ಎಸ್ಸಿ, ಎಸ್ಟಿಗಳಿಗೆ ಸಾಮಾನ್ಯ ಕೋಟಾದಲ್ಲೂ ಕೆಲಸ ಸಿಗಬೇಕು ಎಂದು ಸಿಎಮ ಕುಮಾರಸ್ವಾಮಿಗೆ ಬರೆದಿರುವ ತಮ್ಮ ಪತ್ರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

 ಬೆಂಗಳೂರು[ನ.30]: ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಎಷ್ಟೇ ಅಂಕ ಕಡೆದರೂ ಅವರನ್ನು ಸಾಮಾನ್ಯ ವರ್ಗದಡಿ ನೇಮಕಾತಿ ಮಾಡಬಾರದು, ಮೀಸಲಾತಿ ಅಡಿಯಲ್ಲೇ ಪರಿಗಣಿಸಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಬರೆದಿರುವ ಪತ್ರವನ್ನು ಕೂಡಲೇ ವಾಪಸ್‌ ಪಡೆದು, ರಾಜ್ಯದ ಸಿವಿಲ್‌ ಸೇವೆಗಳ ನೇಮಕಾತಿಯಲ್ಲಿ 1995ರ ಆದೇಶದನ್ವಯ ಮೀಸಲಾತಿ ಪಾಲನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಕೋರಿದ್ದಾರೆ.

ಈ ಸಂಬಂಧ ಖುದ್ದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಸಿದ್ದರಾಮಯ್ಯ ಅವರು, ರಾಜ್ಯದ ಸಿವಿಲ್‌ ಸೇವೆಗಳ ನೇರ ನೇಮಕಾತಿಯಲ್ಲಿ ‘1995 ಜೂನ್‌ 20ರ ಸರ್ಕಾರಿ ಆದೇಶದ ಪದ್ಧತಿ’ಯನ್ವಯ ಮೀಸಲಾತಿ ಪಾಲನೆ ಮಾಡಬೇಕು. 2015ರ ಗೆಜೆಟೆಡ್‌ ಪ್ರೊಬೇಷನ​ರ್‍ಸ್ ಪರೀಕ್ಷೆಯ ಪೂರ್ವ ಭಾವಿ ಪರೀಕ್ಷೆ, ಮುಖ್ಯಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗೂ ಸೇರಿದಂತೆ ಯಾವುದೇ ನೇಮಕಾತಿಯನ್ನು 1995ರ ಆದೇಶಕ್ಕೆ ವಿರುದ್ಧವಾಗಿ ನಡೆಸಬಾರದು ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಪ.ಜಾತಿ, ಪ.ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅಂಕ ಪಡೆದಿದ್ದರೂ ಅವರನ್ನು ಮೀಸಲಾತಿಯಲ್ಲಿಯೇ ಪರಿಗಣಿಸಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸರ್ಕಾರ ಇದೇ ನವೆಂಬರ್‌ 3ರಂದು ಬರೆದಿರುವ ಪತ್ರವನ್ನು ವಾಪಸ್‌ ಪಡೆದು, ಎಲ್ಲಾ ಹುದ್ದೆಗಳ ಪೂರ್ವಭಾವಿ ಪರೀಕ್ಷೆ, ಮುಖ್ಯಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗಳಲ್ಲಿ 1995ರ ಆದೇಶದ ಪದ್ಧತಿಯನ್ನೇ ಅನುಸರಿಸಲು ಆದೇಶ ಹೊರಡಿಲು ನಿರ್ಧರಿಸಲಾಗಿತ್ತು. ಆದರೆ, ಈ ವರೆಗೂ ಅಧಿಕೃತವಾಗಿ ಆ ಆದೇಶ ಹೊರಡಿಸಿಲ್ಲ.

ಇದರಿಂದ ಕೆಪಿಎಸ್‌ಸಿಯ ನೇಮಕಾತಿ ಅಧಿಕಾರಿಗಳು ಕಳೆದ ನವೆಂಬರ್‌ 3ರಂದು ಸರ್ಕಾರ ನೀಡಿರುವ ಪತ್ರದಲ್ಲಿ ನೀಡಿರುವ ಸೂಚನೆ ಅನುಸಾರವೇ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದಾರೆ ಎಂದು ದಲಿತ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರು ನನ್ನ ಗಮನಕ್ಕೆ ತಂದಿದ್ದಾರೆ. ಹಾಗೇನಾದರೂ ಆಗಿದ್ದಲ್ಲಿ ಪ.ಜಾತಿ, ಪ.ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೂಡಲೇ ನ.3ರ ಪತ್ರವನ್ನು ಸರ್ಕಾರ ವಾಪಸ್‌ ಪಡೆದು, 1995ರ ಸರ್ಕಾರಿ ಆದೇಶದ ಪದ್ಧತಿಯನ್ವಯವೇ ಸಿವಿಲ್‌ ಸೇವೆಗಳ ನೇಮಕಾತಿಯಲ್ಲಿ ಮೀಸಲಾತಿ ಪಾಲನೆ ನಾಡಬೇಕು. 2015ರ ಗೆಜೆಟೆಡ್‌ ಪ್ರೊಬೇಷನ​ರ್‍ಸ್ ಪರೀಕ್ಷೆಯ ಪೂರ್ವ ಭಾವಿ ಪರೀಕ್ಷೆ, ಮುಖ್ಯಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗೂ ಸೇರಿದಂತೆ ಯಾವುದೇ ನೇಮಕಾತಿಯನ್ನು 1995ರ ಆದೇಶಕ್ಕೆ ವಿರುದ್ಧವಾಗಿ ನಡೆಸಬಾರದು ಎಂದು ಪತ್ರದಲ್ಲಿ ಕೋರಿದ್ದಾರೆ.