Asianet Suvarna News Asianet Suvarna News

ವಾಲ್ಮೀಕಿ ಜಯಂತಿ : ಭೂಮಿ ಇರುವವರೆಗೂ ವಾಲ್ಮೀಕಿ ಅಜರಾಮರ

ಭೂಮಿಯ ಮೇಲೆ ಬೆಟ್ಟಗಳೂ ನದಿಗಳೂ ಇರುವವರೆಗೂ ರಾಮಾಯಣ ಪ್ರಚಾರಗೊಳ್ಳುತ್ತಲೇ ಇರುತ್ತದೆ ಎಂಬ ಮಾತು ರಾಮಾಯಣದಲ್ಲಿಯೇ ಬಂದಿದೆ. ರಾಮಾಯಣ ಇರುವವರೆಗೂ ವಾಲ್ಮೀಕಿಯ ಹೆಸರೂ ಇರುತ್ತದೆ.

Tributes to the Maharshi Valmiki on his Jayanti hls
Author
Bengaluru, First Published Oct 20, 2021, 10:29 AM IST

ಪ್ರಾಚೀನ ಭಾರತೀಯ ಕವಿ, ರಾಮಾಯಣದ ಲೇಖಕ, ಮೊದಲ ಮಹಾಕಾವ್ಯದ ಮೊದಲ ಕರ್ತೃ ಹಾಗೂ ತತ್ವಜ್ಞಾನಿ ಮಹರ್ಷಿ ವಾಲ್ಮೀಕಿಯವರ ಜನ್ಮದಿನದ ನೆನಪಿಗಾಗಿ ಇಂದು ವಾಲ್ಮೀಕಿ ಜಯಂತಿ ಆಚರಣೆಯ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕ ಹೃದಯಾಭಿನಂದನೆಯ ನಮನಗಳು.

ಮಹರ್ಷಿ ವಾಲ್ಮೀಕಿಯ ಮೂಲ ಹೆಸರು ರತ್ನಾಕರ ಮತ್ತು ಅವರ ತಂದೆ ಭಗವಾನ್‌ ಬ್ರಹ್ಮನ ಮಾನಸ ಪುತ್ರ ಪ್ರಚೇತ. ಅವರು ಕ್ರಿ.ಪೂ 500ರಲ್ಲಿ ಜನಿಸಿದ್ದರು ಎಂದು ಭಾವಿಸಲಾಗಿದೆ. ವಾಲ್ಮೀಕಿ ಜಯಂತಿ ಸಾಮಾನ್ಯವಾಗಿ ಅಕ್ಟೋಬರ್‌ ತಿಂಗಳಲ್ಲಿ, ಅಶ್ವಿನಿ ತಿಂಗಳ ಹುಣ್ಣಿಮೆಯಂದು ಬರುತ್ತದೆ.

ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ‘ಆದಿಕವಿ’ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ಅಕ್ಟೋಬರ್‌ 20ರಂದು ಕರ್ನಾಟಕ ರಾಜ್ಯಾದ್ಯಂತ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣ ಸಂಗತಿಯಾಗಿದೆ. ಸಂಸ್ಕೃತದಲ್ಲಿ ರಾಮಾಯಣ ಕಾವ್ಯದಲ್ಲಿ ಬರುವ ಈ ಮುಂದಿನ ಎರಡೂ ಸಾಲುಗಳು ಅತ್ಯಂತ ಮಾರ್ಮಿಕವಾಗಿ ಮೂಡಿಬಂದಿವೆ.

ಅಮರಕಾವ್ಯ ರಾಮಾಯಣ

ಯಾವತ್‌ ತಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ

ತಾವದ್ರಾಮಾಯಣ ಕಥಾ ಲೋಕೇಷು ಪ್ರಚರಿಷ್ಯತಿ

ಅರ್ಥಾತ್‌, ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ ಸಮುದ್ರ ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿರುತ್ತದೆ. ಆದ್ದರಿಂದ ಸೂರ್ಯಚಂದ್ರರಿರುವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯವಾಗಿರುತ್ತದೆ ಮತ್ತು ಇದನ್ನು ರಚಿಸಿರುವ ಮಹರ್ಷಿ ವಾಲ್ಮೀಕಿಯೂ ಅಮರ ಕವಿಯಾಗಿರುತ್ತಾರೆ ಎಂದು ಮಹಾಕವಿ ವಾಲ್ಮೀಕಿಯನ್ನು ಅವರ ಜಯಂತಿ ಆಚರಿಸುವ ಮೂಲಕ ಸ್ಮರಿಸೋಣ. ರಾಮಾಯಣ ಮೂಲತಃ ವಾಲ್ಮೀಕಿ ಬರೆದ 24,000 ಶ್ಲೋಕಗಳನ್ನು ಒಳಗೊಂಡಿದೆ ಮತ್ತು ಏಳು ಖಂಡಗಳಲ್ಲಿದೆ.

ಒಂದು ದಿನ ಮಹರ್ಷಿ ವಾಲ್ಮೀಕಿ ನದಿಯ ದಡದಲ್ಲಿ ಒಂದು ಜೋಡಿ ಕ್ರೌಂಚ ಪಕ್ಷಿಗಳನ್ನು ನೋಡುತ್ತಿದ್ದಾಗ, ಬೇಟೆಗಾರನು ಆ ಜೋಡಿ ಕ್ರೌಂಚ ಪಕ್ಷಿಗಳನ್ನು ಬಾಣದಿಂದ ಕೊಂದನು. ಇದರಿಂದ ಮಹರ್ಷಿ ವಾಲ್ಮೀಕಿ ಸಾಕಷ್ಟುವಿಚಲಿತರಾದರು ಮತ್ತು ಪ್ರೀತಿಯಲ್ಲಿ ಭಾಗಿಯಾದ ಹಕ್ಕಿಯನ್ನು ಕೊಂದ ದುಷ್ಟಬೇಟೆಗಾರನಿಗೆ ಎಂದಿಗೂ ಪ್ರೀತಿ ಸಿಗದಿರಲಿ ಎಂದು ಶಾಪವನ್ನು ನೀಡಿದರು.

ಶಪಿಸಿದ ನಂತರ, ಮಹರ್ಷಿಗಳಿಗೆ ತಮ್ಮ ಬಾಯಿಂದ ಯಾವ ಪದಗಳು ಹೊರಬಂದವು ಎನ್ನುವುದೇ ಅರಿವಿಗೆ ಬರಲಿಲ್ಲ. ನಾನು ಯಾವ ಪದದಿಂದ ಬೇಟೆಗಾರನನ್ನು ಶಪಿಸಿದೆ ಎಂದು ಚಿಂತಿಸುತ್ತಾ ಕುಳಿತಿರುವಾಗ ನಾರದ ಮುನಿಗಳು ಪ್ರತ್ಯಕ್ಷರಾಗಿ ಅವರ ಚಿಂತೆಯನ್ನು ದೂರಾಗಿಸಿದರು. ಇದು ನಿಮ್ಮ ಮೊದಲ ಪದ್ಯ, ಈಗ ನೀವು ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವಿರಿ ಎಂದು ನಾರದ ಮುನಿ ಹೇಳಿದರು. ಇದರ ನಂತರ ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ಸಂಯೋಜಿಸಿದರು.

ಮೌಲ್ಯಗಳ ಪ್ರತಿಪಾದನೆ

ರಾಮಾಯಣವು ಭಾರತೀಯರ ಜೀವನ ಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ಮಹರ್ಷಿ ವಾಲ್ಮಿಕಿಯು ರಾಮಾಯಣದಲ್ಲಿ ಭರತ ಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು ಮತ್ತು ಜಲಪಾತಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಿದ್ದಾರೆ.

ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ, ಅಥಿತಿ ದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ.

ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇಂತಹ ಅನನ್ಯವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯನ್ನು ‘ಕವಿಗಳ ಕವಿ’ ಎಂದು ಮಹಾಕವಿ ಕಾಳಿದಾಸ ಗೌರವಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪುರವರು, ‘ರಾಮಾಯಣದಂತಹ ಮಹಾಕಾವ್ಯ ಮತ್ತು ವಾಲ್ಮೀಕಿಯಂತಹ ಮಹಾಕವಿ ನಮಗೆ ದೊರೆತಿರುವುದು ಭುವನದ ಭಾಗ್ಯ’ ಎಂದಿದ್ದಾರೆ. ಭಾರತದ ಪ್ರಥಮ ಪ್ರಧಾನ ಮಂತ್ರಿಯಾಗಿದ್ದ ಜವಾಹರ್‌ ಲಾಲ್‌ ನೆಹರು ಅವರು ರಚಿಸಿರುವ ‘ಡಿಸ್ಕವರಿ ಆಫ್‌ ಇಂಡಿಯಾ’ ಪುಸ್ತಕದಲ್ಲಿ, ಜನರ ಮನಸ್ಸಿನ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿರುವ ಮಹಾಕಾವ್ಯ ರಾಮಾಯಣ ಎಂಬುದಾಗಿ ಉಲ್ಲೇಖಿಸಿದ್ದಾರೆ.

ಅದೇ ರೀತಿಯಾಗಿ ವೀರಪ್ಪ ಮೊಯ್ಲಿ ಅವರು ‘ಶ್ರೀ ರಾಮಾಯಣ ಮಹಾನ್ವೇಷಣಂ’ ಎಂಬ ಮಹಾಕಾವ್ಯದಲ್ಲಿ ರಾಮಾಯಣ ಕಾವ್ಯದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ. ಬ್ರಿಟಿಷ್‌ ಹಾಸ್ಯ ಸಾಹಿತಿ ಆಬ್ರೆ ಮೆನೆನ್‌ ವಾಲ್ಮೀಕಿ ಸಾಹಿತ್ಯದ ಪ್ರತಿಭೆ. ಹಾಗಾಗಿ ವಾಲ್ಮೀಕಿಯನ್ನು ರಾಮನ ಸಮಕಾಲೀನ ಎಂದು ಉಲ್ಲೇಖಿಸಲಾಗಿದೆ. ಮೆನೆನ್‌ ಹೇಳುವಂತೆ, ವಾಲ್ಮೀಕಿ ತನ್ನದೇ ಆದ ರಚನೆಯಲ್ಲಿ ತನ್ನನ್ನು ತಾನೇ ಪರಿಚಯಿಸಿಕೊಂಡ ಇತಿಹಾಸದ ಮೊದಲ ಲೇಖಕ ಎಂದು ಹೇಳಲಾಗುತ್ತದೆ.

ಒಟ್ಟಾರೆಯಾಗಿ ವಾಲ್ಮೀಕಿ ಇಲ್ಲದೆ ರಾಮಾಯಣ ಇಲ್ಲ; ರಾಮಾಯಣ ಇಲ್ಲದೆ ವಾಲ್ಮೀಕಿ ಇಲ್ಲ. ಈ ಸಮೀಕರಣವನ್ನು ದೂರಮಾಡಿ ವಾಲ್ಮೀಕಿಯನ್ನಾಗಲೀ ರಾಮಾಯಣವನ್ನಾಗಲೀ ನೋಡಲು ಸಾಧ್ಯವಿಲ್ಲ. ಭೂಮಿಯ ಮೇಲೆ ಬೆಟ್ಟಗಳೂ ನದಿಗಳೂ ಇರುವವರೆಗೂ ರಾಮಾಯಣ ಪ್ರಚಾರಗೊಳ್ಳುತ್ತಲೇ ಇರುತ್ತದೆ ಎಂಬ ಮಾತು ರಾಮಾಯಣದಲ್ಲಿಯೇ ಬಂದಿದೆ. ರಾಮಾಯಣ ಇರುವವರೆಗೂ ವಾಲ್ಮೀಕಿಯ ಹೆಸರೂ ಇರುತ್ತದೆ.

- ವಾಲ್ಮೀಕಿ ಜಯಂತಿ, ಬಸವರಾಜ ಎಂ. ಯರಗುಪ್ಪಿ

ಗದಗ

Follow Us:
Download App:
  • android
  • ios