ಬೊಗಳೆ ಬಿಟ್ಟುಕೊಂಡು ಕಾವೇರಿ ನೀರು ಕೈಬಿಟ್ಟ ಸಿಎಂ ಸಿದ್ದರಾಮಯ್ಯ: ಶಾಸಕ ಅಶ್ವತ್ಥನಾರಾಯಣ ಆರೋಪ
ಸಿದ್ದರಾಮಯ್ಯ ಅವರು ಸಿಎಂ ಅನ್ನೋದನ್ನು ಮರೆತುಬಿಟ್ಟಿದ್ದಾರೆ. ಸುಮ್ಮನೆ ಬೊಗಳೆ ಬಿಟ್ಟುಕೊಂಡು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ನಾಡಿನ ಹಿತ ಕೈ ಚೆಲ್ಲಿದ್ದಾರೆ.
ಬೆಂಗಳೂರು (ಸೆ.26): ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಮೈ ಮರೆತಿದ್ದಾರೆ. ಅವರು ತಾವು ಪ್ರತಿಪಕ್ಷ ನಾಯಕರು ಅಂತಾ ಅಂದುಕೊಂಡಿದ್ದಾರೆ. ತಮಿಳುನಾಡು ಜೊತೆ ಸಿಎಂ ಸಿದ್ದರಾಮಯ್ಯ ಏನಾದರೂ ಮಾತನಾಡಿ ನೀರು ಉಳಿಸಲು ಪ್ರಯತ್ನ ಮಾಡಿದ್ದೀರಾ? ಸುಮ್ಮನೆ ಬೊಗಳೆ ಬಿಟ್ಟುಕೊಂಡು ನಾಡಿನ ಹಿತ ಕೈ ಚೆಲ್ಲಿದ್ದೀರಿ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ಬಂದ್ ಹಿನ್ನೆಲೆಯಲ್ಲಿ ರೈತ ಮುಖಂಡರ ಬಂಧನ, 144 ಸೆಕ್ಷನ್ ಜಾರಿ ಮಾಡಲಾಗಿದೆ. ಸರ್ಕಾರ ಜನರ ಭಾವನೆ ವ್ಯಕ್ತಪಡಿಸಲು ಅವಕಾಶ ಕೊಡಬೇಕು. ಬೆಂಗಳೂರಿನಲ್ಲಿ ಕುಡಿಯುವ ನೀರು ಸಮಸ್ಯೆ ಅಂತಾ ವಿಶ್ವಮಟ್ಟದಲ್ಲಿ ಪ್ರಚಾರ ಆದರೆ ಏನಾಗಬಹುದು? ಸರ್ಕಾರ ತಮಿಳುನಾಡಿನ ಜೊತೆಯಲ್ಲಿ ಮಾತುಕತೆ ಮಾಡಬೇಕು. ರೈತ ನಾಯಕರ ಬಂಧನ ಮಾಡುತ್ತಿರುವುದು ತಪ್ಪು. ಸಿಎಂ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಮೈ ಮರೆತಿದ್ದಾರೆ. ಅವರು ತಾವು ಪ್ರತಿಪಕ್ಷ ನಾಯಕರು ಅಂತಾ ಅಂದುಕೊಂಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ಬಂದ್ ಭದ್ರತೆಗೆ ಬಂದ ಪೊಲೀಸರಿಗೆ ಇಲಿಯ ಊಟ ಕೊಟ್ಟ ಸರ್ಕಾರ
ಸಿದ್ದರಾಮಯ್ಯ ಅವರು ಸಿಎಂ ಅನ್ನೋದನ್ನು ಮರೆತುಬಿಟ್ಟಿದ್ದಾರೆ. ತಮಿಳುನಾಡು ಜೊತೆ ಸಿಎಂ ಆಗಿರುವವರು ಏನಾದರೂ ಪ್ರಯತ್ನ ಮಾಡಿದ್ದೀರಾ? ಸುಮ್ಮನೆ ಬೊಗಳೆ ಬಿಟ್ಟುಕೊಂಡು ನಾಡಿನ ಹಿತ ಕೈ ಚೆಲ್ಲಿದ್ದೀರಿ. ನೀವು ಅಧಿಕಾರ ಅನುಭವಿಸಲು ಇದ್ದೀರಾ ಅಷ್ಟೇ. ಕುರ್ಚಿಗೆ ಅಂಟಿಕೊಳ್ಳಲು ನೀವೇನು ಮೊದಲ ಬಾರಿಗೆ ಸಿಎಂ ಆಗಿದ್ದೀರಾ? ದೊಡ್ಡತನ ತೋರಿ ಆ ಸ್ಥಾನಕ್ಕೆ ಗೌರವ ತರಬೇಕು. ಕರ್ನಾಟಕ ಅಂದಾಗ ಒಬ್ಬ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಗೆ ಭರವಸೆದಾಯಕವಾಗಿರಬೇಕು, ಆದರೆ ನೀವು ನಿರಾಸದಾಯಕವಾಗಿದ್ದೀರಿ. ಹಿರಿತನದಲ್ಲೂ ನೀವು ನಾಡಿನ ಹಿತ ಕಾಪಾಡುವಲ್ಲಿ ವಿಫಲರಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.