ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಭದ್ರತಾ ಸಿಬ್ಬಂದಿ ತಡೆದ ಪ್ರಕರಣದಲ್ಲಿ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಿಸಿಟಿವಿ ಪರಿಶೀಲನೆ ನಂತರ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಪೇಜಾವರ ಶ್ರೀಗಳು ಈ ಘಟನೆಯನ್ನು ಖಂಡಿಸಿ, ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಶಿವಮೊಗ್ಗ (ಏ.19): ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ ನಡೆದ ಜನಿವಾರ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಜನಿವಾರ ಪ್ರಕರಣದ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ವಿಚಾರಣೆ ಹಾಗೂ ಸಿಸಿ ಟಿವಿ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಳಿಸಲಾಗಿದೆ. ಸಿಸಿ ಟಿವಿ ವಿಡಿಯೋದಲ್ಲಿ ಒಬ್ಬ ವಿದ್ಯಾರ್ಥಿ ಬರುತ್ತಾರೆ, ಇಬ್ಬರು ಸೆಕ್ಯೂರಿಟಿಗಳಿಗೆ ಆ ವಿದ್ಯಾರ್ಥಿಯೇ ಜನಿವಾರ ತೆಗೆದು ತೋರಿಸುತ್ತಾರೆ. ಇದಕ್ಕೆ ಅನುಮತಿ ಇದೆಯೇ ಎಂದಾಗ, ಆಗ ಸೆಕ್ಯೂರಿಟಿರವರು ಇಲ್ಲ ಎನ್ನುತ್ತಾರೆ. ಆ ವಿದ್ಯಾರ್ಥಿಯೇ ಪಕ್ಕಕ್ಕೆ ಹೋಗಿ ಜನಿವಾರ ತೆಗೆದುಕೊಂಡು ಬರುತ್ತಾರೆ. 

ಇನ್ನೂರ್ವ ವಿದ್ಯಾರ್ಥಿ ಬಂದಾಗ ಸೆಕ್ಯೂರಿಟಿರವರು ಜನಿವಾರ ಹಾಕಿಕೊಂಡು ಪರೀಕ್ಷಾ ಕೊಠಡಿಗೆ ಅವಕಾಶ ಇಲ್ಲ ಎಂದಾಗ, ವಿದ್ಯಾರ್ಥಿ ಇಲ್ಲ ನಾನು ಜನಿವಾರ ತೆಗೆಯುವುದಿಲ್ಲ ಎಂದು ಪರೀಕ್ಷಾರ್ಥಿಯನ್ನು ಸೆಕ್ಯೂರಿಟಿರವರು ಪರೀಕ್ಷಾ ಕೇಂದ್ರದ ಒಳಗೆ ಬಿಡದೆ ಅಲ್ಲೆ ಕೂರಿಸುತ್ತಾರೆ. ಆಗ ಕಾಲೇಜಿನ ಪ್ರಾಂಶುಪಾಲರು ಅಲ್ಲಿ ಬಂದು ವಿದ್ಯಾರ್ಥಿ ಕುಳಿತು ಕೊಂಡಿರುವ ಕುರಿತು ವಿಚಾರಿಸಿದಾಗ ಜನಿವಾರದ ವಿಚಾರವನ್ನು ಸೆಕ್ಯೂರಿಟಿರವರು ಹೇಳಿದಾಗ ಸಂಪ್ರದಾಯಕ್ಕೆ ಅಡ್ಡಿ ಪಡಿಸುವ ಯಾವುದೇ ಕ್ರಮ ಇಲ್ಲ. ವಿದ್ಯಾರ್ಥಿ ಹೋಗಿ ಪರೀಕ್ಷೆ ಬರೆಯಬಹುದು ಎಂದು ಹೇಳಿ ವಿದ್ಯಾರ್ಥಿಯನ್ನು‌ ಪರೀಕ್ಷೆ ಬರೆಯಲು ಒಳಗೆ ಕಳುಹಿಸಿಕೊಟ್ಟಿರುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ್ದು ಒಪ್ಪುವಂತದ್ದಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಇಲ್ಲಿ ಪರೀಕ್ಷೆ ಬರೆಯಲು ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದಿಲ್ಲ. ಸರಿಯಾದ ಸಮಯಕ್ಕೆ ಹೋಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಇಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆಯಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದ್ದರಿಂದ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಆಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಅಲ್ಲದೆ, ಮುಂದಿನ ಹಂತದ ತನಿಖೆಗೆ ಆದೇಶ ಮಾಡಲಾಗಿದೆ.

ಆದೇಶ ಹೊರಡಿಸಿದವರು ಸೇಫ್: 

ರಾಜ್ಯದಲ್ಲಿ ಅತ್ಯಂತ ವಿವಾದಕ್ಕೆ ಕಾರಣವಾಗಿರುವ ಜನಿವಾರ ಪ್ರಕರಣದ ಬಗ್ಗೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ವಿಪಕ್ಷಗಳು ಹಾಗೂ ಹಿಂದೂ ಸಂಘಟನೆಗಳಿಂದ ತೀವ್ರ ಹೋರಾಟ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ಇದರಿಂದಾಗಿ ರಾಜ್ಯ ಸರ್ಕಾರವು ಶಿವಮೊಗ್ಗದಲ್ಲಿ ಈ ಘಟನೆಗೆ ಕಾರಣವಾದವರ ಮೇಲೆ ಕ್ರಮ ಜರುಗಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯನ್ನು ಪರೀಕ್ಷೆ ಮಾಡಿದ ಇಬ್ಬರು ಹೋಮ್‌ ಗಾರ್ಡ್ಸ್‌ಗಳನ್ನು ಅಮಾನತು ಮಾಡಿದ್ದಾರೆ. ಆದರೆ, ರಾಜ್ಯಾದ್ಯಂತ ಮೈಮೇಲೆ ಒಂದು ದಾರವನ್ನೂ ಬಿಡದಂತೆ ಬಿಚ್ಚಿಸುವಂತೆ ಆದೇಶ ಹೊರಡಿಸಿದ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಪ್ರತಿನಿಧಿಯಾದ ಸಚಿವರು ಮಾತ್ರ ಸೇಫ್ ಆಗಿದ್ದಾರೆ.

ನಿರ್ದಿಷ್ಟ ಸಮಾಜಕ್ಕೆ ಅವಮಾನಿಸಲು ಜನಿವಾರ ತೆಗೆಸಿದ್ದಾರೆ: 

ಚಿಕ್ಕಮಗಳೂರು: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರದ ಬಗ್ಗೆ ಪೇಜಾವರ ಶ್ರೀಗಳು ಕಿಡಿಕಾರಿದ್ದಾರೆ. ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿಗೆ ಜನಿವಾರ ತೆಗೆಸಿದ್ದಾರೆ ಎಂಬ ವಿಷಯ ತಿಳಿದು ಮನಸ್ಸಿಗೆ ತುಂಬಾ ಖೇದ ಆಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಸೇರಿದ ಅಂಶವಾದ್ರೆ ಎಲ್ಲಾ ಕಡೆ ಇರಬೇಕಿತ್ತು. ಈ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಸಮಾಜವನ್ನ ಅವಮಾನಿಸಬೇಕು ಎಂದು ಮಾಡಿದ್ದಾಗಿದೆ. ಇಂತಹ ಕೃತ್ಯದಿಂದ ಸಮಾಜದಲ್ಲಿ ಕ್ಷೋಭೆ ಉಂಟಾಗುತ್ತದೆ. ಇದನ್ನು ಯಾರೂ ಮಾಡಬಾರದು, ನಾವು ಕಠಿಣವಾಗಿ ಖಂಡಿಸುತ್ತೇವೆ. ಮುಂದೆ ಇಂತಹ ಕೆಲಸ ಎಲ್ಲಿಯೂ ಆಗದಂತೆ ಸರ್ಕಾರ ಎಚ್ಚರ ವಹಿಸಬೇಕು. ಇಲ್ಲಸಲ್ಲದ ನಿಯಮ ತರುವ ಅಧಿಕಾರಿಗಳಿಗೆ ಕಟುವಾದ ಎಚ್ಚರಿಕೆ ನೀಡಬೇಕು. ಅಧಿಕಾರಿ ಮಾಡಿದ ತಪ್ಪಿಗೆ ಶಿಕ್ಷೆ ನೀಡಿದರೆ, ಮುಂದೆ ಇಂತಹ ಘಟನೆ ನಡೆಯುವುದಿಲ್ಲ. ಈ ಘಟನೆಯನ್ನ ಕಠೋರವಾಗಿ ಖಂಡಿಸುತ್ತೇವೆ. ಸರ್ಕಾರ ತಕ್ಷಣ ತೀವ್ರ ಕ್ರಮಕೈಗೊಳ್ಳಬೇಕು ಎಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಶಾಕಲ ಋಕ್ ಸಂಹಿತಾ ಯಾಗದಲ್ಲಿ ಪಾಲ್ಗೊಂಡ ಪೇಜಾವರ ಶ್ರೀಗಳು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: CET: ಜನಿವಾರ ತೆಗೆಸಿದ ಪ್ರಕರಣ: FIR ದಾಖಲು, ಹೋಮ್ ಗಾರ್ಡ್ ತಲೆದಂಡ?

ಏನಿದು ಪ್ರಕರಣ: 
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯ ವೇಳೆ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೂ ಬಟ್ಟೆ, ಪೆನ್ನು ಹೊರತುಪಡಿಸಿ ಬೇರಾವ ವಸ್ತುಗಳನ್ನು ಕೂಡ ತೆಗೆದುಕೊಂಡು ಹೋದಂತೆ ಹಾಗೂ ಮೈಮೇಲೆ ಧರಿಸಿಕೊಂಡು ಹೋಗದಂತೆ ನಿರ್ಬಂಧಿಸಲಾಗಿದೆ. ಈ ವೇಳೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯೊಬ್ಬ ಶಿವಮೊಗ್ಗದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದ್ದ ಗಣಿತ ವಿಷಯದ ಪರೀಕ್ಷೆಗೆ ಹಾಜರಾಗುವ ವೇಳೆ ಜನಿವಾರ ತೆಗೆಯುವಂತೆ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ತಾನು ಜನಿವಾರ ತೆಗೆಯುವುದಾದರೆ ಪರೀಕ್ಷೆಯನ್ನೇ ಬರೆಯುವುದಿಲ್ಲ ಎಂದು ಹೇಳಿದ್ದಾನೆ. ಇದು ಮಾಧ್ಯಮಗಳ ಗಮನಕ್ಕೂ ಬಂದಿದ್ದು, ಈ ವಿಚಾರ ರಾಜ್ಯಾದ್ಯಂತ ಸರ್ಕಾರ ವರ್ಸಸ್ ಹಿಂದೂ ಅಥವಾ ಬ್ರಾಹ್ಮಣ ಸಮುದಾಯ ಎಂಬಂತೆ ಚರ್ಚೆಗೆ ಗ್ರಾಸವಾಗುತ್ತಿದೆ. ಇನ್ನು ರಾಜಕೀಯ ಕೆಸರೆರಚಾಟಕ್ಕೂ ಜನಿವಾರ ಪ್ರಕರಣ ಅಸ್ತ್ರವಾಗಿದೆ.