ಲಕ್ಷ್ಮೇಶ್ವರದಲ್ಲಿ, ಮೃತ ಸಹೋದರನ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ಜೀವಂತ ವ್ಯಕ್ತಿಗೆ ಪುರಸಭೆಯು ತಪ್ಪಾಗಿ ಮರಣ ಪ್ರಮಾಣಪತ್ರ ನೀಡಿದೆ. ಎಂಟು ತಿಂಗಳುಗಳಿಂದ ಈ ಪ್ರಮಾದವನ್ನು ಸರಿಪಡಿಸಲು ಅಲೆದಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸದ ಕಾರಣ, ಅವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
\Bಲಕ್ಷ್ಮೇಶ್ವರ (ಡಿ.17): ಮರಣ ಹೊಂದಿದ ತನ್ನ ಸಹೋದರನ ಮರಣ ಪ್ರಮಾಣಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿ ಯಡವಟ್ಟು ಮಾಡಿದ ಘಟನೆ ಲಕ್ಷ್ಮೇಶ್ವರ ಪುರಸಭೆಯಲ್ಲಿ ನಡೆದಿದೆ. ಆದರೆ ನೊಂದ ವ್ಯಕ್ತಿ ಪ್ರಮಾದ ಸರಿಪಡಿಸುವಂತೆ ಕಚೇರಿಗಳಿಗೆ 8 ತಿಂಗಳಿನಿಂದ ಅಲೆದಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ.
ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ
ಪಟ್ಟಣದ ದೇಸಾಯಿ ಬಣ ವ್ಯಾಪ್ತಿಯ ಅಶೋಕ ಮಹಾದೇವಪ್ಪ ಹಂಪಣ್ಣವರ ಎಂಬವರು ಅನಾರೋಗ್ಯದಿಂದ 2024ರ ಆ. 1ರಂದು ಮೃತಪಟ್ಟಿದ್ದರು. ಅವರ ಮರಣ ಪ್ರಮಾಣಪತ್ರ ನೀಡುವಂತೆ ಸಹೋದರ ನಾಗರಾಜ ಮಹಾದೇವಪ್ಪ ಹಂಪಣ್ಣವರ 2024ರ ಆ. 9ರಂದು ಪಟ್ಟಣದ ಪುರಸಭೆಯ ಜನನ ಮತ್ತು ಮರಣ ಅಧಿಕಾರಿಗಳಿಗೆ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರು.
ಆದರೆ ಅಶೋಕನ ಮರಣ ಪ್ರಮಾಣಪತ್ರ ನೀಡುವ ಬದಲು ಅರ್ಜಿ ಸಲ್ಲಿಸಿದ್ದ ಜೀವಂತ ಇದ್ದ ನಾಗರಾಜ ಹಂಪಣ್ಣವರ ಎಂಬವರು ಅನಾರೋಗ್ಯದಿಂದ ಮರಣ ಹೊಂದಿದ್ದಾರೆ ಎಂದು 2025ರ ಮಾ. 11ರಂದು ಪ್ರಮಾಣಪತ್ರ ನೀಡಿ ಯಡವಟ್ಟು ಮಾಡಿದ್ದಾರೆ.
ಮರಣ ಪ್ರಮಾಣಪತ್ರ ರದ್ದು ಪಡಿಸುವಂತೆ ಜೀವಂತ ವ್ಯಕ್ತಿಯೇ ಕಚೇರಿಗೆ ಅಲೆದಾಟ!
ಇಷ್ಟೇ ಅಲ್ಲದೆ ತಾವು ಮಾಡಿದ ಯಡವಟ್ಟುನ್ನು ಮುಚ್ಚಿ ಹಾಕಲು ಅಧಿಕಾರಿಗಳು ಈ ದಾಖಲೆಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಲಕ್ಷ್ಮೇಶ್ವರ ತಹಸೀಲ್ದಾರ್ ಕಚೇರಿಗೆ ಕಳುಹಿಸಿ ಕೊಟ್ಟು ಕೈ ತೊಳೆದುಕೊಂಡಿದ್ದಾರೆ.
ಇತ್ತ ತನ್ನ ಮರಣ ಪ್ರಮಾಣಪತ್ರವನ್ನು ರದ್ದು ಪಡಿಸುವಂತೆ ನಾಗರಾಜ ಹಂಪಣ್ಣವರ ಕಳೆದ 8 ತಿಂಗಳಿಂದ ಪುರಸಭಗೆ ಅಲೆಯುತ್ತಿದ್ದರೂ ಮರಣ ಪ್ರಮಾಣಪತ್ರ ರದ್ದಾಗಿಲ್ಲ. ಜೀವಂತ ಇದ್ದರೂ ತನಗೆ ಮರಣ ಪ್ರಮಾಣಪತ್ರ ನೀಡಿದ್ದರಿಂದ ಅವರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಎಂದು ನಾಗರಾಜ ತಮ್ಮ ಅಳಲು ತೋಡಿಕೊಂಡರು.
ಎಚ್ಚೆತ್ತ ಅಧಿಕಾರಿಗಳು: \Bಕಳೆದ 8 ತಿಂಗಳಿಂದ ಮರಣ ಪ್ರಮಾಣ ಪತ್ರ ರದ್ದು ಪಡಿಸುವಂತೆ ನಾಗರಾಜ ಹಂಪಣ್ಣವರ ಮನವಿ ಸಲ್ಲಿಸಿದ್ದರೂ ಪುರಸಭೆಯ ಜನನ ಮತ್ತು ಮರಣ ನೋಂದಣಿ ಅಧಿಕಾರಿ ಮಂಜುನಾಥ್ ಮುದಗಲ್ಲ ಅತ್ತ ಇತ್ತ ಕಡೆಗೆ ಕೈ ತೋರಿಸಿ ಬಚಾವ್ ಆಗಿದ್ದರು. ಯಾವಾಗ ಪತ್ರಕರ್ತರಿಗೆ ಈ ವಿಷಯ ತಿಳಿದಿದೆ ಎಂದು ಗೊತ್ತಾದ ತಕ್ಷಣ ಅಲರ್ಟ್ ಆಗಿ ಮರಣ ಪ್ರಮಾಣಪತ್ರ ರದ್ದು ಪಡಿಸಲು ಸಂಬಂಧಿಸಿದ ಇಲಾಖೆಯ ಬಾಗಿಲು ಬಡಿಯುತ್ತಿರುವ ವಿಷಯ ತಿಳಿದು ಬಂದಿದೆ.
ಜೀವಂತ ಇದ್ದರೂ ಮರಣ ಪ್ರಮಾಣ ಪತ್ರ ನೀಡಿ ಯಡವಟ್ಟು ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


