ಛತ್ರಪತಿ ಶಿವಾಜಿ ಮಹಾರಾಜರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವ ಪ್ರಯತ್ನಗಳನ್ನು ಖಂಡಿಸಿ, ಸಚಿವ ಶಿವರಾಜ ತಂಗಡಗಿ ಅವರು ಶಿವಾಜಿ ಆಳ್ವಿಕೆಯಲ್ಲಿ ಎಲ್ಲ ಧರ್ಮಗಳಿಗೂ ಸ್ವಾತಂತ್ರ್ಯವಿತ್ತು ಎಂದು ಹೇಳಿದರು. ಮರಾಠ ನಿಗಮದಿಂದ ವಿದೇಶಿ ವ್ಯಾಸಂಗಕ್ಕೆ ನೀಡುವ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದೂ ತಿಳಿಸಿದರು.

ಬೆಂಗಳೂರು (ಫೆ.20): ಛತ್ರಪತಿ ಶಿವಾಜಿ ಮಹಾರಾಜರು ಒಂದು ಧರ್ಮಕ್ಕೆ ಸೀಮಿತವಲ್ಲ. ಅವರ ಹೆಸರನ್ನು ಕೇಸರಿಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌.ತಂಗಡಗಿ ಬೇಸರ ವ್ಯಕ್ತಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಸಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿ, ಶಿವಾಜಿ ಮಹಾರಾಜರ ಆಡಳಿತ ಅವಧಿಯಲ್ಲಿ ಎಲ್ಲಾ ಧರ್ಮದವರಿಗೂ ಧಾರ್ಮಿಕ ಸ್ವಾತಂತ್ರ್ಯ ಇತ್ತು. ಸರ್ವ-ಧರ್ಮ ಸಹಿಷ್ಣುತೆಗೆ ಶಿವಾಜಿಯ ಆಡಳಿತ ಮಾದರಿಯಾಗಿತ್ತು. ಇಂದು ಅವರ ಹೆಸರನ್ನು ಕೇಸರಿಕರಣಗೊಳಿಸುತ್ತಿರುವುದು ಸರಿಯಲ್ಲ. ಹೀಗಾಗಿ ಪ್ರತಿಯೊಬ್ಬರು ಶಿವಾಜಿ ಅವರ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.

ಇದನ್ನೂ ಓದಿ: ಕನ್ನಡಿಗ ರಿಷಭ್ ಶೆಟ್ಟಿಯೇ ಛತ್ರಪತಿ ಶಿವಾಜಿ ಪಾತ್ರಕ್ಕೆ ಸೂಕ್ತ: ವಸ್ತ್ರ ವಿನ್ಯಾಸಕ ಆಶ್ಲೇ ರೆಬೆಲ್ಲೊ

ಮರಾಠ ನಿಗಮದಿಂದ ಬಡವರ ಮಕ್ಕಳು ವಿದೇಶಿ ವ್ಯಾಸಂಗ ಮಾಡಲು ನೀಡಲಾಗುತ್ತಿದ್ದ ಮೊತ್ತವನ್ನು ₹25 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಮರಾಠ ಅಭಿವೃದ್ಧಿ ನಿಗಮಕ್ಕೆ ₹185 ಕೋಟಿ ಅನುದಾ‌ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವುದು ಶ್ಲಾಘನೀಯ ಎಂದರು.

ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಶಾಸಕ ಉದಯ್ ಬಿ.ಗರುಡಾಚಾರ್, ವಿಧಾನಪರಿಷತ್ ಸದಸ್ಯ ಮಾರುತಿರಾವ್ ಮುಳೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯಾಧ್ಯಕ್ಷ ಎಸ್.ಸುರೇಶ್ ರಾವ್ ಸಾಠೆ, ಸಾಹಿತಿ ಜಗನ್ನಾಥರಾವ್ ಬಹುಳೆ, ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಇದ್ದರು.