ಬೆಂಗಳೂರು(ಜ.02): ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪ್ರಧಾನಿ ಮೋದಿ ರಾಜಕೀಯ ಭಾಷಣ ಮಾಡಿದ್ದು, ಮೋದಿ ಅವರನ್ನು ಆ ಪವಿತ್ರ ನೆಲ ಕ್ಷಮಿಸದು ಎಂದು ಕಾಂಗ್ರೆಸ್ ನಾಯಕ ಸಿದ್ದಾರಾಮಯ್ಯ ಹರಿಹಾಯ್ದಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುತ್ತಿರುವ ಪಾಕಿಸ್ತಾನವನ್ನು ಎಂದೂ ಪ್ರಶ್ನಿಸದ ಕಾಂಗ್ರೆಸ್ ನನ್ನನ್ನು ಪ್ರಶ್ನಿಸುತ್ತಿದೆ ಎಂದು ಮೋದಿ ಹರಿಹಾಯ್ದಿದ್ದರು.

ಇನ್ನು ಮೋದಿ ಅವರ ರಾಜಕೀಯ ಭಾಷಣವನ್ನು ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ, ಮಠದಲ್ಲಿ ಹಿಂದೆಂದೂ ರಾಜಕೀಯ ಭಾಷಣ ಆಗಿರಲಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಪ್ರಶ್ನಿಸದ ಕಾಂಗ್ರೆಸ್ ನನ್ನನ್ನು ಪ್ರಶ್ನಿಸುತ್ತದೆ: ಮೋದಿ ಗುಡುಗು!

'ತುಮಕೂರಿನ‌‌ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ  ಅವರೇ, ನಿಮ್ಮನ್ನು ಆ ಪವಿತ್ರ ನೆಲ‌ ಕ್ಷಮಿಸದು' ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.