‘ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರಿಗೂ, ನನಗೂ ಹೋಲಿಕೆ ಇಲ್ಲ. ಆದರೆ, ಇಬ್ಬರೂ ಒಂದೇ ಜಿಲ್ಲೆಯಿಂದ ಬಂದವರು‌. ಅವರು ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಆಡಳಿತ ನಡೆಸಿದ ದಾಖಲೆ ನಾನು ಮುರಿಯುತ್ತಿದ್ದೇನೆ. ಜನರ ಆಶೀರ್ವಾದವೇ ಇದಕ್ಕೆ ಕಾರಣ’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು : ‘ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರಿಗೂ, ನನಗೂ ಹೋಲಿಕೆ ಇಲ್ಲ. ಆದರೆ, ಇಬ್ಬರೂ ಒಂದೇ ಜಿಲ್ಲೆಯಿಂದ ಬಂದವರು‌. ಅವರು ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಆಡಳಿತ ನಡೆಸಿದ ದಾಖಲೆಯನ್ನು ನಾನು ಮುರಿಯುತ್ತಿದ್ದೇನೆ. ಜನರ ಆಶೀರ್ವಾದವೇ ಇದಕ್ಕೆ ಕಾರಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್‌ ರೆಕಾರ್ಡ್‌ ನ್ನು ವಿರಾಟ್ ಕೊಹ್ಲಿ ಮುರಿಯಲಿಲ್ವಾ? ಹಾಗೆಯೇ, ಮುಂದೆ ಯಾರಾದರೂ ಬರಬಹುದು. ಈ ರೆಕಾರ್ಡ್ ನ್ನು ಬ್ರೇಕ್ ಮಾಡಬಹುದು. ನನಗಿಂತ ಹೆಚ್ಚಿನ ಬಜೆಟ್ ಮಂಡಿಸಬಹುದು. ಹೀಗಾಗಿ, ನನ್ನ ಈ ದಾಖಲೆಯನ್ನು ಯಾರೂ ಮುರಿಯಲು ಆಗುವುದಿಲ್ಲ ಎಂದು ನಾನು ಹೇಳಲಾರೆ’ ಎಂದರು.

 ಡಿ.ದೇವರಾಜ ಅರಸು ಅವರಿಗೂ, ನನಗೂ ಹೋಲಿಕೆ ಮಾಡುವುದು ಸರಿಯಲ್ಲ

‘ಆದರೆ, ಡಿ.ದೇವರಾಜ ಅರಸು ಅವರಿಗೂ, ನನಗೂ ಹೋಲಿಕೆ ಮಾಡುವುದು ಸರಿಯಲ್ಲ. ದೇವರಾಜ ಅರಸು ಅವರ ಕಾಲದ ರಾಜಕಾರಣವೇ ಬೇರೆ, ಇವತ್ತಿನ ರಾಜಕಾರಣವೇ ಬೇರೆ‌. ಎಲ್ಲಾ ಸ್ಥಿತಿಗತಿಗಳು ಬೇರೆ, ಬೇರೆ ರೀತಿ ಇವೆ. ಅರಸು ಸಮುದಾಯ ಸಂಖ್ಯೆಯಲ್ಲಿ ಮಾತ್ರ ಸಣ್ಣ ಸಮುದಾಯ. ಆದರೆ, ಸಾಮಾಜಿಕವಾಗಿ ಎತ್ತರದಲ್ಲಿರುವ ಸಮುದಾಯವದು. ನನ್ನದು ಸಾಮಾಜಿಕವಾಗಿ ತಳ ಸಮುದಾಯ’ ಎಂದರು

ಸಿಎಂ ಆಗುತ್ತೇನೆ, ಮಂತ್ರಿ ಆಗುತ್ತೇನೆ ಅಂದುಕೊಂಡಿರಲಿಲ್ಲ

‘ರೆಕಾರ್ಡ್ ವಿಚಾರ ಬಿಡಿ, ದಾಖಲೆ ವಿಚಾರ ಬಿಡಿ. ಆದರೆ, ನಾನು ಯಾವತ್ತೂ ಸಿಎಂ ಆಗುತ್ತೇನೆ, ಮಂತ್ರಿ ಆಗುತ್ತೇನೆ ಅಂದುಕೊಂಡಿರಲಿಲ್ಲ. ಸಿಎಂ ಸ್ಥಾನದ ಕನಸನ್ನೂ ಕಂಡಿರಲಿಲ್ಲ. ಶಾಸಕನಾಗಬೇಕು ಅಂದುಕೊಂಡಿದ್ದೆ. ಜನರು ಆವತ್ತೇ ದುಡ್ಡು ಹಾಕಿ ನನ್ನನ್ನು ಶಾಸಕನನ್ನಾಗಿ ಮಾಡಿದರು. ಅದೇ ಜನರ ಆಶೀರ್ವಾದದಿಂದ ಅಲ್ಲಿಂದ ಇಲ್ಲಿಯತನಕ ಬೆಳೆದಿದ್ದೇನೆ. ಜನರ ಆಶೀರ್ವಾದದಿಂದ ಇದೆಲ್ಲಾ ಆಗಿದೆ’ ಎಂದು ಹೇಳಿದರು.

ರಾಜ್ಯದ ದೀರ್ಘಾವಧಿ ಸಿಎಂಗಳು

ದೇವರಾಜ ಅರಸು: 7 ವರ್ಷ 238 ದಿನ

ಸಿದ್ದರಾಮಯ್ಯ (ಇಂದಿಗೆ): 7 ವರ್ಷ 238 ದಿನ

ಸಿದ್ದರಾಮಯ್ಯ (ನಾಳೆಗೆ): 7 ವರ್ಷ 239 ದಿನ

ಸಿದ್ದು ಇತಿಹಾಸ ಪುಟಕ್ಕೆ

ಸಿದ್ದರಾಮಯ್ಯ ಇತಿಹಾಸ ಪುಟಕ್ಕೆ ಹಿಂದೆಯೂ ಸೇರಿದ್ದಾರೆ, ಮುಂದೆಯೂ ಸೇರುತ್ತಾರೆ. ರಾಜ್ಯದ ಅತಿ ದೀರ್ಘಾವಧಿ ಸಿಎಂ ಆಗಲಿರುವ ಅವರಿಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ. ಇದು ಇಡೀ ರಾಜ್ಯವೇ ಸಂಭ್ರಮಿಸುವ ದಿನ.

- ಡಿ.ಕೆ. ಶಿವಕುಮಾರ್‌, ಡಿಸಿಎಂ