ಸಚಿವ ಜಮೀರ್ ಅಹ್ಮದ್ ಖಾನ್, 2028ರ ವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆದಿದ್ದಾರೆ. ಸಿದ್ದರಾಮಯ್ಯ ನಂತರ ಡಿಕೆಶಿ ಮುಖ್ಯಮಂತ್ರಿಯಾಗಲಿದ್ದು, ಪಂಚ ಗ್ಯಾರಂಟಿಗಳ ಆಧಾರದ ಮೇಲೆ ಮುಂಬರುವ ಚುನಾವಣೆ ಎದುರಿಸುವುದಾಗಿ ತಿಳಿಸಿದರು.
ಕೋಲಾರ (ಜ.9): ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆಗಳಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಪೂರ್ಣವಿರಾಮ ಇಟ್ಟಿದ್ದಾರೆ. ಕೋಲಾರದ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನೂತನ ಮಸೀದಿ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ಮಹತ್ವದ ಭವಿಷ್ಯ ನುಡಿದಿದ್ದಾರೆ.
ಯಾವ ಕ್ರಾಂತಿಯೂ ಇಲ್ಲ, ಬ್ರಾಂತಿಯೂ ಇಲ್ಲ - ಬಿಜೆಪಿಗೆ ಟಾಂಗ್
ರಾಜ್ಯ ಸರ್ಕಾರ ಪತನವಾಗುತ್ತದೆ ಎನ್ನುತ್ತಿದ್ದ ವಿರೋಧ ಪಕ್ಷಗಳಿಗೆ ಜಮೀರ್ ಖಾನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದವರಿಗೆ ಆಗಲೇ ಹೇಳಿದ್ದೆ, ಯಾವ ಕ್ರಾಂತಿಯೂ ಆಗಲ್ಲ, ಬ್ರಾಂತಿಯೂ ಆಗಲ್ಲ. ಕ್ರಾಂತಿ ಅಂದವರಿಗೆ ವಾಂತಿ-ಬೇದಿ ಆಗುತ್ತದೆ ಎಂದು ಅಂದೇ ಎಚ್ಚರಿಸಿದ್ದೆ. ಈಗ ನವೆಂಬರ್, ಡಿಸೆಂಬರ್ ಮುಗಿದು ಸಂಕ್ರಾಂತಿ ಬಂದಿದೆ, ಈಗಲೂ ಅವರಿಗೆ ನಿರಾಸೆ ಗ್ಯಾರಂಟಿ. 2028ರ ವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಮುಂದಿನ ಸಿಎಂ ಜಮೀರ್ ಹೇಳಿದ್ದೇನು?
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ ಜಮೀರ್, ಡಿಕೆಶಿ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆಯೂ ಹೌದು. ಸಿದ್ದರಾಮಯ್ಯ ಅವರ ನಂತರ ಅವರೇ ಸಿಎಂ ಆಗಲಿದ್ದಾರೆ. ಡಿಕೆಶಿ ಅವರ ರಕ್ತದಲ್ಲೇ ಕಾಂಗ್ರೆಸ್ ಇದೆ, ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಸದ್ಯಕ್ಕೆ ಹೈಕಮಾಂಡ್ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಪರವಾಗಿದೆ ಎಂದು ತಿಳಿಸುವ ಮೂಲಕ ಪಕ್ಷದೊಳಗೆ ಅಧಿಕಾರ ಹಂಚಿಕೆ, ಭಿನ್ನಾಭಿಪ್ರಾಯವಿಲ್ಲವೆಂದು ಸ್ಪಷ್ಟಪಡಿಸಿದರು.
ಪಂಚ ಗ್ಯಾರಂಟಿ, ಭಾಗ್ಯಗಳ ತೋರಿಸಿಯೇ ಮತ ಕೇಳುತ್ತೇವೆ
ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಮಾಹಿತಿ ನೀಡಿದ ಸಚಿವರು, ಏಪ್ರಿಲ್ ಅಥವಾ ಮೇ ತಿಂಗಳ ಒಳಗೆ ಜಿಲ್ಲಾ ಪಂಚಾಯ್ತಿ ಚುನಾವಣೆಗಳು ನಡೆಯಲಿವೆ. ನಾವು ಜನರ ಮುಂದೆ ಹೋಗಿ ಮತ ಕೇಳಲು ಸಿದ್ದರಾಮಯ್ಯ ಸರ್ಕಾರ ನೀಡಿರುವ ಪಂಚ ಗ್ಯಾರಂಟಿ ಮತ್ತು ಹತ್ತಾರು ಭಾಗ್ಯಗಳೇ ಸಾಕು. ನಮ್ಮ ಪಕ್ಷದ ಸಾಧನೆಗಳನ್ನು ತೋರಿಸಿಯೇ ನಾವು ಮತ ಕೇಳುತ್ತೇವೆ ಎಂದು ಅತ್ಮವಿಶ್ವಾಸದಿಂದ ನುಡಿದರು.
ಹಿಂದೂ-ಮುಸ್ಲಿಂ ಹೊರತು ಸಾಧನೆ ಇಲ್ಲ: ಬಿಜೆಪಿ ವಿರುದ್ಧ ಜಮೀರ್ ಕಿಡಿ
ಬಿಜೆಪಿಯ ರಾಜಕಾರಣವನ್ನು ಟೀಕಿಸಿದ ಜಮೀರ್, ಬಿಜೆಪಿಯವರಿಗೆ ಹಿಂದೂಗಳೂ ಬೇಕಿಲ್ಲ, ಮುಸ್ಲಿಮರೂ ಬೇಕಿಲ್ಲ. ಸಮಾಜದಲ್ಲಿ ಜಾತಿ-ಧರ್ಮದ ವಿಷ ಬೀಜ ಬಿತ್ತುವುದನ್ನು ಬಿಟ್ಟು ಅವರಿಗೇನೂ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೆ ಇಸ್ಲಾಂ ಧರ್ಮ ಎಂದಿಗೂ ಜಾತಿ ಭೇದ ಮಾಡಲು ಕಲಿಸಿಲ್ಲ. 'ಸಾರೆ ಜಹಾನ್ ಸೆ ಅಚ್ಚಾ' ಎಂದು ಹಾಡುವುದನ್ನು ನಮ್ಮ ಧರ್ಮ ಕಲಿಸಿಕೊಟ್ಟಿದೆ ಎಂದು ಸಾಮಾಜಿಕ ಸಾಮರಸ್ಯದ ಬಗ್ಗೆ ಮಾತನಾಡಿದರು.


