ಕೊರೋನಾ ಸಂಕಷ್ಟದಲ್ಲಿರೋ ಜನರಿಗೆ ನೆರವಾಗಿ: ತಮ್ಮ ಶಾಸಕರಿಗೆ ಸಿದ್ದು ಮನವಿ
ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಅಬ್ಬರ ಮುಂದುವರೆದಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ಸಂಕಷ್ಟದಲ್ಲಿರುವಂತ ಜನರಿಗೆ ನೆರವಿಗೆ ರಾಜಕೀಯ ಮುಖಂಡರು ಧಾವಿಸುವಂತ ತುರ್ತು ಸಂದರ್ಭ ಒದಗಿ ಬಂದಿದೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರುಗಳಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು, (ಏ.23): ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆಸ್ಪತ್ರೆ, ಬೆಡ್, ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಜನರು ಆತಂಕದಲ್ಲಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ಅಘೋಷಿತ ಲಾಕ್‌ಡೌನ್ ಆಗಿದ್ದು, ದುಡಿದು ಜೀವನ ಮಾಡುವವರಿಗೆ ಸಾಕಷ್ಟು ತೊಂದರೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರಿಗೆ ಪತ್ರ ಬರೆದಿದ್ದು, ಕೊರೋನಾ ಸಂಕಷ್ಟದಲ್ಲಿರುವಂತ ಜನರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ. ಮಾಜಿ ಸಿಎಂ ಪತ್ರದಲ್ಲಿ ಏನ್ ಇದೆ ಎನ್ನುವುದು ಈ ಕೆಳಗಿನಂತಿದೆ ಓದಿ..
ತುಮಕೂರು: ಕೋವಿಡ್ ಶವಗಳ ಸಂಸ್ಕಾರ ನಡೆಸುವ ಅಸಮಾನ್ಯ ಕನ್ನಡತಿ
ಆತ್ಮೀಯ ಶಾಸಕ ಮಿತ್ರರೇ,
ಕೋವಿಡ್ 2ನೇ ಅಲೆ ರಾಜ್ಯ ಮತ್ತು ರಾಷ್ಟ್ರವನ್ನು ಬಾಧಿಸುತ್ತಿದೆ. ಈ ಸಂದರ್ಭದಲ್ಲಿ ಭ್ರಷ್ಟ, ಬೇಜವಾಬ್ದಾರಿ, ಅದಕ್ಷ ಮತ್ತು ಜನವಿರೋಧಿ ಸ್ವಭಾವದ ಬಿ.ಜೆ.ಪಿ. ಸರ್ಕಾರಗಳು ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿವೆ. ತಜ್ಞರುಗಳು ಮತ್ತು ಪರಿಣಿತರು 2020ರ ನವೆಂಬರ್ ತಿಂಗಳಲ್ಲಿಯೇ ಕೋವಿಡ್ 2ನೇ ಅಲೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಹೊತ್ತಿಗೆ ತನ್ನ ಭೀಕರತೆಯನ್ನು ಪ್ರದರ್ಶಿಸಲಿದೆ ಎಂದು ಹೇಳಿದ್ದರು.
ಸದರಿ ವರದಿಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಬದಲಾಗಿ ಕೇಂದ್ರದ ಆರೋಗ್ಯ ಸಚಿವರುಗಳಾದಿಯಾಗಿ ಅನೇಕರು ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿಯೇ 'ನಾವು ಕೋವಿಡ್ ವಿರುದ್ದ ಜಯ ಸಾಧಿಸುವ ಹಂತಕ್ಕೆ ಬಂದಿದ್ದೇವೆ. ಕೊರೊನಾವನ್ನು ಸಮರ್ಥವಾಗಿ ಎದುರಿಸಿದ್ದೇವೆ ಎಂದು ಜಯಘೋಷ ಮಾಡಲಾರಂಭಿಸಿದರು.
ಆ ಸಂಧರ್ಭದಲ್ಲೂ ಸಹ ವೈದ್ಯಕೀಯ ತಜ್ಞರುಗಳು ನಾವಿನ್ನೂ ಕೊರೊನಾದ ವಿರುದ್ದ ಗೆಲುವು ಸಾಧಿಸಿಲ್ಲ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಿರಲಿದೆ ಎಂದು ಎಚ್ಚರಿಕೆ ನೀಡುತ್ತಲೆ ಬಂದರು. ಈ ಎಚ್ಚರಿಕೆಗಳನ್ನು ಸರ್ಕಾರಗಳು ಕಸದ ಬುಟ್ಟಿಗೆ ಎಸೆದವು.' ಸಮರ್ಪಕವಾಗಿ ಟೆಸ್ಟ್‍ಗಳನ್ನೂ ಸಹ ನಡೆಸುತ್ತಿಲ್ಲ, ನಡೆಸಿದ ಟೆಸ್ಟ್‍ಗಳ ವರದಿ ವಾರವಾದರೂ ಜನರ ಕೈಗೆ ವೈದ್ಯರುಗಳ ಕೈಗೆ ಸಿಗುತ್ತಿಲ್ಲ. ಇದೆಲ್ಲದರಿಂದಾಗಿ ಕೋವಿಡ್‍ನಿಂದ ಮರಣ ಹೊಂದುವವರಷ್ಟೆ ಆತಂಕದಿಂದ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ.
ತಜ್ಞರ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಲ್ಯಾಬುಗಳು, ಆಸ್ಪತ್ರೆಗಳು, ಹಾಸಿಗೆಗಳು, ಆಕ್ಸಿಜನ್ ವ್ಯವಸ್ಥೆ, ಐ.ಸಿ.ಯು, ವೆಂಟಿಲೇಟರ್‍ಗಳು, ಕೋವಿಡ್ ನಿಯಂತ್ರಣಕ್ಕೆ ಬೇಕಾದ ಔಷಧಿಗಳು ಇತ್ಯಾದಿಯಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದರೆ ಇವತ್ತಿನ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಈ ಸಿದ್ದತೆಗಳನ್ನೇನೂ ಮಾಡಿಕೊಳ್ಳದ ಕಾರಣದಿಂದಾಗಿಯೇ ಜನರು ಅನಾಥರಂತೆ ರಸ್ತೆಗಳಲ್ಲಿ, ಆಸ್ಪತ್ರೆಯ ವರಾಂಡಗಳಲ್ಲಿ ಮರಣ ಹೊಂದುತ್ತಿದ್ದಾರೆ.
ಹಾಗಾಗಿ ಜನ ಕೊರೊನಾದಿಂದ ಮರಣ ಹೊಂದಿದರು ಎಂಬುದಕ್ಕಿಂತ ಬಿ.ಜೆ.ಪಿ. ಸರ್ಕಾರಗಳು ತಮ್ಮ ಅದಕ್ಷತೆ ಮತ್ತು ಉಡಾಫೆ ಸ್ವಭಾವದಿಂದಾಗಿ ಅಮಾಯಕ ಜನಗಳ ಕೊಲೆಗಳಿಗೆ ಕಾರಣರಾಗುತ್ತಿವೆ. ಮರಣ ಹೊಂದುತ್ತಿರುವ ಬಹುಪಾಲು ಜನರು ರಾಜಕೀಯ ನಿರ್ಲಕ್ಷ್ಯದಿಂದ ಆದ ಕೊಲೆಗಳು ಎನ್ನದೆ ಅನ್ಯ ದಾರಿ ಇಲ್ಲ.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರಗಳಿಗೆ ಮರಣ ಹೊಂದಿದವರ ಶವಸಂಸ್ಕಾರವನ್ನೂ ಸಹ ಘನತೆಯಿಂದ ನಡೆಸಲು ಸಾಧ್ಯವಾಗದಷ್ಟರ ಮಟ್ಟಿಗೆ ಪರಿಸ್ಥಿತಿ ಅರಾಜಕವಾಗಿದೆ. ಈ ಬಿ.ಜೆ.ಪಿ. ಸರ್ಕಾರಗಳಿಂದ ಜನ ಏನನ್ನು ನಿರೀಕ್ಷೆ ಮಾಡದಷ್ಟು ಮಟ್ಟಿಗೆ ಹತಶಾರಾಗಿದ್ದಾರೆ. ಕಳೆದ ವರ್ಷ ಕೋವಿಡ್ ಮೊದಲ ಅಲೆ ಅಪ್ಪಳಿಸಿದಾಗ ಮಾಡಿದ ಅರಾಜಕ ಮತ್ತು ತುಘಲಕ್‍ಶಾಹಿ ಆಡಳಿತವನ್ನೇ ಬಿ.ಜೆ.ಪಿ. ಸರ್ಕಾರ ಈಗಲೂ ಮಾಡುತ್ತಿದೆ. ಏಕಾಏಕಿ ಕಫ್ರ್ಯೂ ವಿಧಿಸುವುದು, ಬೀದಿಗಳಲ್ಲಿದ್ದ ಜನರ ಮೇಲೆ ಲಾಠಿ ಚಾರ್ಜು ಮಾಡಿ ಓಡಿಸುವುದು, ಅಂಗಡಿ ಮುಂಗಟ್ಟುಗಳನ್ನು
ಯಾವುದೇ ಮುನ್ಸೂಚನೆ ನೀಡದೆ ಬಾಗಿಲು ಮುಚ್ಚಿಸುವುದು ಮತ್ತು ಬಾಯಿಗೆ ಬಂದಂತೆ ಸಚಿವರುಗಳು, ಅಧಿಕಾರಿಗಳು ಮಾತನಾಡಿ ಜನರಲ್ಲಿ ಗೊಂದಲ ಹುಟ್ಟಿಸುವುದನ್ನೇ ಈಗಲೂ ಮಾಡುತ್ತಿದ್ದಾರೆ.
ಸಂಕಷ್ಟದಲ್ಲಿರುವ ಬಡಜನರು ಹಸಿವಿನಿಂದ ನರಳದಂತೆ ನೋಡಿಕೊಳ್ಳಲು, ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕಗೊಳಿಸಬೇಕಾಗಿತ್ತು. ಅದರ ಬದಲಾಗಿ ಜನರಿಗೆ ನೀಡುವ ಪಡಿತರ ಅಕ್ಕಿಯನ್ನು 2 ಕೆ.ಜಿ ಗೆ ಇಳಿಸಲಾಗಿದೆ. ಇಂದಿರಾ ಕ್ಯಾಂಟಿನ್‍ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ರೈತರು ಬಳಸುವ ರಸಗೊಬ್ಬರ ದರಗಳನ್ನು ಕ್ವಿಂಟಾಲ್‍ಗೆ 1400 ಗಳಷ್ಟು ಹೆಚ್ಚು ಮಾಡಲಾಗಿದೆ.
ಜನರನ್ನು ಶತ್ರುಗಳು ಎಂದು ಭಾವಿಸುವ ಸರ್ಕಾರಗಳು ಮಾತ್ರ ಈ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯ. ಜನರು ಸಂಕಷ್ಟದಲ್ಲಿರುವಾಗ, ದುಡಿಮೆಯಿಲ್ಲದೆ ಕೈಯಲ್ಲಿ ಹಣವಿಲ್ಲದಿರುವಾಗ ಸರ್ಕಾರ ಅವರ ಕಡೆಯ ಹನಿ ರಕ್ತವನ್ನೂ ಹೀರಲು ಹೊರಟಿದೆ. ಇಂತಹ ಜನದ್ರೋಹಿ ಆಡಳಿತವನ್ನು ನಾನು ಚರಿತ್ರೆಯಲ್ಲಿ ಎಲ್ಲೂ ಓದಿಲ್ಲ ಮತ್ತು ಕೇಳಿಲ್ಲ.
ಇಂತಹ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಕಳೆದ ಬಾರಿ ಜನರ ಜೊತೆ ನಿಂತು ಅನ್ನ, ಆಹಾರದ ವ್ಯವಸ್ಥೆಯನ್ನು ಮಾಡಲು ಸಾಕಷ್ಟು ಶ್ರಮಿಸಿದ್ದೀರಿ. ಹಾಗೆಯೇ ರೈತರು ಬೆಳೆದ ತರಕಾರಿ, ಹಣ್ಣು ಇತರೆ ಉತ್ಪನ್ನಗಳನ್ನು ಖರೀದಿಸಿ, ಜನರಿಗೆ ತಲುಪಿಸುವ ಸ್ತುತ್ಯಾರ್ಹವಾದ ಕೆಲಸಗಳನ್ನು ಮಾಡಿದ್ದೀರಿ. ಇವೆಲ್ಲವನ್ನು ಜನತೆ ಕೃತಜ್ಞತೆಯಿಂದ ನೆನೆಸುತ್ತಿದ್ದಾರೆ.
ಕೋವಿಡ್‍ನ 2ನೇ ಅಲೆ ರಾಕ್ಷಸ ರೂಪವನ್ನು ತಳೆಯುತ್ತಿರುವ ಈ ಸಂದರ್ಭದಲ್ಲೂ ಸಹ ತಾವುಗಳು ಜನರ ಜೊತೆ ನಿಂತು, ಆಸ್ಪತ್ರೆ, ಆಕ್ಸಿಜನ್, ಔಷಧಿಗಳು, ಆಂಬ್ಯುಲೆನ್ಸ್‍ಗಳು, ಇನ್ನಿತರ ಚಿಕಿತ್ಸೆಗಳಿಗೆ ನೆರವಾಗಬೇಕೆಂದು ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ಆಹಾರದ ವ್ಯವಸ್ಥೆಯನ್ನು ಸಹ ಕಳೆದ ವಷರ್`ದಂತೆಯೇ ಈ ವರ್ಷವೂ ಮಾಡುವ ಮೂಲಕ ಜನರ ಸಕಲ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಕಾರ್ಯಗಳನ್ನು ಮಾಡಬೇಕೆಂದು ಕೋರುತ್ತೇನೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ಸಿದ್ದರಾಮಯ್ಯ