ಜಾರಕಿಹೊಳಿ ಸೀಡಿ ಕೇಸಲ್ಲಿ ಯುವತಿ ವಾದವನ್ನೂ ಆಲಿಸಬೇಕು: ಹೈಕೋರ್ಟ್
* ತನಿಖೆಯ ಅಂತಿಮ ವರದಿ ವಿಚಾರಣಾ ಕೋರ್ಟ್ ಸಲ್ಲಿಸಲು ಅನುಮತಿ ನೀಡಬೇಕು
* ಯುವತಿ ಪರ ವಕೀಲರ ಮನವಿಯಂತೆ ಅರ್ಜಿ ವಿಚಾರಣೆ
* ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು(ಸೆ.15): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ ಮುಂದೂಡಿತು.
ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ ನಗರ ಪೊಲೀಸ್ ಆಯುಕ್ತರ ಹೊರಡಿಸಿದ ಆದೇಶ ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹಾಜರಾಗಿ, ಅರ್ಜಿ ವಿಚಾರಣೆಯನ್ನು ಒಂದು ದಿನ ಮುಂದೂಡಬೇಕು ಎಂದು ಕೋರಿದರು.
ಜಾರಕಿಹೊಳಿ ಸೀಡಿ ಕೇಸ್: ಜು. 27ರವರೆಗೆ ತನಿಖಾ ವರದಿ ಸಲ್ಲಿಕೆ ಬೇಡ, ಕೋರ್ಟ್
ಈ ನಡುವೆ ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ತನಿಖೆ ಆರಂಭವಾದ ಬಳಿಕ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಂತೆ ತನಿಖೆ ಮುಕ್ತಾಯವಾದ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಪ್ರಕರಣದ ತನಿಖೆ ಮುಕ್ತಾಯಗೊಂಡಿದೆ. ಆದ್ದರಿಂದ ತನಿಖೆಯ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣ ಕುರಿತ ಎಸ್‌ಐಟಿ ತನಿಖೆಯನ್ನೇ ಯುವತಿ ಪ್ರಶ್ನೆ ಮಾಡಿದ್ದಾರೆ. ಹೀಗಾಗಿ, ಅವರ ವಾದವೂ ಆಲಿಸಬೇಕಿದೆ ಎಂದು ತಿಳಿಸಿ, ಯುವತಿ ಪರ ವಕೀಲರ ಮನವಿಯಂತೆ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ನಿಗದಿಪಡಿಸಿತು.