ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಹೈಕಮಾಂಡ್ ನೀಡಿದ್ದ ರಾಜ್ಯಸಭೆ ಆಫರ್ ಅನ್ನು ತಿರಸ್ಕರಿಸಿ, ಕೊನೆ ಉಸಿರಿರುವವರೆಗೂ ರಾಜ್ಯ ರಾಜಕಾರಣದಲ್ಲೇ ಉಳಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು (ಮೇ.28): ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಮುಂದಿನ ರಾಜಕೀಯ ನಡೆ ಹಾಗೂ ಭವಿಷ್ಯದ ಕುರಿತು ಅತ್ಯಂತ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ತಮಗೆ ದೆಹಲಿ ರಾಜಕಾರಣಕ್ಕೆ ಹೋಗುವಂತೆ ಹೈಕಮಾಂಡ್ ಆಫರ್ ನೀಡಿತ್ತು ಎಂಬ ರಹಸ್ಯವನ್ನು ಬಿಚ್ಚಿಟ್ಟ ಅವರು, ತಾವು ಕೊನೆ ಉಸಿರಿರುವವರೆಗೂ ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಸಭೆ ಆಫರ್ ತಿರಸ್ಕರಿಸಿದ ‘ಸಿದ್ದು’: ರಾಜ್ಯ ರಾಜಕಾರಣದಲ್ಲೇ ಮುಂದುವರಿಕೆ

ಸುದ್ದಿಗೋಷ್ಠಿಯಲ್ಲಿ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡುತ್ತಾ ರಾಜ್ಯಸಭೆಯ ವಿಚಾರವನ್ನು ಸಿದ್ದರಾಮಯ್ಯ ಹೇಳಿದರು. 'ಕಾಂಗ್ರೆಸ್ ಹೈಕಮಾಂಡ್‌ನ ನಾಯಕರು ನನಗೆ ದೆಹಲಿಗೆ ಬರುವಂತೆ ಹಾಗೂ ರಾಜ್ಯಸಭೆಗೆ ಹೋಗುವಂತೆ ಸೂಚಿಸಿದ್ದರು. ಆದರೆ, ನಾನು ಅತ್ಯಂತ ವಿನಮ್ರವಾಗಿ ಅವರ ಆಫರ್ ಅನ್ನು ನಿರಾಕರಿಸಿದ್ದೇನೆ. ನನಗೆ ದೆಹಲಿ ರಾಜಕಾರಣ ಬೇಡ, ನಾನು ಕರ್ನಾಟಕದ ರಾಜ್ಯ ರಾಜಕಾರಣದಲ್ಲೇ ಉಳಿಯುತ್ತೇನೆ ಎಂದು ಹೈಕಮಾಂಡ್‌ಗೆ ಸ್ಪಷ್ಟಪಡಿಸಿದ್ದೇನೆ. ಈ ನಾಡಿನ ಜನ ನನ್ನನ್ನು ಐದು ವರ್ಷಗಳ ಕಾಲ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಾನು ಸಕ್ರಿಯ ರಾಜಕಾರಣದಲ್ಲೇ ಮುಂದುವರಿಯಲಿದ್ದೇನೆ. ಯಾರ ಒತ್ತಡಕ್ಕೂ ಮಣಿಯದೆ ನಾನೇ ಸ್ವಯಂ ಪ್ರೇರಿತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ' ಎಂದು ಹೇಳಿದರು.

ಸಂವಿಧಾನ ಇಲ್ಲದಿದ್ದರೆ ನಾನು ಕುರಿ ಮೇಯಿಸಿಕೊಂಡು ಇರಬೇಕಿತ್ತು

ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನು ನೆನೆದು ಭಾವುಕರಾದ ಸಿದ್ದರಾಮಯ್ಯ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿದರು. 'ನನ್ನ ರಾಜಕೀಯ ಜೀವನ ಒಂದು ತೆರೆದ ಪುಸ್ತಕ. ಈ ದೇಶದಲ್ಲಿ ಸಂವಿಧಾನ ಇಲ್ಲದೇ ಹೋಗಿದ್ದರೆ ನಾನು ವಿದ್ಯಾವಂತನಾಗಲು ಸಾಧ್ಯವಿರಲಿಲ್ಲ. ಸಂವಿಧಾನ ಇದ್ದಿದ್ದಕ್ಕೆ ಇಂದು ನಾನು ಶಾಸಕ, ಉಪಮುಖ್ಯಮಂತ್ರಿ, ಎರಡು ಬಾರಿ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಇಲ್ಲದಿದ್ದರೆ ನಾನು ಹಳ್ಳಿಯಲ್ಲಿ ಕುರಿ ಮೇಯಿಸಿಕೊಂಡು ಇರಬೇಕಿತ್ತು' ಎಂದರು.

ನನ್ನ ದೇಹದಲ್ಲಿ ಕೊನೆ ಉಸಿರಿರುವವರೆಗೂ ಸಂವಿಧಾನಕ್ಕೆ ಧಕ್ಕೆ ತರುವವರ ವಿರುದ್ಧ ಹಾಗೂ ಕೋಮುವಾದಿ ಶಕ್ತಿಗಳ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ. ಸಮಾಜದಲ್ಲಿ ಸಮಾನತೆಗಾಗಿ ನಾನು ಸದಾ ಧ್ವನಿ ಎತ್ತುತ್ತೇನೆ' ಎಂದು ಹೇಳಿದರು.

ಮುಂದಿನ ಸಿಎಂ ಯಾರು? ಜೆಡಿಎಸ್‌ನಿಂದ ಹೊರಬಿದ್ದ ದಿನಗಳ ಸ್ಮರಣೆ

ಮುಂದಿನ ಮುಖ್ಯಮಂತ್ರಿ ಯಾರು ಎಂಬ ಮಾಧ್ಯಮಗಳ ನೇರ ಪ್ರಶ್ನೆಗೆ ಉತ್ತರಿಸಿದ ಅವರು, 'ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಹಾಗೂ ಹೈಕಮಾಂಡ್ ನಾಯಕರು ಒಟ್ಟಾಗಿ ತೀರ್ಮಾನ ಮಾಡುತ್ತಾರೆ' ಎಂದರು.

ಇದೇ ವೇಳೆ ತಾವು ಕಾಂಗ್ರೆಸ್ ಸೇರಿದ ದಿನಗಳನ್ನು ನೆನೆದ ಸಿದ್ದರಾಮಯ್ಯ, 'ನನಗೆ 8 ವರ್ಷ ಮುಖ್ಯಮಂತ್ರಿಯಾಗುವ, ಎರಡು ಬಾರಿ ವಿರೋಧ ಪಕ್ಷದ ನಾಯಕನಾಗುವ ಮಹಾನ್ ಅವಕಾಶವನ್ನು ಕಾಂಗ್ರೆಸ್ ಒದಗಿಸಿಕೊಟ್ಟಿದೆ. ನನ್ನನ್ನು ಜೆಡಿಎಸ್‌ನಿಂದ ಹೊರಹಾಕಿದಾಗ ಪೀರಾನ್ ಎಂಬುವವರು ನನ್ನನ್ನು ಅಹ್ಮದ್ ಪಟೇಲ್ ಬಳಿ ಕರೆದೊಯ್ದರು. ಆ ಮೂಲಕ ನಾನು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರಿದೆ. ಅಂದು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಅಧ್ಯಕ್ಷರಾಗಿದ್ದರು. ನನ್ನ ಜೊತೆ 8 ಜನ ಶಾಸಕರು ಕಾಂಗ್ರೆಸ್ ಸೇರಿದ್ದೆವು, ಅವರಲ್ಲಿ ಕೆಲವರು ಇಂದು ತೀರಿಹೋಗಿದ್ದಾರೆ. ನನ್ನ ಜೊತೆ ನಿಂತ ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿದ್ದೇನೆ' ಎಂದು ಕೃತಜ್ಞತೆ ಸಲ್ಲಿಸಿದರು.

ಸಿದ್ಧಾಂತದ ಜೊತೆ ರಾಜಿ ಇಲ್ಲ, ಗ್ಯಾರಂಟಿ ಯೋಜನೆಗಳೇ ನನ್ನ ಹೆಮ್ಮೆ!

ರಾಜಕಾರಣದಲ್ಲಿ ಜನಶಕ್ತಿ ಇದ್ದರೆ ಮಾತ್ರ ಉಳಿಯಲು ಸಾಧ್ಯ, ಜನರೇ ನಮಗೆ ಅಧಿಕಾರ ಕೊಡುವುದು. ನಾನು ನನ್ನ ಇಡೀ ಜೀವನದಲ್ಲಿ ನಂಬಿದ ಮೌಲ್ಯಗಳು ಮತ್ತು ಸಿದ್ಧಾಂತದ ಜೊತೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಅನ್ನ, ಆರೋಗ್ಯ, ವಸತಿ ಮತ್ತು ಉದ್ಯೋಗ ಸಿಗಬೇಕು ಎಂಬುದೇ ನನ್ನ ಆಶಯ. ಅದಕ್ಕಾಗಿಯೇ ನಮ್ಮ ಸರ್ಕಾರ ಬಡವರಿಗೆ ಉಚಿತ ಅನ್ನ, ಗೃಹಲಕ್ಷ್ಮಿ ಮೂಲಕ ಮಹಿಳೆಯರಿಗೆ 2,000 ರೂ., ಗೃಹಜ್ಯೋತಿ ಮೂಲಕ 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಹಾಗೂ ಶಕ್ತಿ ಯೋಜನೆ ಮೂಲಕ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣವನ್ನು ನೀಡಿದೆ. ರಾಜ್ಯದಲ್ಲಿ ಭೀಕರ ಬರಗಾಲ ಬಂದಾಗಲೂ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಎದುರಿಸಿದೆ. ನೆಲ, ಜಲ, ಭಾಷೆಯ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ ಎಂದು ಹೆಮ್ಮೆಯಿಂದ ನುಡಿದರು.

ಕೊನೆಯದಾಗಿ, ತಮಗೆ ಇಷ್ಟು ದಿನ ಬೆಂಬಲ ನೀಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್ ಹೈಕಮಾಂಡ್ ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದರು. ಸುದ್ದಿಗೋಷ್ಠಿಯ ಮುಕ್ತಾಯದ ವೇಳೆ ಡಿಕೆಶಿ ಸೇರಿದಂತೆ ಎಲ್ಲಾ ಪ್ರಮುಖ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರ ಕೈಹಿಡಿದು ಮೇಲಕ್ಕೆ ಎತ್ತಿ, ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತವಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರುವಂತೆ ಕ್ಯಾಮೆರಾಗಳಿಗೆ ಪೋಸ್ ನೀಡಿದರು.