'ಕೊರೋನಾಗಿಂತಲೂ ಮೋದಿ, ಬಿಎಸ್ವೈ ಡೇಂಜರ್'
ಕೊರೋನಾ ಮಹಾಮಾರಿಗಿಂತಲೂ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಡೇಂಜರ್ ಎಂದು ಕೈ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ
ಬೆಂಗಳೂರು (ಅ.09):‘ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸೋಂಕಿನಲ್ಲಿ ಭಾರತವನ್ನು ವಿಶ್ವದ ನಂಬರ್ 1 ದೇಶವನ್ನಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ರಾಜ್ಯವನ್ನಾಗಿ ಮಾಡುವ ಧಾವಂತದಲ್ಲಿದ್ದಾರೆ. ಈ ಇಬ್ಬರು ನಾಯಕರು ದೇಶ ಹಾಗೂ ರಾಜ್ಯಕ್ಕೆ ಕೊರೋನಾಗಿಂತಲೂ ಅಪಾಯಕಾರಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕೊರೊನಾ ಸೋಂಕಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ತಮ್ಮ ದುರಾಡಳಿತದ ಮೂಲಕ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಜೋಡಿ ದೇಶವನ್ನು ಮತ್ತು ರಾಜ್ಯವನ್ನು ಕೊರೋನಾ ಸೋಂಕಿನಲ್ಲಿ ಮೊದಲ ಸ್ಥಾನಕ್ಕೇರಿಸಲು ಪಣ ತೊಟ್ಟಂತಿದೆ’ ಎಂದು ಟೀಕಿಸಿದ್ದಾರೆ.
‘ರಾಜ್ಯದಲ್ಲಿ ಸೋಂಕು ಉಲ್ಬಣಗೊಳ್ಳಲು ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವೇ ಕಾರಣ. ಕೊರೋನಾ ಸೋಂಕನ್ನು ಜನರ ಸೇವೆ ಮಾಡಲು ಅವಕಾಶ ಎಂದು ಮುಖ್ಯಮಂತ್ರಿ ಭಾವಿಸಿಲ್ಲ. ಬದಲಿಗೆ ಅವರು ಹಾಗೂ ಅವರ ಸಂಪುಟ ಇದು ದುಡ್ಡು ಮಾಡಲು ಒದಗಿಬಂದ ಸುವರ್ಣಾವಕಾಶ ಎಂದು ತಿಳಿದದ್ದೇ ಇಂದಿನ ದುಸ್ಥಿತಿಗೆ ಕಾರಣ’ ಎಂದು ಆಪಾದಿಸಿದ್ದಾರೆ.
‘ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸೋಂಕಿನ ಸರಾಸರಿ 10,000 ಪ್ರಕರಣಗಳು ದಾಖಲಾಗುತ್ತಿವೆ. ಸರಾಸರಿ 100 ಸಾವುಗಳಾಗುತ್ತಿವೆ. ಇಲ್ಲಿಯವರೆಗೆ 6.68 ಲಕ್ಷ ಜನರಿಗೆ ಕೊರೊನಾ ಸೋಂಕು ತಗಲಿದೆ. 1.16 ಲಕ್ಷಕ್ಕೂ ಅಧಿಕ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಸರ್ಕಾರಕ್ಕೇ ಕೊರೋನಾ ಸೋಂಕು ಬಡಿದಂತಾಗಿದೆ’ ಎಂದರು.
‘ರಾಜ್ಯದಲ್ಲಿ ಕೊರೋನಾ ಉಲ್ಬಣಗೊಳ್ಳಲು ಜನರ ನಿರ್ಲಕ್ಷ್ಯ ಕಾರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಪಪ್ರಚಾರ ಮಾಡುತ್ತಿದ್ದಾರೆ. ತನ್ನ ಆಡಳಿತ ವೈಫಲ್ಯದಿಂದ ಖಾಲಿಯಾಗಿರುವ ಖಜಾನೆ ತುಂಬಿಸಲು ಮದ್ಯದಂಗಡಿಯಿಂದ ಮಾಲ್‌ವರೆಗೆ, ದೇವಸ್ಥಾನಗಳಿಂದ ಹೋಟೆಲ್‌ವರೆಗೆ ಎಲ್ಲವನ್ನೂ ತೆರೆದಿಟ್ಟರು. ಜನರನ್ನು ಕೈ ಬೀಸಿ ಕರೆದು ಇದೀಗ ಕೊರೋನಾ ಉಲ್ಬಣಕ್ಕೆ ಜನರೇ ಕಾರಣ ಎಂದು ದೂಷಿಸುವುದು ಜತೆಗೆ ಬಗೆಯುವ ದ್ರೋಹ’ ಎಂದು ಆರೋಪಿಸಿದರು.
ಐಸಿಯು ತಪ್ಪು ಲೆಕ್ಕಾಚಾರ: ‘ಮೊದಲ ದಿನದಿಂದಲೇ ತಪ್ಪು ನೀತಿ, ಅನಿಶ್ಚಿತ ನಿರ್ಧಾರ, ತಿದ್ದಿ ತಿರುಚಿದ ಅಂಕಿ-ಅಂಶ, ಸಚಿವರ ನಿಷ್ಕಿ್ರಯೆಯೇ ಇಂದಿನ ದುಸ್ಥಿತಿಗೆ ಕಾರಣ. ಈಗಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ 303 ಕೊರೊನಾ ಸೋಂಕಿತರು ಸೇರಿದಂತೆ ರಾಜ್ಯದಲ್ಲಿ 841 ಸೋಂಕಿತರು ಐಸಿಯುನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಆದರೆ, ತನ್ನ ವ್ಯಾಪ್ತಿಯಲ್ಲೇ 957 ಸೋಂಕಿತರು ಐಸಿಯುನಲ್ಲಿದ್ದಾರೆ ಎಂದು ಬಿಬಿಎಂಪಿ ಹೇಳುತ್ತಿದೆ. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿ ಹಾಕಲು ಸುಳ್ಳಿನ ಮೊರೆ ಹೋಗುತ್ತಿದೆ’ ಎಂದು ಟೀಕಿಸಿದರು.