ಬೆಂಗಳೂರು[ಜ.27]: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಮುಂದುವರೆಸಿದ್ದಾರೆ. ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಭಾರೀ ಆಮಿಷ ಒಡ್ಡುತ್ತಿದ್ದಾರೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ರಾಜ್ಯ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ತನ್ಮೂ​ಲಕ ಬಿಜೆಪಿಯವರು ಭಾರೀ ಗಿಫ್ಟ್‌ಗಳ ಮೂಲಕ ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶುಕ್ರ​ವಾರ ನೀಡಿದ ಹೇಳಿ​ಕೆ​ಯನ್ನು ಅವರು ಸಮರ್ಥಿ​ಸಿ​ಕೊಂಡಿದ್ದು, ಬಿಟ್ಟಿಹಣ ಹೊಂದಿ​ರುವ ಬಿಜೆಪಿ ನಾಯ​ಕರು ಕಾಂಗ್ರೆಸ್‌ ಶಾಸ​ಕ​ರನ್ನು ಸೆಳೆ​ಯಲು ಸತತ ಪ್ರಯತ್ನ ಮುಂದು​ವ​ರೆ​ಸಿ​ದ್ದಾರೆ ಎಂದು ಟೀಕಿಸಿದ್ದಾ​ರೆ.

ಕೆಪಿಸಿಸಿ ಕಚೇರಿ ಎದುರು ಶನಿ​ವಾರ ನಡೆದ ಭಾರತದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರು ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಭಾರಿ ಉಡುಗೊರೆಯ ಆಮಿಷವೊಡ್ಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಮಾತು ಸತ್ಯ. ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿಯವರು ಹಣದ ಆಮಿಷ ತೋರಿಸುತ್ತಿದ್ದಾರೆ ಎಂದು ಹೇಳಿ​ದ​ರು.

‘ಬಿಜೆಪಿಯವರು ಬಿಟ್ಟಿ ದುಡ್ಡು ಮಾಡಿಕೊಂಡಿದ್ದಾರೆ. ಆ ಹಣವನ್ನು ಇಟ್ಟುಕೊಂಡು ನಮ್ಮ ಶಾಸಕರನ್ನು ಸೆಳೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ನಿತ್ಯವೂ ಹಣ ತೋರಿಸಿ ಬನ್ನಿ, ಬನ್ನಿ ಎಂದು ಕರೆಯುತ್ತಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವುದು ಸತ್ಯ’ ಎಂದರು.

ಈಗಾಗಲೇ ಆಪರೇಷನ್‌ ಕಮಲ ವಿಫಲವಾಗಿದೆ. ಸರ್ಕಾರವನ್ನು ಬೀಳಿಸಲು ಏನೆಲ್ಲಾ ಪ್ರಯತ್ನ ಮಾಡಿದರೋ ಎಲ್ಲವೂ ವಿಫಲವಾಗಿದೆ. ಹೀಗಿದ್ದರೂ ಆಮಿಷವೊಡ್ಡುವುದನ್ನು ನಿಲ್ಲಿಸಿಲ್ಲ ಎಂದು ಕಿಡಿಕಾರಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಕೇಂದ್ರ ಸರ್ಕಾರವು ಸಂವಿಧಾನ ವಿರೋಧಿ ಕಾರ್ಯಗಳಲ್ಲಿ ತೊಡಗಿದೆ. ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್‌ ಶಾಸಕರನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಶಾಸ​ಕ​ರನ್ನು ಸೆಳೆ​ಯಲು ಬಿಜೆಪಿ ನಡೆ​ಸು​ತ್ತಿದೆ ಎನ್ನ​ಲಾದ ಆಪ​ರೇ​ಷನ್‌ ಕಮಲ ಪ್ರಯತ್ನವು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷ​ಗಳ ರೆಸಾ​ರ್ಟ್‌ ವಾಸದ ನಂತರ ನಿಂತಿದೆ. ಶಾಸ​ಕಾಂಗ ಪಕ್ಷಕ್ಕೆ ಗೈರು ಹಾಜ​ರಾ​ಗಿದ್ದ ಶಾಸ​ಕರು ಸಹ ಒಬ್ಬೊ​ಬ್ಬರೇ ಪ್ರತ್ಯ​ಕ್ಷ​ವಾಗಿ ಕಾಂಗ್ರೆಸ್‌ ಪಕ್ಷ​ದಲ್ಲೇ ಇರು​ವು​ದಾಗಿ ಸ್ಪಷ್ಟನೆ ನೀಡಿದ ನಂತರ ಈ ಪ್ರಯತ್ನ ನಿಂತಿದೆ ಎಂದೇ ನಾಯ​ಕರು ಹೇಳಿಕೆ ನೀಡಿ​ದ್ದರು. ಆದರೆ, ಶುಕ್ರ​ವಾರ ಕುಮಾ​ರ​ಸ್ವಾಮಿ ಅವರು ಬಿಜೆ​ಪಿಯು ಆಪ​ರೇ​ಷನ್‌ ಕಮಲ ಪ್ರಯತ್ನವನ್ನು ಇನ್ನೂ ನಡೆ​ಸು​ತ್ತಿದ್ದು, ಕಾಂಗ್ರೆಸ್‌ ಶಾಸ​ಕ​ರಿಗೆ ದೊಡ್ಡ ಗಿಫ್ಟ್‌ ನೀಡುವು​ದಾಗಿ ಕರೆ ಮಾಡಿ​ದ್ದರು ಎಂದು ಆರೋ​ಪಿ​ಸಿ​ದ್ದರು.