ಮನಸ್ಸಿಗೆ ಬಂದಂತೆ ಸರ್ಕಾರ ವರ್ತನೆ ಮಾಡುತ್ತಿರುವ ಹಂತದಲ್ಲಿ ಜನಸಾಮಾನ್ಯನ ಬದುಕು ಬೀದಿಗೆ ಬಿದ್ದ ಲಕ್ಷಣ ಸ್ಪಷ್ಟವಾಗಿ ಗೋಚರವಾಗಿದೆ. ವಿದ್ಯುತ್ ಬೆಲೆ ದುಪ್ಪಟ್ಟು ಏರಿಕೆ ಮಾಡಿದ್ದರೆ, ಇನ್ನೊಂದೆಡೆ ಫ್ರೀ ಬಸ್ ಕಲ್ಪಿಸುವ ಮೂಲಕ ಬಡ ಆಟೋಚಾಲಕನ ದಿನಗೂಲಿಗೂ ಸರ್ಕಾರ ಕನ್ನ ಹಾಕಿದೆ. ಇದರ ಬೆನ್ನಲ್ಲಿಯೇ ಅಟೋ ಚಾಲಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರು (ಜೂ.22): ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ವಿದ್ಯುತ್ ದರವನ್ನು ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ಯಾವ ಮಟ್ಟದ ಏಟು ನೀಡಿದೆ ಎಂದರೆ, ದಿನಬಳಕೆ ವಸ್ತುಗಳ ಬೆಲೆಗಳು ಒಂದೇ ಸಮನೆ ಏರಿಕೆ ಆಗುತ್ತಿವೆ. ತರಕಾರಿ, ದಿನಸಿ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದರೆ, ಅಕ್ಕಿ ಬೆಲೆಗಳ್ಲಿ 5 ರಿಂದ 10 ರೂಪಾಯಿ ಏರಿಕೆ ಮಾಡಲಿದ್ದೇವೆ ಎಂದು ರೈಸ್ ಮಿಲ್ ಮಾಲೀಕರ ಸಂಘ ಹೇಳಿದೆ. ಹೋಟೆಲ್ ಊಟ, ಕಾಫಿ, ತಿಂಡಿ ಬೆಲೆಗಳೂ ಏರಿಕೆಯಾಗುವ ಸುದ್ದಿ ಸಿಕ್ಕಿದೆ. ನಂದಿನಿ ಹಾಲಿನ ಬೆಲೆಯಲ್ಲಿ 5 ರೂಪಾಯಿ ಏರಿಕೆ ಪ್ರಸ್ತಾಪ ಇಡಲಾಗಿದೆ. ನೀರಿನ ಬಿಲ್ ಏರಿಕೆಯಾಗುವ ಸೂಚನೆ ಸಿಕ್ಕಿದೆ. ಇವೆಲ್ಲವುಗಳ ನಡುವೆ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್ ಯೋಜನೆ ಜಾರಿಗೆ ತಂದಿರುವ ಕಾರಣ, ಮಹಿಳಾ ಪ್ರಯಾಣಿಕರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದ ಆಟೋ ಚಾಲಕರು, ಖಾಸಗಿ ಬಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಬದುಕು ಅಕ್ಷರಶಃ ನರಕವಾಗಿದೆ. ಈ ನಡುವೆ ಸಾಮಾನ್ಯ ಜನರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಒಂದೊಂದೇ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದರೆ, ಸರ್ಕಾರ ಮಾತ್ರ ಎಲ್ಲಾ ಬೆಲೆ ಏರಿಕೆಗೆ ಮೂಲ ಕಾರಣವಾಗಿರುವ ವಿದ್ಯುತ್ ದರವನ್ನು ಇಳಿಕೆ ಮಾಡುವ ಯಾವುದೇ ನಿರ್ಧಾರ ಮಾಡಿಲ್ಲ.
ಆಟೋ ಡ್ರೈವರ್ ಒಬ್ಬರ ವಿಡಿಯೋ ವೈರಲ್ ಆಗಿದ್ದು, ಹೀಗೆ ಮುಂದುವರಿದರೆ ನಮಗೆ ವಿಷದ ಬಾಟಲಿ ಕೊಟ್ಟು, ಮರಣ ಭಾಗ್ಯವನ್ನು ಸರ್ಕಾರ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
'ಕರ್ನಾಟಕದ ಹೊಸ ಮುಖ್ಯಮಂತ್ರಿಯಾದ ಸಿದ್ಧರಾಮಯ್ಯ ಅವರಿಗೆ ಸಮಸ್ತ ಆಟೋ ಚಾಲಕರ ಪರವಾಗಿ ಅಭಿನಂದನೆಗಳು. ನೀವು ಬಂದ ತಕ್ಷಣವೇ, ನಾವೇನು ಪಾಪ ಮಾಡಿದ್ದೇವೆ ಎಂದು ನೀವು ಈ ಶಿಕ್ಷೆ ಕೊಟ್ಟಿದ್ದೀರಿ? ನಮಗೆ ಲಿಮಿಟ್ ಇರುವುದೇ ಕೇವಲ 10 ಕಿಲೋ ಮೀಟರ್. ಅದಕ್ಕಿಂತ ಹೊರಗೆ ಹೋದರೆ ಪೊಲೀಸ್ ಕಿರಿಕಿರಿ. 10 ಕಿಲೋಮೀಟರ್‌ಗಿಂತ ಹೊರಗೆ ಹೋಗೋಕೆ ಸಾಧ್ಯವೇ ಇಲ್ಲ. ಅದರ ನಡುವೆ ಉಬರ್, ಓಲಾ, ರಾಪಿಡೋ ಹೀಗೆ ಹತ್ತು ಹಲವಾರು ತೊಂದರೆಗಳು. ಅದರ ನಡುವೆ ಮಹಿಳೆಯರಿಗೆ ಫ್ರೀ ಮಾಡಿದ್ದೀರಿ. ಇದರಲ್ಲಿ 400-500 ರೂಪಾಯಿ ದುಡಿಯುವವರು ಅದರಲ್ಲಿ ಅರ್ಧ ಅಂದರೆ 200 ರೂಪಾಯಿಯಲ್ಲಿ ಮಾಲಕರಿಗೂ ಕೊಡಬೇಕು. ಹಾಗಿದ್ದಾಗ ನಾವು ಮನೆಗೆ ತೆಗೆದುಕೊಂಡು ಹೋಗೋದು ಏನೂ ಇಲ್ಲ. ಆಟೋ ಚಾಲಕರನ್ನ ಸರ್ವನಾಶ ಮಾಡಬೇಕು ಅಂದ್ಕೊಂಡು ನೀವು ಈ ನಿರ್ಧಾರ ಮಾಡಿರೋ ಹಾಗೆ ಇದೆ. ಹಸಿದ ಹೊಟ್ಟೆಯಲ್ಲಿ ಆಟೋ ಚಾಲಕನೊಬ್ಬ ಮಾತನಾಡುತ್ತಿದ್ದೇನೆ. ನಾವೇನು ತಪ್ಪು ಮಾಡಿದ್ದೇವೆ. ಫ್ರೀ ಕೊಟ್ಟು, ತಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಇಡುವ ಹಾಗೆ ಮಾಡಿದ್ದೀರಲ್ಲ. ಇನ್ನೂ ಒಂದು ಎರಡು ಭಾಗ್ಯವನ್ನು ನೀವು ಕೊಟ್ಟುಬಿಡಿ. ನಿಮಗೆ ಮಹಿಳೆಯರು ಮಾತ್ರವೇ ವೋಟ್ ಹಾಕಿಲ್ಲ. ಪುರುಷರ ವೋಟ್ ಹಾಕಿದ್ದಾರೆ. ಪುರುಷರಿಗೂ ಫ್ರೀ ಕೊಟ್ಟು, ಸಮಸ್ತ ಆಟೋ ಚಾಲಕರಿಗೆ ವಿಷದ ಬಾಟಲಿ ಕೊಟ್ಟುಬಿಡಿ. ನಿಮ್ಮ ಹೆಸರಲ್ಲಿ ಎಲ್ಲರೂ ವಿಷ ತೆಗೆದುಕೊಂಡು ಸತ್ತು ಹೋಗುತ್ತೇವೆ ಎಂದು ಅವರು ಹೇಳಿದ್ದಾರೆ.
ವಿದ್ಯುತ್ ದರ ಏರಿಕೆ: ಉತ್ತರ, ಮಧ್ಯ ಕರ್ನಾಟಕದಲ್ಲಿಂದು ಉದ್ಯಮ ಬಂದ್!
100, 150 ರೂಪಾಯಿ ತೆಗೆದುಕೊಂಡು ಮನೆಗೆ ಹೋಗುವಾಗ ನಮ್ಮ ಕಣ್ಣೀರು ಕಪಾಳಕ್ಕೆ ಬರುತ್ತಿದೆ ಸಿದ್ಧರಾಮಯ್ಯ ಅವರೇ. ನೀವು ಕೋಟಿ ರೂಪಾಯಿ ವಾಚ್ ಹಾಕೋತೀರಿ. ನಮಗೆ ಹಾಗಿಲ್ಲ. ದಯವಿಟ್ಟು ಆಟೋ ಚಾಲಕರನ್ನ ಕಾಪಾಡಿ. ಇಲ್ಲದದ್ದರೆ, ನಗರದಲ್ಲಿ ಕೊಲೆ, ಸುಲಿಗೆ ಕಳ್ಳತನ ಹೆಚ್ಚಾಗುವುದು ಖಂಡಿತ. ಯಾಕೆಂದರೆ, ಮನೆ ನಡೆಸಲೇಬೇಕು, ಮಕ್ಕಳನ್ನು ಓದಿಸಲೇಬೇಕು. ಇದರಿಂದಾಗಿ ಕೊಲೆ, ಸುಲಿಗೆ ಖಂಡಿತಾ ಹೆಚ್ಚಾಗುತ್ತದೆ. ಇದಕ್ಕೆಲ್ಲಾ ನೀವೇ ಕಾರಣ. ಕರೆಂಟ್ ಬಿಲ್ 1800 ರೂಪಾಯಿ ಬಂದಿದೆ. 600 ರೂಪಾಯಿ ಬರ್ತಿತ್ತು. 10 ಕೆಜಿ ಅಕ್ಕಿ ಕೊಡ್ತೇನೆ ಅಂದ್ರಲ್ಲ ಏನ್ ಸರ್ ಇದಲ್ಲ. ದಯವಿಟ್ಟು ಆಟೋ ಚಾಲಕರ ಬಗ್ಗೆ ಒಳ್ಳೆದಾಗುವ ನಿರ್ಧಾರ ಕೈಗೊಳ್ಳಿ. ಇಲ್ಲದೇ ಇದ್ರೆ ಆಟೋ ಚಾಲಕರು ಒಬ್ಬೊಬ್ಬರಾಗಿ ಸಾಯುವುದು ಖಂಡಿತ. ಎಷ್ಟೋ ಭಾಗ್ಯಗಳನ್ನು ಕೊಟ್ಟಿದ್ದೀರಿ, ಸಿದ್ಧರಾಮಯ್ಯ ಸರ್ಕಾರದಿಂದ ಆಟೋ ಚಾಲಕರಿಗೆ ಮರಣಭಾಗ್ಯ ಕೊಟ್ಟುಬಿಡಿ. ನಿಮ್ಮ ರಾಜಕೀಯಕ್ಕಾಗಿ ನಮ್ಮನ್ನು ಬಲಿಕೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ವಿದ್ಯುತ್ ದರ ಹೆಚ್ಚಳ ನಿರ್ಧಾರ ಹಿಂಪಡೆಯಲ್ಲ: ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ
