 500 ವರ್ಷಗಳ ನಂತರವೂ ಪ್ರಸ್ತುತವಾಗಿ, ಸಾಮಾಜಿಕ ಚಿಂತನೆಗಳಿಗೆ ಮರುನುಡಿ ಹಾಡುತ್ತಿರುವುದು ಹಾಗೂ ತರ್ಕಕ್ಕೆ ಒಳಗಾಗುತ್ತಿರುವುದು ಅವರ ಸಾರ್ವಕಾಲಿಕತೆಯನ್ನು ಸಾರುತ್ತದೆ.

Significance and Know about Kanakadasa hls
Author
Bengaluru, First Published Nov 22, 2021, 11:30 AM IST

ಒಬ್ಬ ತಿಮ್ಮಪ್ಪನಾಯಕ ಹುದುಗಿಸಿಟ್ಟಿದ್ದ ಸಂಪತ್ತು ದೊರೆತು ಪಡೆದು ಕನಕ ನಾಯಕನಾದ, ಮುಂದೊಂದು ದಿನ ಅಸಾಧಾರಣ ಪ್ರಜ್ಞೆಯನ್ನು ಗ್ರಹಿಸುವ ಅಪೂರ್ವ ಶಕ್ತಿ ದೊರೆತು ಹರಿಭಕ್ತಿ ದಾಸನಾದ. ಭಿನ್ನಬಗೆಯ ಪಂಚ ಕೃತಿ ರಚನೆಯ ಸೃಷ್ಟಿಶೀಲ ಅಂತಃಕ್ಷೋಭೆಯ ಮೂಲಕ ದಾಸ ಶ್ರೇಷ್ಟನಾದ ಇದುವೆ ಕನಕದಾಸರ ಜೀವನಾನುಭವ.

ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ? ಎಂದು ವರ್ಗ ತಾರತಮ್ಯದ ವಿರುದ್ಧ ದನಿ ಎತ್ತಿದ ಶ್ರೇಷ್ಠ ಸಮಾಜ ಸುಧಾರಕ ಕನಕದಾಸರು. 1509ರಲ್ಲಿ, ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ, ಬಂಕಾಪುರ ಸಮೀಪದ ‘ಬಾಡ’ ಗ್ರಾಮದಲ್ಲಿ ಜನಿಸಿದರು. ಇವರ ತಂದೆ-ಬೀರಪ್ಪ,ತಾಯಿ-ಬಚ್ಚಮ್ಮ, ಇವರ ಮಡದಿಯ ಹೆಸರು ಮುಕುತಿ. ಕಾಗಿನೆಲೆಯ ಆದಿಕೇಶವ ಇವರ ಆರಾಧ್ಯದೈವ. ಕನಕದಾಸರ ನಿಜವಾದ ಹೆಸರು ತಿಮ್ಮಪ್ಪನಾಯಕ.

ದಾಸಶ್ರೇಷ್ಠನಾಗಿದ್ದು ಹೇಗೆ?

ಒಂದು ದಿನ ತಿಮ್ಮಪ್ಪ ನಾಯಕನಿಗೆ ಒಂದು ಕೆರೆಯ ಜೀರ್ಣೋದ್ದಾರದ ಕೆಲಸ ವಹಿಸಲಾಗಿತ್ತು. ಆಗ ನೆಲ ಅಗೆಯುವಾಗ ತಿಮ್ಮಪ್ಪನಾಯಕನಿಗೆ ಭಾರೀ ಪ್ರಮಾಣದಲ್ಲಿ ಬಂಗಾರ ಸಿಕ್ಕಿತು. ಅಂದಿನಿಂದ ಜನ ತಿಮ್ಮಪ್ಪನಾಯಕನಿಗೆ ಕನಕ ನಾಯಕ ಎಂದು ಕರೆಯಲು ಪ್ರಾರಂಭಿಸಿದರು. ಕನಕ ಎಂದರೆ ಬಂಗಾರ ಎಂದರ್ಥ. 15ನೇ ಶತಮಾನದ ಕವಿಯೊಬ್ಬ ತನ್ನ ಜೀವನದ ಐದನೂರು ವರ್ಷಗಳ ನಂತರವೂ ಪ್ರಸ್ತುತವಾಗಿ, ಸಾಮಾಜಿಕ ಚಿಂತನೆಗಳಿಗೆ ಮರುನುಡಿ ಹಾಡುತ್ತಿರುವುದು ಹಾಗೂ ತರ್ಕಕ್ಕೆ ಒಳಗಾಗುತ್ತಿರುವುದು ಅವರ ಸಾರ್ವಕಾಲಿಕತೆಯನ್ನು ಸಾರುತ್ತದೆ. ಅವರ ತಾತ್ವಿಕ ಚಿಂತನೆ ಯಾರಿಗೂ ಅರ್ಥವಾಗದ ಜಟಿಲ ಪಾರಿಭಾಷಿಕ ಪದಗಳಿಂದ ಕೂಡಿದ ಕಗ್ಗವಾಗಿಲ್ಲದೇ ಇರುವುದೇ ಅವರ ಇಂದಿನ ಪ್ರಸ್ತುತಿಗೆ ಕಾರಣವಾದಿತೇನೋ. ಸಿದ್ಧಾಂತ ಮಂಡನೆಯನ್ನೇ ಉದ್ದೇಶವಾಗಿಟ್ಟುಕೊಳ್ಳದೆ, ಅವರ ತತ್ವ ಚಿಂತನೆ ಸಾಮಾನ್ಯರಿಗೂ ಅರ್ಥವಾಗುವಂತಹ ಸರಳ ಸ್ವರೂಪದ್ದಾಗಿರುವುದೇ ಅವರ ಇಂದಿನ ಅಸ್ತಿತ್ವದ ಬುನಾದಿ.

ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್‌ಜೀ ಜೀವನ ವಿಧಾನ ಪ್ರತಿಯೊಬ್ಬರಿಗೂ ಮಾದರಿ

ಶ್ರದ್ಧೆಗೆ ಪರಿಶ್ರಮ ಬೇಕು

ದ್ವೈತ್ಯ-ಅದ್ವೈತ್ಯ, ಲೌಕಿಕ-ಅಲೌಕಿಕ ಹೊರತು ಭಕ್ತಿಪಂಥದ ರುವಾರಿಯಾದದ್ದು ಅವರ ಜೀವಮಾನ ಸಾಧನೆ. ಭಕ್ತಿಯನ್ನು ಶ್ರದ್ಧೆಯೆಂದು ಪ್ರತಿಪಾದಿಸಿ ಶ್ರದ್ಧೆಯನ್ನು ಸಾಧಿಸಲು ಜೀವನದಲ್ಲಿ ಪರಿಶ್ರಮ ಬೇಕು. ಆ ಪರಿಶ್ರಮವೇ ಜೀವನದ ಕರ್ಮ ಯೋಜನೆಯೆಂದು, ಮುಕ್ತಿ ಜೀವದ(ಆತ್ಮದ) ಪರಮೋಚ್ಚ ಸಾಧನೆ ಈ ಜೀವನದ(ದೇಹದ) ಮೂಲಕ ಎನ್ನುವುದೇ ಅವರ ಕಾವ್ಯಸಾರ. ಪ್ರಾರ್ಥನೆ ಮತ್ತು ದೈವಾರಾಧನೆಯ ಭಾವನೆಯು ಒಂದು ವಿಶಿಷ್ಟವಾದ ಗುಣ. ಸ್ವಭಾವತಃ ದೇವರ ಪ್ರಾರ್ಥನೆ ಮತ್ತು ಭಕ್ತಿ ಆರಾಧನೆಯಲ್ಲಿ ತೊಡಗುವುದು ಭವ್ಯವಾಗಿ ಜೀವಿಸಲು ಬೇಕಾದ ಸುಂದರ ಬಗೆ ಎಂದು ತಮ್ಮ ಹರಿಭಕ್ತಿಸಾರದಲ್ಲಿ ಹೇಳುವ ಅವರು ಮುಂದುವರೆದಂತೆ,

ಬರಿದಹಂಕಾರದಲಿ ತತ್ವದ ಕುರುಹು ಕಾಣದೆ ನಿನ್ನ ದಾಸರ ಜರೆದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು

ನರರು ದುಷ್ಕರ್ಮದಲ್ಲಿ ಮಾಡಿದ ದುರಿತ ವಡಗಲು ನಿನ್ನ ನಾಮ ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ

ವೇದ ಪುರಾಣಗಳನ್ನು ಓದಿದ ಮೇಲೂ ತನ್ನ ಅಹಂಕಾರಕ್ಕೆ ಬಲಿಯಾಗಿ ತತ್ವದ ಮೂಲವನ್ನು ಕಾಣದೇ ಜೀವನದ ಸ್ವರೂಪವನ್ನು ಮನಗಾಣದಿಹೆ ಅದ್ಯಾವ ಫಲ, ಇಂತಹ ದುಷ್ಕರ್ಮಗಳನ್ನು ತೊಡೆದು ಹಾಕಲು ನಿನ್ನ ನಾಮ ಸ್ಮರಣೆಯೊಂದೆ ಸಾಕು ಎಂದಿದ್ದಾರೆ.

ಎಲ್ಲ ಬೇಕೆಂಬ ವ್ಯಾಮೋಹ ಬೇಡ

ಮೋಸದಿ ಜೀವ ಘಾಸಿ ಮಾಡಿದ ಪಾಪ, ಕಾಶಿಗೆ ಹೋದರೆ ಹೋದೀತೆ

ಶ್ರೀಶನ ಭಕುತರ ದೂಷಿಸಿದಾ ಫಲ, ಕಾಸು ಕೊಟ್ಟರೆ ಬಿಟ್ಟೀತೇ

ಭಾಷೆಯ ಕೊಟ್ಟು ನಿರಾಶೆಯ ಮಾಡಿದ ಫಲ, ಕ್ಲೇಶಗೊಳಿಸದೆ ಬಿಟ್ಟೀತೆ

ಭೂಸುರಸ್ವವ ಹ್ರಾಸ ಮಾಡಿದ ಫಲ, ಏಸೇಸು ಜನುಮಕು ಬಿಟ್ಟೀತೆ

ನ್ಯಾಯವ ಬಿಟ್ಟವ ನ್ಯಾಯವ ಪೇಳಲು, ನಾಯಿಗೆ ನರಕವು ತಪ್ಪೀತೆ

ಈ ಸಾಲುಗಳ ಜೋಡನೆ 15ನೇ ಶತಮಾನಕ್ಕಿಂತ 21ನೇ ಶತಮಾನಕ್ಕೆ ಹೇಳಿ ಮಾಡಿಸಿದ ಹಾಗಿದೆ. ಲೌಕಿಕ ಸುಖದಲ್ಲಿ ಸಿಲುಕಿ, ಬೇಕು ಬೇಕು ಎಲ್ಲವೂ ನನಗೆ ಬೇಕೆಂಬ ವ್ಯಾಮೋಹಕ್ಕೆ ಬಲಿಯಾದವನು ಜೀವನದ ಮೂಲಭೂತ ಸತ್ಯವನ್ನು, ಮಾನವೀಯ ಸತ್ವವನ್ನು ಅರಿಯದ ಮೂರ್ಖನೆಂದು ಹೇಳುವುದು ಅವರ ಉದ್ದೇಶವಾಗಿರಬೇಕು.

ವಾಲ್ಮೀಕಿ ಜಯಂತಿ: ಭೂಮಿ ಇರುವವರೆಗೂ ವಾಲ್ಮೀಕಿ ಅಜರಾಮರ

ಒಳಿತಿನ ಸಂದೇಶಗಳು

ಹರಿಭಕ್ತಿ ದಾಸರಾದ ಕನಕರು, ಒಂದು ದಿನ ಶ್ರೀಹರಿ ಕೇಳಿದ ನೀನ್ಯಾರು ಎಂಬ ಪ್ರಶ್ನೆಗೆ, ಹಿಂದಿರುವವರಿಗೆ ಮುಂದಿನವ, ಮುಂದಿರುವವರಿಗೆ ಹಿಂದಿನವ ಎಂದು ಉತ್ತರಿಸಿದರಂತೆ. ಈ ಸಾಲುಗಳು ಕೊಂಚ ವ್ಯಂಗ್ಯವಾಗಿ ಕಂಡರೂ ಒಬ್ಬ ದಾಸ ಮತ್ತು ದೈವದ ನಡುವಿನ ಭಕ್ತಿ ಪ್ರೇಮದ ಸಂಭಾಷಣೆಗಳು.

ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು, ಮಂಡಿಕೆಗಳ ಮೂಲಕ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವದಂತಹ ಐದು ಭಕ್ತಿ ಗ್ರಂಥಗಳನ್ನು ರಚಿಸಿದ್ದು ಅವರ ಸಾಹಿತ್ಯ ಸಾಧನೆಯಾದರೆ, ಇವುಗಳ ಮೂಲಕ ಮೂಲಭೂತವಾಗಿರುವ ಶಾಶ್ವತ ಜೀವನ ಮೌಲ್ಯಗಳನ್ನು ಹೇಳಿದ್ದು ಅವರ ತಾತ್ವಿಕ ಸಾಧನೆ. ಸಾಹಿತ್ಯದ ಪರಿವೆಯೇ ಕಾಣದ ನಾಯಕನೊಬ್ಬ ಇದ್ದಕ್ಕಿದಂತೆ ಒಬ್ಬ ಮಾನವತಾವಾದಿಯಾಗಿ ಬೆಳೆದು ಒಬ್ಬ ದಾಸಶ್ರೇಷ್ಠನಾಗಿ ದೇಶದುದ್ದಕ್ಕೂ ಪಸರಿಸಲು ಯಾವುದೋ ಆಭೂತಪೂರ್ವ ಶಕ್ತಿ ಸಹಕರಿಸಿರಬೇಕೆಂಬ ಪ್ರಶ್ನೆಗೆ ಉತ್ತರ ಅವರ ಹರಿಭಕ್ತಿಸಾರದಲ್ಲಿ ದೊರೆಯುತ್ತದೆ,

ಲೋಕದೊಳಗತ್ಯಧಿಕವೆನಿಸುವ ಕಾಗಿನೆಲೆಸಿರಿಯಾಧಿಕೇಶವ

ತಾ ಕೃಪೆಯೊಳಗೆ ನುಡಿದನು ಈ ಭಕ್ತಿಸಾರವನು

ತನ್ನ ಎಲ್ಲಾ ಕಾವ್ಯ ಸಾಧನೆಗೆ ಹರಿಯೇ ಕಾರಣನೆಂದು ಹೇಳುವ ಕನಕದಾಸರು, ತಮ್ಮೆಲ್ಲಾ ಕಾವ್ಯಗಳನ್ನು ಕೇಶವನು ತನ್ನ ಮೂಲಕ ಬರೆಸಿದನು ಎನ್ನುತ್ತಾರೆ. ಖಂಡಿತವಾಗಿ ಭಗವಂತನ ಪ್ರೇರಣಾಶಕ್ತಿಯಿಂದಲೇ ಕನಕದಾಸರು ಅಲ್ಪ ಸಮಯದಲ್ಲಿ ಇಷ್ಟುಪ್ರಮಾಣದ ಸಾಧನೆ ಮಾಡಲು ಸಾಧ್ಯವಾಗಿರಬೇಕು. ಖಂಡಿತವಾಗಿ ಕೇಶವನ ದಿವ್ಯಾನುಭವದ ಹಿನ್ನೆಲೆ, ಪ್ರಭಾವ, ಅನುಗ್ರಹಗಳು ಇರದೇ ಹೋಗಿದ್ದರೆ ಸ್ವಾನುಭವ ಪ್ರಮಾಣಿತವಾದ ವ್ಯಾಖ್ಯಾನ ಬರೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ ಎನ್ನಿಸುತ್ತದೆ. ಜೀವನದ ಕೊನೆಕ್ಷಣಗಳಲ್ಲಿ ಆದಿಕೇಶವನ ಸನ್ನಿಧಿಯಲ್ಲೆ ತಮ್ಮನ್ನು ತಾವೇ ಬಂಧಿಸಿಕೊಂಡಿದ್ದ ಅವರು ಎಲ್ಲಿ ಕಣ್ಮರೆಯಾದರು ಎಂದು ಯಾರಿಗೂ ತಿಳಿದಿಲ್ಲ.

ಅದೇನೆ ಇರಲಿ ಕನಕರ ದೂರದೃಷ್ಟಿಇಂದಿನ ದಿನಮಾನಸಕ್ಕೆ ಅಭೂತ್ವಪೂರ್ಣ ಕಾಣಿಕೆಗಳಾಗಿವೆ. ಮಾನವ ಕುಲದ ಒಳಿತಿಗಾಗಿ ಅನೇಕ ಸಂದೇಶಗಳನ್ನು ಸಾರುತ್ತಿವೆ. ಜಾತಿ ಧರ್ಮ ಬೇದಗಳನ್ನು ಮೀರಿದ ಏಕತೆಯನ್ನು ಸಾರುವ ಭಕ್ತಿ ಗ್ರಂಥಗಳಾಗಿವೆ.

- ಉಮೇಶ್‌ ಎಂ.ಡಿ, ಮಳವಳ್ಳಿ

Follow Us:
Download App:
  • android
  • ios