ಶಾಸಕ ಬಸವರಾಜ ರಾಯರಡ್ಡಿ ಅವರು, ಸಿದ್ದರಾಮಯ್ಯನವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದ್ದು, ಪ್ರಧಾನಿ ಮೋದಿ ಕೂಡ ಇದೇ ಮಾದರಿ ಅನುಸರಿಸುತ್ತಿದ್ದಾರೆ ಎಂದರು.
ಕೊಪ್ಪಳ (ಡಿ.21): ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾರೂ ತಲೆಕಡೆಸಿಕೊಳ್ಳಬೇಡಿ. ಸಿದ್ದರಾಮಯ್ಯ ಅವರೇ ಪೂರ್ಣ ಅವಧಿಗೆ ಇರಲಿದ್ದು, ರಾಜ್ಯದಲ್ಲಿ ಇನ್ನು 2.5 ವರ್ಷ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಅವರು ಸಿದ್ದರಾಮಯ್ಯ ಪರ ಮತ್ತೊಮ್ಮೆ ಬ್ಯಾಟಿಂಗ್ ಮಾಡಿದ್ದಾರೆ.
ಸಿಎಂ ಅಧಿಕಾರ ಹಸ್ತಾಂತರ ಇಲ್ಲ ಎಂದ ರಾಯರಡ್ಡಿ
ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಶನಿವಾರ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಆ ಸಿಎಂ, ಈ ಸಿಎಂ ಅಂತ ಯಾರೂ ತಲೆ ಕೆಡೆಸಿಕೊಳ್ಳಬೇಡಿ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಹೇಳಿದಂತೆ ಸಿದ್ದರಾಮಯ್ಯ ಅವರು ಪೂರ್ಣ ಅವಧಿಯ ಸಿಎಂ ಆಗಿದ್ದು, ಅವರೇ ಆ ಸ್ಥಾನದಲ್ಲಿ ಇರುತ್ತಾರೆ ಎಂದು ಹೇಳುವ ಮೂಲಕ ಅಧಿಕಾರ ಹಸ್ತಾಂತರ ಕುರಿತು ಸ್ಪಷ್ಟನೆ ನೀಡಿದರು.
ಗ್ಯಾರಂಟಿ ಮಾದರಿಯನ್ನೇ ಪ್ರಧಾನಿ ಮೋದಿ ಅನುಸರಿಸುತ್ತಿದ್ದಾರೆ:
ರಾಜ್ಯದಲ್ಲಿ ಸಾರ್ವಜನಿಕರು ಅಭಿವೃದ್ಧಿ ಕಾಣುತ್ತಿದ್ದು, ಜನರ ತಲಾ ಆದಾಯ ಹೆಚ್ಚಳ ಆಗಿದೆ. ತಿಂಗಳಿಗೆ ಜನರಿಗೆ ₹6000 ರಿಂದ ₹7 ಸಾವಿರ ಹಣ ಗ್ಯಾರಂಟಿ ಯೋಜನೆಯಿಂದ ಜನರಿಗೆ ಸಿಗುತ್ತಿದೆ. ಇದರಿಂದ ಜನರು ಹೆಚ್ಚು ಖರೀದಿಗೆ ಮುಂದಾಗಿದ್ದಾರೆ. ಇದರಿಂದ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಳವಾಗಿದೆ. ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಇತರ ರಾಜ್ಯಗಳ ಚುನಾವಣೆಗಳಲ್ಲಿ ಯೋಜನೆಗಳನ್ನು ಘೋಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಸಮರ್ಥಿಸಿಕೊಂಡರು.


