ಯಾದಗಿರಿ ಜಿಲ್ಲೆಯ ಬುದೂರ್ ಗ್ರಾಮದ ಅಂಗನವಾಡಿಯಲ್ಲಿ ಮಕ್ಕಳನ್ನು ಲಾಕ್ ಮಾಡಿ ಸಹಾಯಕಿ ಜಮೀನಿಗೆ ಹೋದ ಘಟನೆ. ಗ್ರಾಮಸ್ಥರಿಂದ ಆಕ್ರೋಶ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ.
ಯಾದಗಿರಿ (ಆ.2): ಜಿಲ್ಲೆಯ ಗುರುಮಠಕಲ್ ತಾಲೂಕಿನ ಬುದೂರ್ ಗ್ರಾಮದ ಕೇಂದ್ರ-1 ಅಂಗನವಾಡಿಯಲ್ಲಿ ನಿನ್ನೆ (ಜುಲೈ 31, 2025) ನಡೆದ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಅಂಗನವಾಡಿ ಸಹಾಯಕಿ ಸಾವಿತ್ರಮ್ಮ, ಮಕ್ಕಳನ್ನು ಕೇಂದ್ರದೊಳಗೆ ಬೀಗ ಹಾಕಿ ಜಮೀನು ಕೆಲಸಕ್ಕೆ ಹೋಗಿರುವ ಅಮಾನವೀಯ ಕೃತ್ಯವು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ: ಅಂಗನವಾಡಿಯ ಮುಖ್ಯ ಸಹಾಯಕಿ ಮಾಸಿಕ ಸಭೆಗಾಗಿ ಬೇರೊಂದು ಗ್ರಾಮಕ್ಕೆ ತೆರಳಿದ್ದ ವೇಳೆ, ಸಹಾಯಕಿ ಸಾವಿತ್ರಮ್ಮ ಮಕ್ಕಳನ್ನು ಕೊಠಡಿಯಲ್ಲಿ ಲಾಕ್ ಮಾಡಿ ಜಮೀನು ಕೆಲಸಕ್ಕೆ ಹೋಗಿದ್ದಾರೆ. ಲಾಕ್ ಆಗಿರುವ ಕೊಠಡಿಯಲ್ಲಿ ಸಿಲುಕಿದ ಮಕ್ಕಳು ಭಯದಿಂದ ಅಳಲು ಆರಂಭಿಸಿದ್ದಾರೆ. ಮಕ್ಕಳ ಅಳುವಿನ ಶಬ್ದ ಕೇಳಿದ ಸ್ಥಳೀಯರು ಬಂದು ನೋಡಿದರೆ ಅಂಗನವಾಡಿ ಲಾಕ್ ಆಗಿದೆ, ಒಳಗಡೆ ಮಕ್ಕಳಿದ್ದಾರೆ. ತಕ್ಷಣ ಮುಖ್ಯ ಸಹಾಯಕಿಗೆ ವಿಷಯ ತಿಳಿಸಿದ್ದಾರೆ. ಮುಖ್ಯ ಸಹಾಯಕಿ ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆದಿದ್ದಾರೆ.
ಗ್ರಾಮಸ್ಥರು ತಪ್ಪಿತಸ್ಥ ಸಹಾಯಕಿ ಸಾವಿತ್ರಮ್ಮ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಘಟನೆಯಿಂದಾಗಿ ಮಕ್ಕಳ ಸುರಕ್ಷತೆ ಕುರಿತಂತೆ ಗಂಭೀರ ಪ್ರಶ್ನೆಗಳು ಎದ್ದಿವೆ. ಮುಂದಿನ ಕ್ರಮಗಳೇನು? ಸಂಬಂಧಪಟ್ಟ ಇಲಾಖೆಯಿಂದ ಈ ಘಟನೆಗೆ ಸಂಬಂಧ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕು.
