ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ಶಾಸಕ ಬಸವರಾಜ ವಿ.ಶಿವಗಂಗಾ ಆಶಯ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಸಿಎಂ ಆದರೆ ಅವರು ಹೇಳಿದಂತೆ ಕಸ ಹೊಡೆಯುವ ಕೆಲಸವನ್ನೂ ಮಾಡಲು ಸಿದ್ಧ ಎಂದು ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. 

ದಾವಣಗೆರೆ (ಡಿ.21): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೈವಭಕ್ತರು. ನಾನೂ ಸಹ ದೈವಭಕ್ತನೇ ಆಗಿದ್ದು, ಡಿಕೆಶಿ ಮುಖ್ಯಮಂತ್ರಿ ಆಗಲೆಂದು ಬೇಡಿಕೊಂಡಿದ್ದೇನೆ. ಈಗಲೂ ಡಿಕೆಶಿ ಸಾಹೇಬರ ಜೊತೆಗಿದ್ದು, ಅವರು ಸಿಎಂ ಆಗಿ ಕಸ ಹೊಡೆಯುವಂತೆ ಹೇಳಿದರೂ ಮಾಡುತ್ತೇನೆ ಎಂದು ಶಾಸಕ ಬಸವರಾಜ ವಿ.ಶಿವಗಂಗಾ ಅವರು ಡಿಕೆ ಪರ ಬದ್ಧತೆ ಪ್ರದರ್ಶಿಸಿದರು.

ಡಿಕೆಶಿ ಸಾಹೇಬರ ಜೊತೆ ನಿಲ್ಲುತ್ತೇನೆ:

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮುಂದೆಯೂ ಡಿ.ಕೆ.ಶಿವಕುಮಾರ್‌ ಸಾಹೇಬರ ಜೊತೆಗೆ ಇರುತ್ತೇನೆ. ಅಷ್ಟಕ್ಕೂ ಡಿಕೆಶಿಯವರು ದೇವಸ್ಥಾನಕ್ಕೆ ಹೋದರೆ ತಪ್ಪೇನು? ಸಂಕ್ರಾಂತಿ ವೇಳೆ ಸೂರ್ಯಪಥ ಬದಲಾವಣೆ ಆಗುತ್ತದೆ. ಆಗ ಡಿಕೆಶಿ ಸಾಹೇಬರಿಗೂ, ನಮಗೂ, ನಿಮಗೂ ಎಲ್ಲರಿಗೂ ಒಳ್ಳೆಯದು ಆಗಬಹುದು ಎಂದರು.

ಡಿಕೆಶಿ ಸಿಎಂ ಆದರೆ ನಾನು ಕಸ ಹೊಡೆಯಲು ಸಿದ್ಧ

ಡಿಕೆಶಿ ಮುಖ್ಯಮಂತ್ರಿಯಾದರೆ ನೀವು ರಾಜಕೀಯ ಕಾರ್ಯದರ್ಶಿ ಆಗುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್‌ ಸಿಎಂ ಆಗಿ ಕಾಂಗ್ರೆಸ್ ಪಕ್ಷದಲ್ಲಿ ಕಸ ಹೊಡೆಯುವ ಕೆಲಸ ಕೊಟ್ಟರೂ ನಾನು ಮಾಡುತ್ತೇನೆ ಎಂದು ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ದಲಿತ, ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಅಲ್ಪಸಂಖ್ಯಾತ ಹೀಗೆ ಎಲ್ಲಾ ಸಮುದಾಯಗಳ ಸಮರ್ಥ ನಾಯಕರಿದ್ದಾರೆ. ಆ ಎಲ್ಲರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಎಲ್ಲಾ ಮಠಾಧೀಶರೂ ತಮ್ಮ ತಮ್ಮ ಸಮುದಾಯದ ನಾಯಕರು ಮುಖ್ಯಮಂತ್ರಿ ಆಗಲೆಂದು ಹೇಳುತ್ತಾರೆ. ಅದರಲ್ಲಿ ಯಾವುದೇ ತಪ್ಪೂ ಇಲ್ಲ. ಆದರೆ, ಎಲ್ಲವೂ ಅಂತಿಮವಾಗಿ ನಿರ್ಧರಿಸುವುದು ನಮ್ಮ ಪಕ್ಷದ ಹೈಕಮಾಂಡ್ ಎಂದು ಹೇಳಿದರು.