ರಾಜ್ಯದ ಸಿಎಂ ಅಧಿಕೃತ ಖಾತೆಯಿಂದ 'ರಾಜಕೀಯ' ಟ್ವೀಟ್, ಭಾಷೆ ಸರಿಯಾಗಿರಲಿ ಎಂದು ತಿಳಿಹೇಳಿದ ಜನ!
ರಾಜ್ಯದಲ್ಲಿ ಮುಖ್ಯಮಂತ್ರಿ ಅವರ ಅಧಿಕೃತ ಎಕ್ಸ್ ಖಾತೆಯಿಂದ (ಟ್ವಿಟರ್) ಬರುತ್ತಿರುವ ಟ್ವೀಟ್‌ಗಳಿಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಆಫ್ ಕರ್ನಾಟಕ ಹೆಸರಿನ ಟ್ವಿಟರ್ ಹ್ಯಾಂಡಲ್ ರಾಜ್ಯದ ಮುಖ್ಯಮಂತ್ರಿಗೆ ಸಂಬಂಧಿಸಿದ್ದು, ಇಲ್ಲಿ ಸರ್ಕಾರದ ಸಾಧನೆಗಳು ಹಾಗೂ ಯೋಜನೆಗಳ ವಿವರಗಳನ್ನು ತಿಳಿಸಬೇಕೇ ಹೊರತು ರಾಜಕೀಯ ಪಕ್ಷಗಳನ್ನು ಟೀಕೆ ಮಾಡುವ ಕೆಲಸಕ್ಕೆ ಬಳಸಬಾರದು ಎಂದು ತಿಳಿಹೇಳಿದ್ದಾರೆ.
ಬೆಂಗಳೂರು (ಸೆ.26): ಕಾವೇರಿ ನದಿ ನೀರು ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಸಾಕಷ್ಟು ಆಲೋಚನೆಯಲ್ಲಿದ್ದಾರೆ. ಇದರ ನಡುವೆ ಸಿಎಂ ಆಫ್ ಕರ್ನಾಟಕ ಟ್ವಿಟರ್ ಹ್ಯಾಂಡಲ್‌ನಿಂದ ಬರುತ್ತಿರುವ ಟ್ವೀಟ್‌ಗಳ ಬಗ್ಗೆ ಜನರು ಅಸಮಾಧಾನ ಹೊರಹಾಕಿದ್ದಾರೆ. ಸಿಎಂ ಆಫ್ ಕರ್ನಾಟಕ ಎನ್ನುವುದು ರಾಜ್ಯದ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆ. ಇದು ಸರ್ಕಾರದ ಅಧಿಕೃತ ಖಾತೆ ಎನ್ನಬಹುದು. ಈ ಖಾತೆಯಿಂದ ಮಾಡುವ ಟ್ವೀಟ್‌ಗಳು ಸಾಮಾನ್ಯವಾಗಿ ರಾಜಕೀಯ ಉದ್ದೇಶವನ್ನು ಹೊಂದಿರೋದಿಲ್ಲ. ಸರ್ಕಾರದ ಯೋಜನೆಗಳು, ಸರ್ಕಾರದ ಕಾರ್ಯಗಳು, ಸಂಪುಟ ಸಭೆಯ ತೀರ್ಮಾನಗಳು, ಪ್ರಮುಖ ದಿನಗಳಲ್ಲಿ ರಾಜ್ಯದ ಜನತೆಗೆ ಶುಭ ಕೋರಲು ಬಳಸಲಾಗುತ್ತದೆ. ಆದರೆ, ಸಿಎಂ ಸಿದ್ಧರಾಮಯ್ಯ ಈ ಖಾತೆಯನ್ನೂ ಕೂಡ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಅದರಲ್ಲೂ ಈ ಖಾತೆಯಿಂದ ಮಾಡುವ ಟ್ವೀಟ್‌ಗಳು ಹಾಗೂ ಅದರ ಭಾಷೆಗಳು ಸಿಎಂ ಘನತೆಗೆ ತಕ್ಕುದಾಗಿಲ್ಲ ಎಂದು ಅವರಿಗೆ ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಲು ಸಿಎಂ ಸಿದ್ಧರಾಮಯ್ಯ ಅವರ ವೈಯಕ್ತಿಕ ಟ್ವಿಟರ್ ಖಾತೆ ಇದೆ. ಅದರಿಂದಲೇ ಅವುಗಳನ್ನು ಪೋಸ್ಟ್ ಮಾಡಬಹುದು. ಆದರೆ, ಕರ್ನಾಟಕದ ಸಿಎಂ ಅಧಿಕೃತ ಹ್ಯಾಂಡಲ್‌ನಿಂದ ಕೀಳು ಮಟ್ಟದ ಭಾಷೆಯ ಬಳಕೆ ಟ್ವೀಟ್‌ಗೆ ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯಾಹ್ನ 4 ಗಂಟೆಯ ಸುಮಾರಿಗೆ ಸಿಎಂ ಆಫ್ ಕರ್ನಾಟಕ ಟ್ವೀಟ್ ಹ್ಯಾಂಡಲ್‌ನಿಂದ ದಾಖಲಾದ ಟ್ವೀಟ್‌ನಲ್ಲಿ 'ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು 144 ಸೆಕ್ಷನ್ ಜಾರಿ ಮಾಡಲಾಗಿದೆ. ರಾಜ್ಯದ ಹಾಗೂ ಜನತೆಯ ಹಿತದೃಷ್ಟಿಯಿಂದ ಆದೇಶ ಮಾಡಲಾಗಿದೆ. ಬಿಜೆಪಿಯವರನ್ನು ಮೊದಲು ಚಡ್ಡಿಗಳು ಎಂದೇ ಕರೆಯಲಾಗುತ್ತಿತ್ತು, ಈಗ ಚಡ್ಡಿ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಗೆ ನಮ್ಮ ತಕರಾರಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ನೆಲ, ಜಲ, ಭಾಷೆಯ ವಿಷಯವನ್ನು ರಾಜಕಾರಣ ಮಾಡಬಾರದು' ಎಂದು ಪೋಸ್ಟ್ ಮಾಡಲಾಗಿತ್ತು. ಈ ಟ್ವೀಟ್‌ಗೆ ಬಂದಿರುವ ಬಹುತೇಕ ಕಾಮೆಂಟ್‌ಗಳಲ್ಲಿ ಬಳಸಿರುವ ಭಾಷೆಗೆ ಆಕ್ರೋಶ ವ್ಯಕ್ತವಾಗಿದೆ.
'ಇದು ನಮ್ಮ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅಧಿಕೃತ ಖಾತೆ. ಈ ತರಹದ ಭಾಷೆ ಯಾಕೆ ಉಪಯೋಗಿಸಿ ಪದವಿಗೆ ಚ್ಯುತಿ ತರ್ತಾ ಇದ್ದೀರಾ. ಇದು ಯಾರದೇ ವೈಯಕ್ತಿಕ ಅಕೌಂಟ್ ಅಲ್ಲ ಅಲ್ವಾ?' ಎಂದು ಮೀನಾ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ' ಸಿದ್ದರಾಮಯ್ಯನವರ ನಿಮ್ಮ ವೈಯಕ್ತಿಕ ಖಾತೆಯಿಂದ ಟ್ವೀಟ್ ಮಾಡಿ, ಈ ಖಾತೆ ರಾಜ್ಯದ ಮುಖ್ಯಮಂತ್ರಿಗಳದ್ದು.. ನೆನಪಿರಲಿ' ಎಂದು ನಿರೀಕ್ಷಣ ಎನ್ನುವವರು ಎಚ್ಚರಿಸಿದ್ದಾರೆ.
ಸಿಎಂ ಆಗಿ ನೀವು ಇಂಥ ಭಾಷೆಗಳನ್ನು ಬಳಕೆ ಮಾಡುವುದು ಶೋಭೆ ತರುವುದಿಲ್ಲ. ಕರ್ನಾಟಕದ ಜನ ಯಾವ ರೀತಿಯವರು ಅನ್ನೋದು ನಿಮಗೆ ಗೊತ್ತಿದೆ. ಇಂಥ ಮಾತುಗಳನ್ನು ಈ ಹ್ಯಾಂಡಲ್‌ನಲ್ಲಿ ಬಳಸಬೇಡಿ ಎಂದು ತಿಳಿಹೇಳಿದ್ದಾರೆ. 'ರಾಜಕೀಯ, ಅನಿಸಿಕೆ, ಅಭಿಪ್ರಾಯ ಹಾಗೂ ತತ್ವಸಿದ್ದಾಂತಗಳು ಒಂದೆಡೆ ಆದ್ರೆ ನಿಮ್ಮ ಭಾಷೆ ನಿಮ್ಮ ಸ್ಥಾನಕ್ಕೆ ತಕ್ಕದಲ್ಲ' ಎಂದು ಮಂಜು ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಬೊಗಳೆ ಬಿಟ್ಟುಕೊಂಡು ಕಾವೇರಿ ನೀರು ಕೈಬಿಟ್ಟ ಸಿಎಂ ಸಿದ್ದರಾಮಯ್ಯ: ಶಾಸಕ ಅಶ್ವತ್ಥನಾರಾಯಣ ಆರೋಪ
'ನಿಮ್ಮ ಭಾಷೆ ಸರಿಯಾಗಿ ಇಲ್ಲ...ನೀವೊಬ್ರು ರಾಜ್ಯದ ಮುಖ್ಯಮಂತ್ರಿಗಳು ಈ ರೀತಿ ಹೇಳಿಕೆಗಳನ್ನು ನೀಡಬಾರದು ಎಂಬುದು ನಮ್ಮ ಅನಿಸಿಕೆ' ಎಂದು ಇನ್ನೊಬ್ಬರು ಬರೆದಿದ್ದಾರೆ.
'ಮಾನ್ಯ ಸಿಎಂ ಅವರೇ, ಈ ರಾಜ್ಯದ ಸಿಎಂ ರೀತಿ ಮಾತನಾಡಿ, ನೀವು ಅಯೋಗ್ಯರಾಗಿದ್ದರೆ ರಾಜೀನಾಮೆ ನೀಡಿಬಿಡಿ. ಮೊದಲಾಗಿ ಚಡ್ಡಿ, ಪ್ಯಾಂಟ್ ಮತ್ತು ಲುಂಗಿ ಮೇಲೆ ಅಳುವುದನ್ನು ನಿಲ್ಲಿಸಿ. ನೀವು ಬೇರೆ ಕಾರಣಕ್ಕಾಗಿ ಚುನಾಯಿತರಾಗಿದ್ದೀರಿ ದಯವಿಟ್ಟು ನಮ್ಮನ್ನು ನಿರಾಶೆಗೊಳಿಸಬೇಡಿ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕಾವೇರಿ ಬಿಕ್ಕಟ್ಟು: ಮೋದಿ ಮಧ್ಯಪ್ರವೇಶಕ್ಕೆ ದೇವೇಗೌಡ ಪತ್ರ, ಸಿಎಂ ಸ್ವಾಗತ
'ರಾಜಕೀಯದ ಆಟವನ್ನು ಆಡಲು ರಾಜಕೀಯದ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಹೇಳಲು ಎಲ್ಲರೂ ತಮ್ಮ ವೈಯಕ್ತಿಕ ಖಾತೆ ಬಳಸುತ್ತಾರೆ. ಈ ಟ್ವಿಟ್ಟರ್ ಖಾತೆಗೆ ಅದರದೇ ಆದ ಘನತೆ ಹಾಗೂ ಮರ್ಯಾದೆ ಇದೆ ಹಾಳು ಮಾಡಬೇಡಿ' ಎಂದು ಸಂದರೇಶ್ ಎನ್ನುವವರು ಬರೆದಿದ್ದಾರೆ.