ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲರ ಅನುಪಸ್ಥಿತಿಯಲ್ಲಿ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಹಸ್ತಾಂತರಿಸಿದ ಅವರು, ರಾಜಭವನದಿಂದ ಹೊರಬರುತ್ತಿದ್ದಂತೆ ಕಾರ್ಯಕರ್ತರ ತೀವ್ರ ಆಕ್ರೋಶ ಹಾಗೂ ಭಾವನಾತ್ಮಕ ಪ್ರತಿಭಟನೆಯನ್ನು ಎದುರಿಸಿದರು.

ಬೆಂಗಳೂರು: ರಾಜ್ಯ ರಾಜಕೀಯದ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ದಾಖಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತೀವ್ರ ರಾಜಕೀಯ ಜಿದ್ದಾಜಿದ್ದಿ ಹಾಗೂ ಹೈಕಮಾಂಡ್ ನಿರ್ದೇಶನದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಮಧ್ಯಾಹ್ನ ಬೆಂಗಳೂರಿನ ರಾಜಭವನಕ್ಕೆ (ಲೋಕಭವನ) ಆಗಮಿಸಿ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು. ರಾಜ್ಯಪಾಲ ಥಾವತ್ ಚಂದ್ ಗೆಹ್ಲೋಟ್ ಅನುಪಸ್ಥಿತಿಯಲ್ಲಿ ರಾಜಭವನದ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು. ಒಂದು ಪುಟದ ರಾಜೀನಾಮೆ ಪತ್ರ ಸಲ್ಲಿಕೆಯಾಗಿದ್ದು, ಪ್ರಭುಶಂಕರ್ ಅವರು ರಾಜೀನಾಮೆ ಪತ್ರವನ್ನು ಸ್ವೀಕಾರ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶೇಷವೆಂದರೆ, ಹೈವೋಲ್ಟೇಜ್ ಉಪಾಹಾರ ಕೂಟದ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಉತ್ತರಾಧಿಕಾರಿ ಎನ್ನಲಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಒಂದೇ ಕಪ್ಪು ಬಣ್ಣದ ರೇಂಜ್ ರೋವರ್ (Range Rover) ಕಾರಿನಲ್ಲಿ ರಾಜಭವನಕ್ಕೆ ಒಟ್ಟಿಗೆ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು. ಅವರ ಜೊತೆಗೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಎಂ.ಸಿ. ಸುಧಾಕರ್ ಹಾಗೂ ಹಲವಾರು ಕಾಂಗ್ರೆಸ್ ಶಾಸಕರು ಸಹ ರಾಜಭವನಕ್ಕೆ ದೌಡಾಯಿಸಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ (CS) ಶಾಲಿನಿ ರಜನೀಶ್ ಅವರೂ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯಪಾಲರ ಅನುಪಸ್ಥಿತಿ: ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವೈಯಕ್ತಿಕ ಕಾರಣಗಳಿಗಾಗಿ ತುರ್ತಾಗಿ ಇಂದೋರ್‌ಗೆ ಪ್ರಯಾಣ ಬೆಳೆಸಿರುವ ಕಾರಣ, ಅವರು ಇಂದು ರಾಜಭವನದಲ್ಲಿ ಲಭ್ಯವಿರಲಿಲ್ಲ. ಹೀಗಾಗಿ, ರಾಜ್ಯಪಾಲರ ಮುನ್ಸೂಚನೆ ಹಾಗೂ ನಿಯಮಾವಳಿಗಳ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಭಾವನದ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು.

ಸದ್ಯಕ್ಕೆ ಕಾರ್ಯದರ್ಶಿ ಪ್ರಭುಶಂಕರ್ ಅವರು ಮುಖ್ಯಮಂತ್ರಿಗಳ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದಾರೆ. ಆದರೆ, ಇಂದೋರ್‌ನಿಂದ ರಾಜ್ಯಪಾಲರು ಬೆಂಗಳೂರಿಗೆ ಮರಳಿದ ಬಳಿಕವಷ್ಟೇ ಈ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸಲಾಗುವುದು ಎಂದು ರಾಜಭವನದ ಮೂಲಗಳು ಸ್ಪಷ್ಟಪಡಿಸಿವೆ.

ಇಂದು ಸಂಜೆಯೇ ರಾಜ್ಯಪಾಲರು ವಾಪಸ್

ಇನ್ನೊಂದೆಡೆ ಇಂದು ಸಂಜೆ 6:30 ಕ್ಕೆ ರಾಜ್ಯಪಾಲರು ಬೆಂಗಳೂರಿಗೆ ಬಂದಿಳಿಯಲಿಯಲಿದ್ದಾರೆ. ನಿನ್ನೆ ರಾತ್ರಿ ವೈಯಕ್ತಿಕ ಕಾರ್ಯದ ನಿಮಿತ್ತ ಮುಂಬೈ ಮೂಲಕ ಇಂಧೋರ್ ಗೆ ಹೋಗಿದ್ದರು. ನಾಳೆ ಉಪರಾಷ್ಟ್ರಪತಿ ಕಾರ್ಯಕ್ರಮದ ಹಿನ್ನೆಲೆ ಇಂದೇ ರಾಜ್ಯಪಾಲರು ವಾಪಸ್. ನಾಳೆ ಬೆಳಗ್ಗೆಯಿಂದಲೇ ಉಪರಾಷ್ಟ್ರಪತಿಗಳ ಜೊತೆ ಬ್ಯುಸಿ ಆಗಲಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್.

ಸಿಎಂ ಕಾರಿಗೆ ಮುತ್ತಿಗೆ, ಅಡ್ಡ ಬಿದ್ದ ಕಾರ್ಯಕರ್ತರು: ಹತೋಟಿ ಮೀರಿದ ಪರಿಸ್ಥಿತಿ!

ರಾಜೀನಾಮೆ ಸಲ್ಲಿಕೆಯ ಪ್ರಕ್ರಿಯೆಯನ್ನು ಮುಗಿಸಿ ಸಿದ್ದರಾಮಯ್ಯ ಅವರು ರಾಜಭವನದಿಂದ ಹೊರಬರುತ್ತಿದ್ದಂತೆ ಅಲ್ಲಿ ಜಮಾಯಿಸಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಆಕ್ರೋಶ ಕಟ್ಟೆ ಒಡೆಯಿತು. ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಘೋಷಣೆ ಕೂಗಿದ ಅಭಿಮಾನಿಗಳು, ಅವರು ಸಂಚರಿಸುತ್ತಿದ್ದ ರೇಂಜ್ ರೋವರ್ ಕಾರಿಗೆ ಮುತ್ತಿಗೆ ಹಾಕಿದರು.

ಸಿಎಂ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಈ ನಡುವೆ ತೀವ್ರ ಭಾವುಕರಾದ ಸಿದ್ದರಾಮಯ್ಯ ಅವರ ಆಪ್ತ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿಗಳ ಕಾರಿನ ಮುಂದೆಯೇ ಅಡ್ಡ ಬಿದ್ದು ರಾಜೀನಾಮೆ ನಿರ್ಧಾರವನ್ನು ಹಿಂಪಡೆಯುವಂತೆ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸಿ, ಮುಖ್ಯಮಂತ್ರಿಗಳ ಕಾರು ಮುಂದೆ ಸಾಗಲು ದಾರಿ ಮಾಡಿಕೊಟ್ಟರು.