ಆಕ್ಸಿಜನ್‌ಗೆ ಹಾಹಾಕಾರ!| ಬೆಂಗಳೂರಿನಲ್ಲಿ ಕೊರೋನಾ ಚಿಕಿತ್ಸೆಗೆ ಆಕ್ಸಿಜನ್‌ ಸಿಗದೆ ಪರದಾಟ| ನಿತ್ಯ 300 ಟನ್‌ ಬೇಕು, ಈಗ ಸಿಗುತ್ತಿರೋದು 100 ಟನ್‌ ಮಾತ್ರ| ಬೆಂಗಳೂರಿನ ಆಕ್ಸಿಜನ್‌ ಘಟಕವೊಂದರ ಮುಂದೆ ಸಿಲಿಂಡರ್‌ಗಾಗಿ ಕಾಯುತ್ತಿರುವ ಆಸ್ಪತ್ರೆಯ ವಾಹನಗಳು

ಬೆಂಗಳೂರು(ಏ.18): ಬೆಂಗಳೂರಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾದಂತೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಮೆಡಿಕಲ್‌ ಆಕ್ಸಿಜನ್‌ನ ತೀವ್ರ ಕೊರತೆ ಉಂಟಾಗಿದೆ. ನಿತ್ಯ 300 ಟನ್‌ ಮೆಡಿಕಲ್‌ ಆಕ್ಸಿಜನ್‌ ಅಗತ್ಯವಿದ್ದರೆ ಕೇವಲ 100 ಟನ್‌ ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ ‘ವೈದ್ಯಕೀಯ ವಿಪತ್ತು’ ಎಚ್ಚರಿಕೆ ನೀಡಿರುವ ಖಾಸಗಿ ಆಸ್ಪತ್ರೆಗಳು, ಆಕ್ಸಿಜನ್‌ ಸಪೋರ್ಟ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೀವಗಳನ್ನು ಉಳಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿವೆ.

ಕೆಲ ಆಸ್ಪತ್ರೆಗಳಲ್ಲಿ 6ರಿಂದ 10 ಗಂಟೆವರೆಗೆ ಮಾತ್ರ ರೋಗಿಗಳಿಗೆ ಆಕ್ಸಿಜನ್‌ ಪೂರೈಸಲು ಸಾಧ್ಯ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ‘ವೈದ್ಯಕೀಯ ವಿಪತ್ತು’ ಎದುರಾಗಿ ಕಣ್ಣೆದುರೇ ಆಕ್ಸಿಜನ್‌ ಸಪೋರ್ಟ್‌ನಲ್ಲಿರುವ ಅಮೂಲ್ಯವಾದ ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಜನರ ಜೀವ ಉಳಿಸುವಲ್ಲಿ ನಾವೂ ಅಸಹಾಯಕರಾಗಿದ್ದೇವೆ ಎಂದು ಖಾಸಗಿ ಆಸ್ಪತೆÜ್ರಗಳು ಹಾಗೂ ನರ್ಸಿಂಗ್‌ ಹೋಂಗಳ ಸಂಘವು (ಫಾನಾ) ರಾಜ್ಯ ಸರ್ಕಾರದ ಮುಂದೆ ಅಲವತ್ತುಕೊಂಡಿದೆ.

ಇದೇ ಕಾರಣಕ್ಕಾಗಿ ಆಕ್ಸಿಜನ್‌ ಪೂರೈಕೆದಾರ ಕಂಪೆನಿಗಳ ಮುಂದೆ ಖಾಸಗಿ ಆಸ್ಪತ್ರೆಗಳ ವಾಹನಗಳು ಆಕ್ಸಿಜನ್‌ನ ಖಾಲಿ ಸಿಲಿಂಡರ್‌ಗಳೊಂದಿಗೆ ಸಾಲುಗಟ್ಟಿನಿಲ್ಲುವಂತಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ಗೆ ಪತ್ರ ಬರೆದಿರುವ ಫಾನಾ ಅಧ್ಯಕ್ಷ ಡಾ.ಎಚ್‌.ಎಂ.ಪ್ರಸನ್ನ, ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಖಾಲಿಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರ ಹಾಸಿಗೆ ಭರ್ತಿಯಾಗಿದ್ದು, ಬಹುತೇಕರು ಆಕ್ಸಿಜನ್‌ ಸಪೋರ್ಟ್‌ನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಆಕ್ಸಿಜನ್‌ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ ವಿಪತ್ತು ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶೇ.70ರಷ್ಟುಆಕ್ಸಿಜನ್‌ ಕೊರತೆ:

ಡಾ| ಪ್ರಸನ್ನ ಅವರು ಈ ಬಗ್ಗೆ ಮಾತನಾಡುತ್ತಾ, ಪ್ರಸ್ತುತ ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗಿರುವುದರಿಂದ ನಗರದಲ್ಲೇ ಹೆಚ್ಚು ಆಕ್ಸಿಜನ್‌ ಕೊರತೆ ಉಂಟಾಗಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 200 ಟನ್‌ ಮೆಡಿಕಲ್‌ ಆಕ್ಸಿಜನ್‌ ಅಗತ್ಯವಿತ್ತು. ಆದರೆ, ಕೊರೋನಾ ಕಾರಣದಿಂದಾಗಿ ನಿತ್ಯ 300 ಟನ್‌ ಆಕ್ಸಿಜನ್‌ಗೆ ಬೇಡಿಕೆ ಇದೆ. ಆದರೆ, ಕೇವಲ 100 ಟನ್‌ ಮಾತ್ರ ಪೂರೈಕೆಯಾಗುತ್ತಿದ್ದು, ಶೇ.70ರಷ್ಟುಆಕ್ಸಿಜನ್‌ ಕೊರತೆ ಎದುರಿಸುತ್ತಿದ್ದೇವೆ.

ಬೆಂಗಳೂರಲ್ಲದೆ ಕಲಬುರಗಿ, ಬೆಳಗಾವಿ ಸೇರಿ ಕೆಲವು ನಗರಗಳಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ರಾಜ್ಯಾದ್ಯಂತ ನಿತ್ಯ 1 ಸಾವಿರ ಟನ್‌ ಆಕ್ಸಿಜನ್‌ ಪೂರೈಕೆಯಾಗಬೇಕು. 500 ಟನ್‌ನಷ್ಟೂಪೂರೈಕೆಯಾಗುತ್ತಿಲ್ಲ ಎಂದು ಹೇಳಿದರು.

ಈ ಬಗ್ಗೆ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದು ಈವರೆಗೂ ಉತ್ತರ ಬಂದಿಲ್ಲ. ಹೀಗಾಗಿ ಶನಿವಾರ ಸಂಜೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಕೆಲವು ಆಸ್ಪತ್ರೆಗಳಲ್ಲಿ 6 ರಿಂದ 10 ಗಂಟೆ ಚಿಕಿತ್ಸೆ ನೀಡಲಷ್ಟೇ ಆಕ್ಸಿಜನ್‌ ಸ್ಟಾಕ್‌ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಕೂಡಲೇ ಪೂರೈಕೆಗೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ ಎಂದರು.

ರಾಜ್ಯದಲ್ಲಿ ಲಿಕ್ವಿಡ್‌ ಆಕ್ಸಿಜನ್‌ ಮ್ಯಾನುಫ್ಯಾಕ್ಚರ್‌ ಕಂಪೆನಿಗಳು ಇರುವುದೇ ಎರಡು. ಇವುಗಳಿಂದ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್‌ ಪೂರೈಕೆಯಾಗುತ್ತಿಲ್ಲ ಎಂದು ಪೂರೈಕೆದಾರ ಕಂಪೆನಿಗಳು ತಿಳಿಸುತ್ತಿವೆ. ಕೈಗಾರಿಕಾ ಸಿಲಿಂಡರ್‌ಗಳನ್ನಾದರೂ ಪೂರೈಸಿ ಎಂದು ಬೇಡಿಕೆ ಸಲ್ಲಿಸಿದ್ದೇವೆ. ಎಷ್ಟಾದರೂ ಹಣ ನೀಡುತ್ತೇವೆ ಎನ್ನುತ್ತಿದ್ದರೂ ಆಕ್ಸಿಜನ್‌ ದೊರೆಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕಂಪೆನಿ ಎದುರು ಕ್ಯೂ ನಿಂತ ಆಸ್ಪತ್ರೆಗಳು:

ಆಕ್ಸಿಜನ್‌ ಕೊರತೆ ಹಿನ್ನೆಲೆಯಲ್ಲಿ ಸಿಲಿಂಡರ್‌ಗಳ ಭರ್ತಿಗೆ ಪೀಣ್ಯ ಇಂಡಸ್ಟ್ರಿಯಲ್‌ ಏರಿಯಾದ ಯೂನಿವರ್ಸಲ್‌ ಏರ್‌ ಪ್ರೊಡಕ್ಷನ್‌ ಕಂಪೆನಿ ಬಳಿ ಶನಿವಾರ ಖಾಸಗಿ ಆಸ್ಪತ್ರೆಗಳ ವಾಹನಗಳು ಸಾಲುಗಟ್ಟಿದ್ದವು. ಖಾಲಿ ಸಿಲಿಂಡರ್‌ಗಳೊಂದಿಗೆ ಆಗಮಿಸಿದ್ದ ಸಿಬ್ಬಂದಿ, ‘ನಿತ್ಯ 10 ಸಿಲಿಂಡರ್‌ ಬೇಕಾಗಿತ್ತು. ಇದೀಗ 20 ರಿಂದ 25 ಸಿಲಿಂಡರ್‌ ತರುವಂತೆ ಆಸ್ಪತ್ರೆಗಳು ಹೇಳುತ್ತಿವೆ. ಆದರೆ ಇಲ್ಲಿ ಆಕ್ಸಿಜನ್‌ ಸಿಗುತ್ತಿಲ್ಲ’ ಎಂದು ಸುರೇಶ್‌ ಎಂಬುವವರು ಬೇಸರ ವ್ಯಕ್ತಪಡಿಸಿದರು.

‘ಒಂದು ವಾರದಿಂದ ಆಕ್ಸಿಜನ್‌ಗೆ ಬಹಳ ಬೇಡಿಕೆ ಇದೆ. ಹಗಲು ರಾತ್ರಿ ನಾವು ಪ್ರೊಡಕ್ಷನ್‌ನಲ್ಲಿ ನಿರತರಾಗಿದ್ದೇವೆ. ನಮ್ಮ ಕಂಪೆನಿಯಿಂದ 12 ರಿಂದ 13 ಟನ್‌ ಆಮ್ಲಜನಕ ಮೆಡಿಕಲ್‌ ಫೀಲ್ಡ್‌ಗೆ ಪೂರೈಕೆ ಆಗುತ್ತಿತ್ತು. ಇದೀಗ 30 ರಿಂದ 35 ಟನ್‌ನಷ್ಟುಬೇಡಿಕೆ ಬರುತ್ತಿದೆ. ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕಿದೆ. ಸ್ಟೀಲ… ಫ್ಯಾಕ್ಟರಿಗಳ ಹೆಚ್ಚಿನ ಆ್ಯಕ್ಸಿಜನ್‌ ಸ್ಟಾಕ್‌ ಇದೆ. ನಮಗೆ ಅಲ್ಲಿಂದ ತರಿಸಿಕೊಟ್ಟರೆ ನಾವು ಬೇಡಿಕೆಯಷ್ಟುಪೂರೈಕೆ ಮಾಡಲು ಸಿದ್ಧವಿದ್ದೇವೆ’ ಎನ್ನುತ್ತಾರೆ ಯೂನಿವರ್ಸಲ್‌ ಕಂಪೆನಿ ವ್ಯವಸ್ಥಾಪಕರು.