Asianet Suvarna News Asianet Suvarna News

ಕಾಂಗ್ರೆಸ್ ವಲಯದಲ್ಲಿ ಮೂಡಿದೆ ಗಂಭೀರ ಅನುಮಾನ

ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಆಗುತ್ತಿದ್ದು, ಇದೇ ವೇಳೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಗಂಭೀರ ಅನುಮಾನವೊಂದು ಮೂಡಿದೆ. 

Siddaramaiah Schemes May Stop CM HD Kumaraswamy Budget 2019
Author
Bengaluru, First Published Feb 5, 2019, 8:58 AM IST

ಬೆಂಗಳೂರು :  ರಾಜ್ಯ ಸಮ್ಮಿಶ್ರ ಸರ್ಕಾರ ಅಸ್ತಿ​ತ್ವಕ್ಕೆ ಬಂದ ನಂತರ ಮಂಡಿ​ಸಿದ ಮೊದಲ ಬಜೆ​ಟ್‌​ನಲ್ಲಿ ಹಿಂದಿನ ಸರ್ಕಾ​ರದ ಹಲವು ಜನ​ಪ್ರಿಯ ಕಾರ್ಯಕ್ರಮ​ಗ​ಳನ್ನು ಸ್ಥಗಿತಗೊಳಿ​ಸಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರು ಈ ಬಾರಿಯೂ ರೈತರ ಸಾಲ​ಮನ್ನಾ ನೆಪ​ವನ್ನು ಮುಂದೊಡ್ಡಿ ಸಿದ್ದ​ರಾ​ಮಯ್ಯ ಘೋಷಿ​ಸಿದ್ದ ಹಲವು ಯೋಜ​ನೆ​ಗ​ಳನ್ನು ಆರಂಭಿ​ಸುವ ಗೋಜಿಗೆ ಹೋಗು​ವು​ದಿಲ್ಲ ಎಂಬ ಆಶಂಕೆ ಕಾಂಗ್ರೆಸ್‌ ವಲ​ಯ​ವ​ನ್ನು​ ಕಾ​ಡು​ತ್ತಿದೆ.

2018-19ನೇ ಸಾಲಿನ ಸಿದ್ದರಾಮಯ್ಯ ಬಜೆಟ್‌ನ ಎಲ್ಲಾ ಕಾರ್ಯಕ್ರಮಗಳನ್ನೂ ಮುಂದುವರೆಸುತ್ತಿರುವುದಾಗಿ ಜುಲೈ 5, 2018ರ ಬಜೆಟ್‌ ಭಾಷಣದಲ್ಲಿ ಕುಮಾ​ರ​ಸ್ವಾಮಿ ಘೋಷಿ​ಸಿ​ದ್ದರು. ಆದರೆ, ವಾಸ್ತ​ವ​ದಲ್ಲಿ ಈ ಯೋಜ​ನೆ​ಗಳು ಸ್ಧಗಿ​ತ​ಗೊಂಡಿ​ದ್ದವು. ಈ ಬಾರಿಯೂ ಕಾಂಗ್ರೆಸ್‌ ಸಚಿ​ವರು ಇಲಾ​ಖೆ​ಗಳ ಸಭೆ ವೇಳೆ ಈ ಕಾರ್ಯ​ಕ್ರ​ಮ​ಗ​ಳನ್ನು ಮರು ಆರಂಭಿ​ಸ​ಬೇಕು ಎಂಬ ಒತ್ತಡ ಹಾಕಿ​ದರೂ, ಒಂದೇ ಕಂತಿ​ನ​ಲ್ಲಿ ರೈತರ ಸಾಲ ಮನ್ನಾ ಮಾಡ​ಬೇ​ಕಿ​ರುವ ಕಾರಣ ಕಷ್ಟ​ವಿದೆ. ಆದರೆ, ಪರಿ​ಶೀ​ಲಿ​ಸು​ತ್ತೇನೆ ಎಂದು ಹೇಳಿ​ದ್ದಾರೆ ಎನ್ನು​ತ್ತವೆ ಕಾಂಗ್ರೆಸ್‌ ಮೂಲ​ಗಳು. ಆದರೆ, ಸಾಲ​ಮ​ನ್ನಾದ ಒತ್ತಡ ತೀವ್ರ​ವಿ​ರುವ ಕಾರಣ ಈ ಯೋಜ​ನೆ​ಗ​ಳಿಗೆ ಮರು ಚಾಲನೆ ನೀಡುವ ಸ್ಥಿತಿ ಇಲ್ಲ ಎಂದೇ ಕಾಂಗ್ರೆಸ್‌ ನಾಯ​ಕರು ವ್ಯಾಖ್ಯಾ​ನಿ​ಸು​ತ್ತಾ​ರೆ.

ಸಿದ್ದರಾಮಯ್ಯ ಅವರ ಜನಪ್ರಿಯ ಯೋಜನೆಗಳಾದ ‘ಪಶುಭಾಗ್ಯ’, ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆ, ಮಕ್ಕಳಿಗೆ ಸೈಕಲ್‌ ವಿತರಣೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಬಸ್‌ ಪ್ರಯಾಣದಲ್ಲಿ ರಿಯಾಯಿತಿ ಕಲ್ಪಿಸಲು ‘ಇಂದಿರಾ ಪಾಸು’ ವಿತರಣೆ, ಹಿಂದುಳಿದ ವರ್ಗಗಳ ಪದವಿ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ಭಾಗ್ಯ, ಶಿಕ್ಷಣ ಗುಣಮಟ್ಟವೃದ್ಧಿಸುವ ‘ಶಿಕ್ಷಣ ಕಿರಣ’, ಅಲ್ಲದೆ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ ‘ರೈತ ಬೆಳಕು’ ಮೂಲಕ ಬರ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ 5 ರಿಂದ 10 ಸಾವಿರ ರು. ನೇರ ವರ್ಗಾವಣೆ ಮಾಡುವ ಯೋಜನೆ ಸೇರಿದಂತೆ ಸಾಲು-ಸಾಲು ಘೋಷಣೆಗಳನ್ನು ಕೈ ಬಿಡಲಾಗಿದೆ.

ಈ ಬಗ್ಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಹಿಂದಿನ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸಬಾರದು ಎಂದು ಹಿಂದಿನ ಸಮನ್ವಯ ಸಮಿತಿ ಸಭೆ ಸೇರಿದಂತೆ ಹಲವು ಸಭೆಗಳಲ್ಲಿ ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ರೈತರ ಕೃಷಿ ಸಾಲ ಮನ್ನಾ ಯೋಜನೆಗೆ ಹಣ ಹೊಂದಿಸಲು ಕೆಲವು ಯೋಜನೆಗಳನ್ನು ಕೈ ಬಿಡಬೇಕಾಗಿದೆ ಎಂದು ಮನವೊಲಿಸಲು ಯತ್ನಿಸಿದರು ಎನ್ನ​ಲಾ​ಗಿದೆ.

ಹೀಗಾಗಿ ಗುರು​ವಾರ ನಡೆ​ಯ​ಲಿ​ರುವ ಜಂಟಿ ಶಾಸ​ಕಾಂಗ ಫಕ್ಷದ ಸಭೆ​ಯಲ್ಲಿ ಕಾಂಗ್ರೆಸ್‌ ಶಾಸ​ಕರು ಈ ಕಾರ್ಯ​ಕ್ರ​ಮ​ಗಳ ಜಾರಿಗೆ ಮತ್ತೆ ಒತ್ತಾ​ಯಿ​ಸ​ಲಿ​ದ್ದಾರೆ ಎನ್ನಾ​ಗಿದೆ. ಈ ಒತ್ತ​ಡಕ್ಕೆ ಸಿಎಂ ಮಣಿ​ಯು​ವರೇ ಎಂಬು​ದನ್ನು ಕಾದು ನೋಡ​ಬೇಕು.

ವಿದ್ಯಾರ್ಥಿಗಳಿಗೆ ಸೈಕಲ್‌ ಭಾಗ್ಯವಿಲ್ಲ:  ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿ, ಸತತ ಪತ್ರ ವ್ಯವಹಾರ ಹಾಗೂ ಬಹಿರಂಗ ಸಮಾವೇಶಗಳಲ್ಲಿ ಒತ್ತಾಯ ಮಾಡಿದರೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿ ವ್ಯಕ್ತಿಗೆ 5 ಕೆ.ಜಿ. ಅಕ್ಕಿ ಮಾತ್ರ ವಿತರಣೆ ಮಾಡುತ್ತಿದ್ದಾರೆ. ಈ ಮೂಲಕ 2018ರ ಫೆ.16ರ ಸಿದ್ದರಾಮಯ್ಯ ಘೋಷಣೆ ಕೈ ಬಿಟ್ಟಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ನೀಡುತ್ತಿದ್ದ ‘ಸೈಕಲ್‌ ಭಾಗ್ಯ’ ಈ ವರ್ಷ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಲಭ್ಯವಾಗಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದ ಟೆಂಡರ್‌ ಗೊಂದಲದ ನೆಪ ನೀಡಿ ಈ ವರ್ಷ ಸೈಕಲ್‌ ವಿತರಣೆ ಸ್ಥಗಿತಗೊಳಿಸಲಾಗಿದೆ.

ರೈತ ಬೆಳಕು ಯೋಜನೆ ಅನುಮಾನ:  ಒಣ ಭೂಮಿ, ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದ 70 ಲಕ್ಷ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಲು ಸಿದ್ದರಾಮಯ್ಯ 5 ಸಾವಿರ ರು.ಗಳಿಂದ 10 ಸಾವಿರ ರು.ಗಳನ್ನು ನೇರವಾಗಿ ರೈತರ ಖಾತೆಗೆ ಹಾಕುವ ರೈತ ಬೆಳಕು ಯೋಜನೆ ಘೋಷಿಸಿದ್ದರು. ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲೇ ತಿಲಾಂಜಲಿ ಇಡಲಾಗಿದ್ದು, ಮುಂದಿನ ಬಜೆಟ್‌ನಲ್ಲೂ ಮುಂದುವರೆಸುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.

ಉಚಿತ ಬಸ್‌ ಪಾಸು, ಇಂದಿರಾ ಪಾಸ್‌ ಇಲ್ಲ:  ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳ 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ಸು ಪಾಸ್‌ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ, ಈ ಯೋಜನೆ ಜಾರಿಗೆ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳಿಂದ ಸತತ ಒತ್ತಾಯ ಕೇಳಿ ಬಂದರೂ ಎಚ್‌.ಡಿ. ಕುಮಾರಸ್ವಾಮಿ ಅವರ ಸರ್ಕಾರ ಪಾಸು ವಿತರಣೆ ಮಾಡಿಲ್ಲ. ಎಸ್ಸಿ-ಎಸ್‌ಟಿಗೆ ಮಾತ್ರವೇ ಉಚಿತ ಪಾಸ್‌ ವಿತರಣೆ ಮಾಡಲಾಯಿತು. ಜತೆಗೆ ಬೆಂಗಳೂರು ನಗರ ವ್ಯಾಪ್ತಿಯ ಗಾರ್ಮೆಂಟ್ಸ್‌ ಕಾರ್ಖಾನೆಗಳ ಮಹಿಳಾ ಕಾರ್ಮಿಕರಿಗೆ ಉಚಿತವಾಗಿ ‘ಇಂದಿರಾ ಪಾಸು’ ನೀಡುವ ಯೋಜನೆಯನ್ನು ಕೈ ಬಿಡಲಾಗಿದೆ.

‘ಪಶುಭಾಗ್ಯ’ ಯೋಜನೆಗೆ ಕೊಕ್ಕೆ:

2015-16ರಲ್ಲಿ ಹಿಂದಿನ ಸರ್ಕಾರ ಜಾತಿಗೆ ತಂದಿದ್ದ ಮಹತ್ವದ ಯೋಜನೆ ‘ಪಶುಭಾಗ್ಯ’ ಯೋಜನೆಯನ್ನು 2018ರ ಜೂನ್‌ನಿಂದ ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಅಲ್ಲದೆ, ಪ್ರಸಕ್ತ ವರ್ಷದಿಂದ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಎಲ್ಲಾ ತಹಸೀಲ್ದಾರ್‌ ಕಚೇರಿಗಳ ಎದುರು ನೋಟಿಸ್‌ ಅಂಟಿಸಲಾಗಿದೆ. ಗ್ರಾಮೀಣ ಭಾಗದ ಅತಿ ಸಣ್ಣ ರೈತರು, ಸಣ್ಣ ರೈತರು, ಕೂಲಿ ಕಾರ್ಮಿಕರು, ವಿಧವೆಯರು, ದೇವದಾಸಿಯರಿಗೆ 145 ಕೋಟಿ ರು. ವೆಚ್ಚದಲ್ಲಿ 59,193 ಫಲಾನುಭವಿಗಳಿಗೆ ಜಾನುವಾರು ಘಟಕವನ್ನು ಮೊದಲ ವರ್ಷ ನೀಡಲಾಗಿತ್ತು. ಆದರೆ, ಕುಮಾರಸ್ವಾಮಿ ಅವರ ಸರ್ಕಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ.

ಸೂರ್ಯಜ್ಯೋತಿ, ಶಿಕ್ಷಣ ಕಿರಣ ವಿಫಲ:

ಪರಿಶಿಷ್ಟಜಾತಿ ಹಾಗೂ ಪಂಗಡದ ರೈತರಿಗೆ ಬೋರ್‌ವೆಲ್‌ ಕೊರೆಸಿ ಸೋಲಾರ್‌ ಪಂಪ್‌ಸೆಟ್‌ ಅಳವಡಿಕೆ ಮಾಡುವ ‘ಸೂರ್ಯ ಜ್ಯೋತಿ ರೈತರ ಬಾಳಿನ ಪರಂಜ್ಯೋತಿ’ ಯೋಜನೆಗೆ ಅನುದಾನ ಬಿಡುಗಡೆ ವಿಳಂಬದಿಂದಾಗಿ ಅನುಷ್ಠಾನಗೊಂಡಿಲ್ಲ. ರೈತರ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಪ್ರೋತ್ಸಾಹಿಸುವ ‘ರೈತ ಸೂರ್ಯ’ ಯೋಜನೆಗೆ ಪ್ರಾಮುಖ್ಯತೆ ನೀಡಿಲ್ಲ. ಶಾಲಾ-ಕಾಲೇಜುಗಳಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡುವುದು ಹಾಗೂ ಶಿಕ್ಷಣದ ಗುಣಮಟ್ಟಹೆಚ್ಚಿಸಲು ಶಿಕ್ಷಕರ ಹಾಜರಾತಿ ಬಯೋಮೆಟ್ರಿಕ್‌ ಮಾಡುವ ‘ಶಿಕ್ಷಣ ಕಿರಣ’ ಕಾರ್ಯಕ್ರಮವನ್ನೂ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನ ಮಾಡಿಲ್ಲ.

‘ಮಡಿಲು ಕಿಟ್‌’ ಈ ವರ್ಷವೂ ಅನುಮಾನ:

ಹಿಂದಿನ ಸರ್ಕಾರದಲ್ಲೇ ವಿತರಣೆಯಲ್ಲಿನ ಲೋಪಗಳ ಹಿನ್ನೆಲೆಯಲ್ಲಿ ತಡೆ ಬಿದ್ದಿದ್ದ ‘ಮಡಿಲು ಕಿಟ್‌’ ಯೋಜನೆಯನ್ನು ಕುಮಾರಸ್ವಾಮಿ ಅವರೂ ಮುಂದುವರೆಸಿಲ್ಲ. ಆರೋಗ್ಯ ಇಲಾಖೆಯು ಪ್ರಸಕ್ತ ಸಾಲಿನಲ್ಲಾದರೂ ಸೇರಿಸುವಂತೆ ಪ್ರಸ್ತಾವನೆ ಇಟ್ಟಿದೆ. ಆದರೆ, ಪ್ರಸಕ್ತ ಬಜೆಟ್‌ನಲ್ಲೂ ಯೋಜನೆ ಘೋಷಿಸುವುದು ಅನುಮಾನ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಲ್ಯಾಪ್‌ಟಾಪ್‌ ಭಾಗ್ಯವಿಲ್ಲ:

ಹಿಂದುಳಿದ ವರ್ಗಗಳ ತಾಂತ್ರಿಕ ಶಿಕ್ಷಣದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುವ ಯೋಜನೆಯನ್ನು ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳ ಜತೆಗೆ ಆರ್ಥಿಕವಾಗಿ ಹಿಂದುಳಿದ ಒಬಿಸಿ ವಿದ್ಯಾರ್ಥಿಗಳಿಗೂ ನೀಡುವುದಾಗಿ ಘೋಷಿಸಿದ್ದರು. ಆದರೆ, ಒಬಿಸಿ ವಿದ್ಯಾರ್ಥಿಗಳಿಗೆ ಈ ವರ್ಷವೂ ಲ್ಯಾಪ್‌ಟಾಪ್‌ ಭಾಗ್ಯ ಲಭ್ಯವಾಗಿಲ್ಲ.

ಸಿದ್ದು ಯೋಜನೆಗಳ ಹೆಸರು ಬದಲು!

ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ‘ಮಾತೃಪೂರ್ಣ’ ಯೋಜನೆ ಬದಲಿಗೆ ‘ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ’ ಜಾರಿಗೆ ತಂದು ಕುಮಾರಸ್ವಾಮಿ ಅನುದಾನ ನೀಡಿದ್ದಾರೆ. ಆದರೆ, ಈ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟುಲೋಪಗಳು ಉಂಟಾಗಿವೆ. ಜತೆಗೆ ಮಹಿಳೆಯರ ಸಂಚಾರಿ ಕ್ಯಾಂಟೀನ್‌ ‘ಸವಿ ರುಚಿ’ ಬಗ್ಗೆಯೂ ಅಪಸ್ವರ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಫೆ.8ರ ಬಜೆಟ್‌ನಲ್ಲೂ ಸಿದ್ದರಾಮಯ್ಯ ಸರ್ಕಾರದ ಹಲವು ಯೋಜನೆಗಳ ರೂಪರೇಷೆ ಸಿದ್ಧಪಡಿಸಿ ಹೆಸರು ಬದಲಿಸಲೂ ಸಹ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಮೂಲ​ಗಳು ತಿಳಿ​ಸಿ​ವೆ.

Follow Us:
Download App:
  • android
  • ios