ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಫೆ.05): ಲೋಕಸಭೆ ಚುನಾವಣೆಗೂ ಮುನ್ನ ಬಾಗಲಕೋಟೆ ಜಿಲ್ಲಾ ಪಂಚಾಯತಿಯಲ್ಲಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ತೀವ್ರ ಪೈಪೋಟಿ ಕಂಡು ಬಂದಿದ್ದು, ಇತ್ತ ಕೈ ಪಾಳೆಯದ ಅತೃಪ್ತರ ಬಣವೊಂದು ಬಿಜೆಪಿಯೊಂದಿಗೆ ಕೈ ಜೋಡಿಸೋ ಲೆಕ್ಕಾಚಾರಕ್ಕೆ ಬಂದಿದೆ.

ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಸದಸ್ಯರ ಒಗ್ಗೂಡಿಸಲು ಇಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಸ್ವಕ್ಷೇತ್ರದಲ್ಲಿ ಬಿಜೆಪಿಯೊಂದಿಗಿನ ಸಖ್ಯ ಬೆಳೆಸೋಕೆ ಕೈ ಸದಸ್ಯರು ಮುಂದಾಗಿರೋ ಕಾರಣ ಮುಂದಾಗುವ ಮುಜಗರ ತಪ್ಪಿಸಲು ಸಿದ್ದರಾಮಯ್ಯ ಮುಂದಾಗಿದ್ದು, ಇಂದಿನ ಸಭೆ ತೀವ್ರ ಕುತೂಹಲ ಮೂಡಿಸಿದೆ.

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪಂಚಾಯತಿ ಅಧ್ಯಕ್ಷರ ರಾಜೀನಾಮೆ ವಿಚಾರ ಕಾಂಗ್ರೆಸ್ ಸದಸ್ಯರಲ್ಲಿಯೇ ಒಡಕು ಮೂಡುವಂತೆ ಮಾಡಿದ್ದು, ಇದೀಗ ಅತೃಪ್ತರ ಬಣವೊಂದು ಕೈ ಪಾಳೆಯದಲ್ಲಿಯೇ ತಲೆನೋವಾಗಿ ಪರಿಣಮಿಸಿದೆ.

"

ಹಾಲಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ರಾಜೀನಾಮೆ ಕೊಡಿಸಿ ಬೇರೆಯವರಿಗೆ ಅವಕಾಶ ಕೊಡಿ ಅನ್ನೋದು ಅತೃಪ್ತ ಬಣದ ಐದಾರು ಸದಸ್ಯರ ವಾದವಾದರೆ ಇತ್ತ ಹಾಲಿ ಅಧ್ಯಕ್ಷೆಯೇ ಮುಂದುವರೆಯಬೇಕು ಅನ್ನೋದು ಕೆಲವರ ವಾದ. ಇವುಗಳ ಮಧ್ಯೆ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಕರೆದಿದ್ದ ಸಭೆಗೆ ಕೆಲವು ಸದಸ್ಯರು ಗೈರು ಉಳಿದಿದ್ದು, ಕೈ ನಾಯಕರ ಅಸಮಾಧಾನ ಬಹಿರಂಗಗೊಂಡಿತ್ತು.

ಆದ್ರೆ ಇದನ್ನೇ ಬಂಡವಾಳವನ್ನಾಗಿಸಿಕೊಂಡ ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯರು ಅತೃಪ್ತರೊಂದಿಗೆ ಸೇರಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದು, ಈಗಾಗಲೇ ಅತೃಪ್ತ ಜಿಪಂ ಕೈ ಸದಸ್ಯರೊಂದಿಗೆ ಎರಡ್ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಶೀಘ್ರದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ, ಅತೃಪ್ತ ಕಾಂಗ್ರೆಸ್ ಸದಸ್ಯರೊಂದಿಗೆ ಸೇರಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ನೀಡಿ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಬರಲಿದೆ ಅಂತ ಬಿಜೆಪಿ ಜಿಪಂ ಸದಸ್ಯರು ಬಹಿರಂಗವಾಗಿಯೇ ಹೇಳಿಕೊಂಡಿದ್ದು, ಇದೀಗ ಕಾಂಗ್ರೆಸ್ ಪಾಲಿಗೆ ತೀವ್ರ ಮುಜಗರ ತರುವಂತೆ ಮಾಡಿದೆ.

ಇನ್ನು ಬಾಗಲಕೋಟೆ ಜಿಲ್ಲಾ ಪಂಚಾಯತಿಯ 36 ಸದಸ್ಯರ ಬಲದಲ್ಲಿ 18 ಸದಸ್ಯರನ್ನ ಹೊಂದಿರೋ ಬಿಜೆಪಿಗೆ ಎದುರಾಗಿ 17 ಕಾಂಗ್ರೆಸ್ ಸದಸ್ಯರನ್ನು ಹೊಂದಿ ರೈತಸಂಘ ಸದಸ್ಯರೊಂದಿಗೆ ಅಧಿಕಾರ ಹಿಡಿದಿರೋ ಕಾಂಗ್ರೆಸ್‌ಗೆ ಹಾಲಿ ಅಧ್ಯಕ್ಷೆ ರಾಜೀನಾಮೆ ನೀಡಿಸಿ ಮರಳಿ ಅಧಿಕಾರ ಪಡೆಯೋದು ಸುಲಭದ ಮಾತಲ್ಲ.

"

ಹೀಗಾಗಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯತಿ ಸದಸ್ಯರಿಗೆ, ಸಚಿವರು ಮತ್ತು ಮಾಜಿ ಸಚಿವರಿಗೆ ಹಾಗೂ ಹಾಲಿ ಮತ್ತು ಮಾಜಿ ಶಾಸಕರಿಗೆ ಸೇರಿದಂತೆ ಕಾಂಗ್ರೆಸ್‌ನ ಜಿಲ್ಲಾ ಪ್ರಮುಖ ನಾಯಕರೊಂದಿಗೆ ಸಭೆ ಕರೆದಿದ್ದು, ಎಲ್ಲರನ್ನ ಒಗ್ಗೂಡಿಸೋ ತಂತ್ರ ಹೆಣೆಯಲು ಮುಂದಾಗಿದ್ದು, ಇದರೊಟ್ಟಿಗೆ ಲೋಕಸಭೆ ಅಭ್ಯರ್ಥಿ ಕುರಿತು ವಿಚಾರ ಪ್ರಸ್ತಾಪ ಆಗಲಿದೆ ಎನ್ನಲಾಗುತ್ತಿದೆ.