ತುಮಕೂರು[ಜ.22]: ‘ಗುರು’ ಎಂಬ ಪದಕ್ಕೆ ಅನ್ವರ್ಥ ನಾಮದಂತಿದ್ದರು ಸಿದ್ಧಗಂಗಾ ಶ್ರೀಗಳು. ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಸಾವಿರಾರು ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಿರುವ ಹಿಂದೆ ಅವರೊಳಗಿದ್ದ ಗುರು ಹಾಗೂ ಗುರುತ್ವ ಶಕ್ತಿ ಅಮೋಘವಾಗಿ ಕಾರ್ಯನಿರ್ವಹಿಸಿದೆ.

ಮಠಾಧಿಪತಿಯಾಗಿ ಸಮಾಜಕ್ಕೆ ದಾರಿ ತೋರಿದ ಅವರು ಅತ್ಯುತ್ತಮ ಶಿಕ್ಷಕರೂ ಹೌದು. ಅನೇಕ ದಶಕಗಳ ಕಾಲ ಬೆಳಗಿನ ಸಮಯದಲ್ಲಿ ಶ್ರೀ ಮಠದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹಾಗೂ ಸಂಸ್ಕೃತ ಹೇಳಿಕೊಡುತ್ತಿದ್ದರು. ಪ್ರತಿ ಶಬ್ದವನ್ನೂ ವಾಕ್ಯವನ್ನೂ ಬಿಡಿಸಿ ಬಿಡಿಸಿ ಹೇಳಿ ಮನದಟ್ಟು ಮಾಡುತ್ತಿದ್ದರು.

120 ವಿದ್ಯಾರ್ಥಿಗಳನ್ನು ಏಕಕಾಲದಲ್ಲಿ ಗಮನಿಸುತ್ತಿದ್ದರು. ಅಸಾಧಾರಣ ಸ್ಮರಣಶಕ್ತಿ ಹೊಂದಿದ್ದ ಶ್ರೀಗಳು, ಯಾರು ಪಾಠಕ್ಕೆ ಗೈರು ಆಗುತ್ತಾರೆಂಬುದನ್ನು ನೆನಪಿಟ್ಟುಕೊಂಡು ಮರುದಿನ ತರಗತಿಗೆ ಹೋದಾಗ ಕಾರಣ ಕೇಳಿ ಕಿವಿ ಹಿಂಡುತ್ತಿದ್ದರು.