Asianet Suvarna News Asianet Suvarna News

ಸಿಖ್‌ ಧರ್ಮ ಸಂಸ್ಥಾಪಕ ಗುರುನಾನಕ್‌ಜೀ ಜೀವನ ವಿಧಾನ ಪ್ರತಿಯೊಬ್ಬರಿಗೂ ಮಾದರಿ

ಸಿಖ್‌ ಧರ್ಮದ ಪ್ರಕಾರ, ದೇವರು ಒಬ್ಬನೇ. ದೇವರ ಅವತಾರ ಮತ್ತು ಪುನರ್ಜನ್ಮವನ್ನು ಅವರು ನಂಬುವುದಿಲ್ಲ. ಆದರೆ, ದೇವರನ್ನು ಹಿಂದೂ ಮತ್ತು ಮುಸ್ಲಿಮರು ಬಳಸುವ ಹರಿ, ರಾಮ…, ರಹೀಮ…, ರಬ್ನಾಮಗಳಿಂದ ಕರೆಯಲಾಗುತ್ತದೆ. 

Know About Celebration of Guru Nank Jayanti hls
Author
Bengaluru, First Published Nov 19, 2021, 1:17 PM IST
  • Facebook
  • Twitter
  • Whatsapp

ಜಾತಿ, ಸಾಮಾಜಿಕ ಅಂತಸ್ತು ಮಾನವ ಕುಲವನ್ನು ವಿಭಜಿಸಿದ್ದ ಕಾಲ ಅದು. ದೇವರನ್ನು ತಲುಪಲು ಧಾರ್ಮಿಕ ವಿಧಿವಿಧಾನಗಳು ಅಥವಾ ಅರ್ಚಕರ ಅವಶ್ಯಕತೆಯಿಲ್ಲ. ಶುದ್ಧ ಅಂತರಂಗ, ಪ್ರಾರ್ಥನೆಯೊಂದೇ ಸಾಕೆಂದು ಬೋಧಿಸಿ, ಪ್ರೀತಿ, ಸಮಾನತೆ, ಸಹಾನುಭೂತಿಯ ಸಂದೇಶವನ್ನು ಹರಡಿ ಜನರನ್ನು ಆಯಸ್ಕಾಂತದಂತೆ ಸೆಳೆದವರು ಗುರುನಾನಕ್‌. ಈ ಆಕರ್ಷಣೆಯೇ ಭಾರತದ ಪುಣ್ಯ ಭೂಮಿಯಲ್ಲಿ ಹೊಸತೊಂದು ಧರ್ಮಕ್ಕೆ ಜನ್ಮನೀಡಿತು.

‘ಏಕ್‌ ಓಂಕಾರ್‌’ ಎಂದು ಶುರುವಾಗುವ ಗುರು ಗ್ರಂಥಸಾಹಿಬ್‌ನ ಆರಂಭಿಕ ಮಂತ್ರ, ದೇವರು ಒಬ್ಬನೇ. ಆತ ಸೃಷ್ಟಿಕರ್ತ, ಸರ್ವಶಕ್ತ, ಸರ್ವವ್ಯಾಪಿ, ನಿರಾಕಾರ, ನಿರ್ಭೀತ, ಶಾಶ್ವತ, ಕರುಣಾಮಯಿ, ಅವನೇ ಸತ್ಯ, ಎಲ್ಲ ಜೀವಿಗಳಲ್ಲೂ ಅವನಿದ್ದಾನೆ, ಪ್ರಾರ್ಥನೆಯಿಂದ ದೇವರನ್ನು ಪಡೆಯಬಹುದು ಎನ್ನುತ್ತದೆ. ಜನರ ಭಾಷೆಯಲ್ಲಿ ಸರಳ, ಸುಂದರ ರೀತಿಯಲ್ಲಿ ದೇವರನ್ನುಬಣ್ಣಿಸುವ ಈ ಮಂತ್ರ ಚಿರಸ್ಥಾಯಿಯಾಯಿತು. ಐದು ಶತಮಾನಗಳ ಹಿಂದೆ ಉದಯಿಸಿದ ಆಧ್ಯಾತ್ಮಿಕ ಗುರು, ಕವಿ, ತತ್ವಜ್ಞಾನಿ ಏಷ್ಯಾ ಖಂಡದುದ್ದಕ್ಕೂ ಸಂಚರಿಸಿ, ತನ್ನ ಸಂದೇಶವನ್ನು ಸಾರುತ್ತ, ಸಿಖ್‌ ಧರ್ಮದ ಸ್ಥಾಪನೆಗೆ ನಾಂದಿ ಹಾಡಿದ ಗುರುನಾನಕ್‌, 1469ರ ಕಾರ್ತಿಕ ಹುಣ್ಣಿಮೆಯಂದು ಈಗ ಪಾಕಿಸ್ತಾನದಲ್ಲಿರುವ ತಲ್ವಂಡಿಯಲ್ಲಿ ಜನಿಸಿದರು.

30ನೇ ವಯಸ್ಸಲ್ಲಿ ಸಾಕ್ಷಾತ್ಕಾರ

ನಾನಕ್‌ರಿಗೆ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ. ಏಕಾಂತದಲ್ಲಿ ಧ್ಯಾನ ಮಾಡುವುದಕ್ಕೆ ತುಂಬ ಒಲವು. ಐದನೇ ವಯಸ್ಸಿಗೇ ಜೀವನದ ಅರ್ಥ ಮತ್ತು ಉದ್ದೇಶವನ್ನು ಪ್ರಶ್ನಿಸತೊಡಗಿದರು. ಅದೇ ವೇಳೆ ಅವರು ಅಧ್ಯಾತ್ಮಿಕ ಕವನಗಳನ್ನು ಬರೆಯಲಾರಂಭಿಸಿದರು. ಗುರು ಗ್ರಂಥಸಾಹಿಬ್‌ನ ಹೆಚ್ಚಿನ ಸ್ತೋತ್ರಗಳನ್ನು ಇವರೇ ಬರೆದಿದ್ದಾರೆ. ಹನ್ನೆರಡು ವರ್ಷದ ಬಾಲಕ ನಾನಕ್‌, ವ್ಯವಹಾರ ಜ್ಞಾನ ಹೊಂದಲಿ ಎಂಬ ಉದ್ದೇಶದಿಂದ ಒಮ್ಮೆ ಅವರ ತಂದೆ ಸ್ವಲ್ಪ ಹಣ ನೀಡಿ, ಪೇಟೆಯಿಂದ ಸಾಮಾನು ತರಲು ಕಳಿಸಿದರು. ವಸ್ತುಗಳ ಖರೀದಿಗೆ ಮುಂಚೆ ಚೌಕಾಸಿ ಮಾಡುವ ಬಗ್ಗೆಯೂ ತಿಳಿಸಿಕೊಟ್ಟರು. ಪೇಟೆಗೆ ಬಂದ ಬಾಲಕ ಚೌಕಾಸಿ ಮಾಡುವುದನ್ನು ಬಿಟ್ಟು, ಹಣದಲ್ಲಿ ಆಹಾರವನ್ನು ಖರೀದಿಸಿ ಹಸಿದ ಬಡವರಿಗೆ ಹಂಚಿಬಿಟ್ಟ. ಹಸಿದವರಿಗೆ ಆಹಾರ ನೀಡುವುದೇ ನಿಜವಾದ ವ್ಯವಹಾರ ಎಂದೂ ವಾದಿಸಿದ.

ಮುಹಮ್ಮದ್ ಪೈಗಂಬರರ ಬೋಧನೆ ಇಸ್ಲಾಂಗೆ ಸೀಮಿತವಲ್ಲ, ಇಡೀ ಮಾನವಕುಲಕ್ಕೆ ದಾರಿದೀಪ

ಕುಟುಂಬದ ಸಂಪ್ರದಾಯದಂತೆ ಜನಿವಾರವನ್ನು ತೊಡಿಸಲು ಮುಂದಾದಾಗ ಜನರನ್ನು ಪ್ರತ್ಯೇಕಿಸುವ ಜನಿವಾರ ತನಗೆ ಬೇಡವೆಂದು ನಿರಾಕರಿಸಿದ ನಾನಕ್‌, ಜನರನ್ನು ಅವರ ವೈಯಕ್ತಿಕ ಗುಣ ಮತ್ತು ಸಮಾಜಕ್ಕಾಗಿ ಮಾಡಿದ ಕೆಲಸಗಳಿಂದ ಗುರುತಿಸಬೇಕು ಎನ್ನುವುದನ್ನು ಪ್ರತಿಪಾದಿಸುತ್ತ ಬಂದರು.

ನಾನಕ್‌ರಿಗೆ ಸಾಕ್ಷಾತ್ಕಾರವಾದದ್ದು ಮೂವತ್ತನೇ ವಯಸ್ಸಿನಲ್ಲಿ. ಒಮ್ಮೆ ಅವರು ನದಿ ಸ್ನಾನಕ್ಕೆ ಹೋದವರು ಮೂರು ದಿನಗಳಾದರೂ ಹಿಂದಿರುಗಲಿಲ್ಲ. ಆಗಲೇ ಅವರು ಜ್ಞಾನೋದಯವನ್ನು ಸಾಧಿಸಿದರೆಂದು ನಂಬಲಾಗಿದೆ. ನಾಲ್ಕನೇ ದಿನ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ನಾನಕ್‌, ನಾನು ಹಿಂದುವೂ ಅಲ್ಲ, ಮುಸಲ್ಮಾನನೂ ಅಲ್ಲ. ಏಕೆಂದರೆ ದೇವರು ಯಾವುದೇ ಧರ್ಮಕ್ಕೆ ಸೇರಿದವನಲ್ಲ ಎಂದು ಘೋಷಿಸಿದರು. ತಮ್ಮ ಬಳಿ ಇದ್ದ ಎಲ್ಲವನ್ನೂ ದಾನ ಮಾಡಿಬಿಟ್ಟರು. ತಮ್ಮನ್ನು ಭಗವಂತನ ಆರಾಧನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

ದೇವರನ್ನು ಕಂಡ ಬಗೆ

ಪುರಿಯ ಜಗನ್ನಾಥ ಮಂದಿರದ ಬಳಿ ನಾನಕ್‌ರು ವಾಸ್ತವ್ಯ ಹೂಡಿದ್ದರು. ಅವರ ಪ್ರವಚನ ಭಕ್ತರನ್ನು ಆಕರ್ಷಿಸಿತ್ತು. ಇದನ್ನು ಸಹಿಸದ ಪೂಜಾರಿಗಳು, ಅವರನ್ನು ತಮ್ಮ ದೇಗುಲದ ಪೂಜೆಗೆ ಆಹ್ವಾನಿಸಿದರು. ಪೂಜೆ ಅದ್ಧೂರಿಯಾಗಿತ್ತು. ಹೂವಿನ ಹಾರ, ದೂಪ ದೀಪಗಳಿಂದ ಅಲಂಕೃತಗೊಂಡಿದ್ದ ದೇಗುಲ ಭಜನೆ, ಶಂಖ ನಾದ, ಗಂಟೆಗಳಿಂದ ತುಂಬಿತು. ಇದ್ಯಾವುದನ್ನೂ ನಾನಕ್‌ರು ಹೊಗಳದಿದ್ದಾಗ, ಪೂಜಾರಿಗಳು ವ್ಯಗ್ರರಾದರು. ತಮ್ಮ ಸರದಿ ಬಂದಾಗ, ನಾನಕ್‌ ತಮ್ಮ ಒಂದು ಗುರುಬಾಣಿಯನ್ನು ಸುಶ್ರಾವ್ಯವಾಗಿ ಹಾಡಿದರು. ಆಕಾಶ, ಸೂರ್ಯ, ಚಂದ್ರ, ನಕ್ಷತ್ರ, ಕಾಡು, ಪರ್ವತ, ಗಾಳಿಯ ಅಖಂಡ ಸಂಗೀತವೂ ಓಂಕಾರ ಸ್ವರೂಪ ದೇವನಿಗೆ ಆರತಿ ಸಲ್ಲಿಸುತ್ತವೆ. ಇದಲ್ಲವೇ ನಿಜವಾದ ಆರತಿ ಎಂದು ಪ್ರಶ್ನಿಸಿದರು.

ಮೆಕ್ಕಾದಲ್ಲಿ ನಾನಕ್‌ರು ಮಲಗಿದಾಗ, ಅವರ ಪಾದಗಳು ಮಸೀದಿಯಿರುವ ದಿಕ್ಕಲ್ಲಿತ್ತು. ಅದಕ್ಕೆ ಖಾಜಿ ಆಕ್ಷೇಪಿಸಿದರು. ದೇವರು ಎಲ್ಲ ದಿಕ್ಕಿನಲ್ಲೂ ಇದ್ದಾನಲ್ಲವೇ? ನಾನು ಯಾವ ದಿಕ್ಕಲ್ಲಿ ಕಾಲು ಹಾಕಿ ನಿದ್ದೆ ಮಾಡಲಿ ನೀವೇ ಹೇಳಿ ಎಂದು ಅವರನ್ನೇ ದಂಗುಬಡಿಸಿದರು ನಾನಕ್‌.

ಧರ್ಮ ಸ್ಥಾಪನೆಗೆ ನಾಂದಿ

ಸುಮಾರು ಮೂರು ದಶಕಗಳ ಕಾಲ ತಮ್ಮ ಮುಸ್ಲಿಂ ಸ್ನೇಹಿತ ಭಾಯ… ಮರ್ದನಾನೊಂದಿಗೆ ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಂಡ ನಾನಕ್‌ ದೇಶದ ಉದ್ದಗಲಕ್ಕೂ ಇರುವ ಪುಣ್ಯಕ್ಷೇತ್ರಗಳಿಗೆ ಹೋದರು. ವಿದೇಶ ಸಂಚಾರದಲ್ಲಿ ಸೌದಿ ಅರೇಬಿಯಾ, ಇರಾಕ್‌, ಶ್ರೀಲಂಕಾ, ಟಿಬೆಟ್‌, ರೋಮ್, ಬಾಂಗ್ಲಾದೇಶಗಳಿಗೂ ಭೇಟಿ ನೀಡಿದರು. ಈ ಅವಧಿಯಲ್ಲಿ ಅವರು ಅಸಂಖ್ಯಾತ ಋುಷಿಗಳು, ಪಂಡಿತರು, ಮೌಲಾಗಳು, ಸೂಫಿ ಸಂತರು, ದಾರ್ಶನಿಕರನ್ನು ಭೇಟಿಯಾಗಿ, ಚರ್ಚೆ ನಡೆಸಿದರು. ವಿವಿಧ ಧರ್ಮಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದರು. ಭೇಟಿ ನೀಡಿದ ಧಾರ್ಮಿಕ ಸ್ಥಳಗಳಲ್ಲಿ, ಪ್ರವಚನಗಳ ಮೂಲಕ ಜನರಿಗೆ ಸೃಷ್ಟಿಕರ್ತನ ಕಾಲಾತೀತ ಸ್ವರೂಪವನ್ನು ವಿವರಿಸಿದರು.

ವಾಲ್ಮೀಕಿ ಜಯಂತಿ: ಭೂಮಿ ಇರುವವರೆಗೂ ವಾಲ್ಮೀಕಿ ಅಜರಾಮರ

ಲಂಗರ್‌ ಆರಂಭಿಸಿದ್ದೇಕೆ?

ವಿಶ್ವ ಪರ್ಯಟನೆ ಮುಗಿದ ಮೇಲೆ, ರಾಬಿಯ ದಡದಲ್ಲಿರುವ ಕರ್ತಾರ್‌ಪುರದಲ್ಲಿ ನೆಲೆಸಿದರು. ಧ್ಯಾನದ ಮೂಲಕ ಮತ್ತು ಪ್ರತಿಯೊಬ್ಬ ವ್ಯಕ್ತಿಯೊಳಗಿನ ದೈವಿಕ ಉಪಸ್ಥಿತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಬದುಕುವುದನ್ನು ಕಲಿಸಿದರು. ಮದುವೆ ಮತ್ತು ಸಮಾಜದಂತಹ ಸಂಸ್ಥೆಗಳನ್ನು ಬೆಂಬಲಿಸಿದರು. ಲೌಕಿಕ ಬದುಕಿನಲ್ಲಿ ಇದ್ದುಕೊಂಡೇ ದೇವರನ್ನು ಪಡೆಯಲು ಸಾಧ್ಯವೆಂದರು. ಅವರ ಬೋಧನೆಗಳಿಂದ ಆಕರ್ಷಿತರಾಗಿ, ವಿವಿಧ ಧರ್ಮನಿಷ್ಠೆಯ ಶಿಷ್ಯವೃಂದ ಬೆಳೆಯತೊಡಗಿತು. ಅವರನ್ನು ಸಿಖ್ಖರೆಂದು ಕರೆಯಲಾಯಿತು. ವಿದ್ಯಾರ್ಥಿಗಳು ಅಥವಾ ಅನುಯಾಯಿಗಳು ಎಂದು ಅರ್ಥೈಸುವ ಸಂಸ್ಕೃತ ಪದ ‘ಶಿಷ್ಯ’ದಿಂದ ಹುಟ್ಟಿಕೊಂಡ ಪದವೇ ‘ಸಿಖ್‌’.

ಜಾತಿ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಮಾತನಾಡುತ್ತಿದ್ದ ಕಾಲ ಅದು. ನಾನಕ್‌ರು ಅದನ್ನು ಪ್ರಾಯೋಗಿಕವಾಗಿ ಅನ್ವಯಗೊಳಿಸಿದರು. ಜಾತಿ ಪದ್ಧತಿಯನ್ನು ಮುರಿಯಲು, ಸಾಮೂಹಿಕ ಅನ್ನಸಂತರ್ಪಣೆ ವ್ಯವಸ್ಥೆಯನ್ನು (ಲಂಗರ್‌) ಆರಂಭಿಸಿದರು. ಅನುಯಾಯಿಗಳು ಜಾತಿ, ಲಿಂಗ, ಧರ್ಮ, ಸ್ಥಾನಮಾನ ಲೆಕ್ಕಿಸದೇ, ಲಂಗರ್‌ನಲ್ಲಿ ಒಂದೇ ಸಾಲಲ್ಲಿ, ಒಂದೇ ರೀತಿಯ ಆಹಾರವನ್ನು ತಿನ್ನಲು ಶುರುಮಾಡಿದರು. ಇದರಿಂದಾಗಿ ಶಿಷ್ಯರಲ್ಲಿ ಸಹೋದರತ್ವ ಸೃಷ್ಟಿಯಾಯಿತು. ಉನ್ನತ, ಕೀಳು ಎಂಬ ಭಾವನೆಯನ್ನು ಸಂಪೂರ್ಣವಾಗಿ ಕರಗಿಸಿತು. ಸ್ವಯಂಸೇವಾ ಮನೋಭಾವ ಸಿಖ್‌ ಪಂಥದ ಗುರುತಾಯಿತು. ಆರಾಧನೆಯ ಈ ಸ್ಥಳವು ನಂತರದಲ್ಲಿ ಕರ್ತಾರ್‌ಪುರ್‌ ಸಾಹಿಬ್‌ ಗುರುದ್ವಾರವೆಂದು ಹೆಸರುವಾಸಿಯಾಯಿತು.

ವಿಗ್ರಹಾರಾಧನೆ ಇಲ್ಲ

ಸಿಖ್‌ ಧರ್ಮದ ಪ್ರಕಾರ, ದೇವರು ಒಬ್ಬನೇ. ದೇವರ ಅವತಾರ ಮತ್ತು ಪುನರ್ಜನ್ಮವನ್ನು ಅವರು ನಂಬುವುದಿಲ್ಲ. ಆದರೆ, ದೇವರನ್ನು ಹಿಂದೂ ಮತ್ತು ಮುಸ್ಲಿಮರು ಬಳಸುವ ಹರಿ, ರಾಮ…, ರಹೀಮ…, ರಬ್ನಾಮಗಳಿಂದ ಕರೆಯಲಾಗುತ್ತದೆ. ದೇವರನ್ನು ದೇವರಂತೆ ಕಾಣಲಾಗುತ್ತದೆ. ಹಾಗಾಗಿ, ಅಲ್ಲಿ ವಿಗ್ರಹಾರಾಧನೆಯಿಲ್ಲ. ಸಿಖ್ಖರು ತೀರ್ಥಯಾತ್ರೆ, ಉಪವಾಸ, ಮೂಢನಂಬಿಕೆ ಮತ್ತು ಇತರ ಆಚರಣೆಗಳನ್ನು ನಂಬುವುದಿಲ್ಲ. ಹಾಗೆಯೇ, ಗುರುವಿನ ಸ್ಥಾನದ ಬಗ್ಗೆಯೂ ನಿಖರತೆಯಿದೆ. ಗುರು ದೇವರಲ್ಲ. ಆತ ಕತ್ತಲೆಯಿಂದ ಬೆಳಕಿನತ್ತ ಸೆಳೆಯುವವನು, ಬದುಕಲು ಸರಿಯಾದ ಮಾರ್ಗವನ್ನು ತೋರುವವನು. ಅವನು ದೇವರ ಸೇವಕ ಮಾತ್ರ.

ತಮ್ಮನ್ನೂ ದೇವರ ಸೇವಕನೆಂದೇ ಕರೆದುಕೊಂಡರು ಗುರುನಾನಕ್‌. ತಮ್ಮ ಅನುಯಾಯಿಗಳಿಗೆ ಕಿರತ್‌ ಕರೋ, ನಾಮ… ಜಪೋ ಮತ್ತು ವಾಂದ್‌ ಚಕೋ ಎನ್ನುವ ಮೂರು ಮುಖ್ಯ ಬೋಧನೆಗಳ ಮೂಲಕ ಬದುಕಿನ ಹೊಸತೊಂದು ಹಾದಿಯನ್ನು ತೋರಿದರು. ನಿಯತ್ತಿಂದ ಕೆಲಸ ಮಾಡು, ಪ್ರಾಮಾಣಿಕ ಜೀವನ ನಡೆಸು ಎನ್ನುವುದೇ ಕಿರತ್‌ ಕರೋ; ನಾಮ… ಜಪೋ ಎಂದರೆ ಆಂತರಿಕ ಶುದ್ಧತೆ, ನಿಸ್ವಾರ್ಥತೆ ಮತ್ತು ನಿಜವಾದ ಉತ್ಸಾಹದಿಂದ ದೇವರ ಹೆಸರನ್ನು ಉಚ್ಚರಿಸುವ ಮೂಲಕ ಮುಕ್ತಿ ಪಡೆಯಲು ಪ್ರೇರಕ. ಹಂಚಿ ತಿನ್ನುವುದು ಹಾಗೂ ದಾನ ಮಾಡುವ ಮೂಲಕ ಅಹಂಕಾರ ಮತ್ತು ಅಸೂಯೆಯನ್ನೂ ತೊರೆಯಲು ಕಲಿಸಿಕೊಡುವುದು ವಾಂದ್‌ ಚಕೋ. ಅವರ ಬೋಧನೆಗಳು ಇಂದಿಗೂ ಪ್ರಸ್ತುತ.

- ನಾಗೇಶ ಜಿ.ವೈದ್ಯ, ಬೆಂಗಳೂರು

Follow Us:
Download App:
  • android
  • ios