Asianet Suvarna News Asianet Suvarna News

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಖ್ಯಾತ ಗಮಕ ಕಲಾವಿದ ಕೇಶವಮೂರ್ತಿ ಬಗ್ಗೆ ನಿಮಗೆಷ್ಟು ಗೊತ್ತು?

* ಪದ್ಮಶ್ರೀ ಪ್ರಶಸ್ತಿ ಮತ್ತೋರ್ವ ಕನ್ನಡಿ
* ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಖ್ಯಾತ ಗಮಕ ಕಲಾವಿದ ಕೇಶವಮೂರ್ತಿ
* ಇವರ ಸಾಧನೆಗೆ  ಒಲಿದು ಬಂದ ಪದ್ಮಶ್ರೀ ಪ್ರಶಸ್ತಿ

Shivamogga gamble artist keshava murthy honored with padma shri award rbj
Author
Bengaluru, First Published Jan 25, 2022, 11:45 PM IST

ಶಿವಮೊಗ್ಗ, (ಜ.25): ಖ್ಯಾತ ಗಮಕ ಕಲಾವಿದರಾದ ಹೊಸಳ್ಳಿ ಹೆಚ್. ಆರ್. ಕೇಶವಮೂರ್ತಿಯವರು ಭಾರತ ಸರ್ಕಾರ ಕೊಡಮಾಡುವ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ಹಲವಾರು ದಶಕಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುವ ಇವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಬರಡು ಭೂಮಿಯಲ್ಲಿ ಸುರಂಗ ತೋಡಿ ನೀರು ಹರಿಸಿದ್ದೇಗೆ? ಮಹಾಲಿಂಗ ನಾಯ್ಕರ ಸಾಧನೆ ಬಗ್ಗೆ ತಿಳಿಯಿರಿ

ಜನನ: ಶಿವಮೊಗ್ಗ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ 22 ಫೆಬ್ರವರಿ 1934ರಂದು ಜನಿಸಿದ ಕೇಶವಮೂರ್ತಿ ಅವರದ್ದು ಕೃಷಿಕ ಮನೆತನ. ತಂದೆ ರಾಮಸ್ವಾಾಮಿ ಶಾಸ್ತ್ರಿಗಳು ಸಂಸ್ಕೃತ ವಿದ್ವಾಂಸರು, ಜೊತೆಗೆ ಗಾಯಕರು. ತಾಯಿ ಲಕ್ಷ್ಮೀದೇವಮ್ಮ, ಇವರ ಸೋದರ  ರಾಮಾಶಾಸ್ತ್ರಿಗಳು ಗಮಕ ಹಾಗೂ ಸಂಗೀತ ವಿದ್ವಾಂಸರು. ಇದೇ ಇವರಿಗೆ ಪ್ರೇರಣೆ.

ಶಿಕ್ಷಣ : 
ಮೊದಲಿಗೆ ತಂದೆ ರಾಮಸ್ವಾಾಮಿ ಶಾಸ್ತ್ರಿ ಹಾಗೂ ಟಿ. ರಾಮಾಶಾಸ್ತ್ರಿಗಳ ಮಾರ್ಗದರ್ಶನ, ತಂದೆಯವರು ವಾಚಿಸುತ್ತಿದ್ದ ಸಂಸ್ಕೃತ ಕಾವ್ಯಗಳೇ ಇವರ ವಾಚನ ಕಲೆಯನ್ನು ರೂಢಿಸಿಕೊಳ್ಳಲು ಸ್ಫೂರ್ತಿಯಾಯಿತು. ಅನಂತರ ಹಿರಿಯ ಗಮಕಿಗಳು, ರಂಗಭೂಮಿ ಕಲಾವಿದರೂ ಆಗಿದ್ದ ಕೆ.ಎಸ್. ವೆಂಕಟೇಶಯ್ಯನವರ ಬಳಿ ಕ್ರಮವಾದ ಗಮಕ ವಾಚನ ಶಿಕ್ಷಣ ಪಡೆದು, ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಸಾಮಾನ್ಯ ವಿದ್ಯಾಭ್ಯಾಾಸ ಇಂಟರ್ ಮೀಡಿಯಟ್ ತೇರ್ಗಡೆ ಮಾಡಿದ್ದಾರೆ.

ಸಾಧನೆ :  
ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ. ಹಿರಿಯ ವ್ಯಾಖ್ಯಾನಕಾರರಾಗಿದ್ದ ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರಿಯವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು,  ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರ ಬಂದಿದೆ. ಹೆಗ್ಗೋಡು, ಮತ್ತೂರು, ಶಿವಮೊಗ್ಗ, ಮೈಸೂರು, ಬೆಂಗಳೂರು, ಗದಗ ಹಾಗೂ ಹೊರ ರಾಜ್ಯಗಳಲ್ಲೂ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಗಮಕ ತರಗತಿಗಳನ್ನು ನಡೆಸಿ, ಮತ್ತೂರು ಶಿವಮೊಗ್ಗ ಮುಂತಾದೆಡೆ ನೂರಾರು ವಿದ್ಯಾರ್ಥಿಗಳಿಗೆ ಗಮಕ ಶಿಕ್ಷಣ ನೀಡಿದ ಹಿರಿಮೆ ಕೇಶವಮೂರ್ತಿ ಅವರದ್ದು. ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಜೋಡಿ ಜಗತ್ಪ್ರಸಿದ್ಧವಾಗಿದೆ.  ಇವರಿಬ್ಬರ ವಾಚನ ವ್ಯಾಖ್ಯಾನದಲ್ಲಿ ಕುಮಾರವ್ಯಾಸ ಭಾರತದ 200 ಕ್ಯಾಸೆಟ್ಟುಗಳು ಬಿಡುಗಡೆಯಾಗಿವೆ.

ಪ್ರಶಸ್ತಿ - ಪುರಸ್ಕಾಾರಗಳು : 
ಗಮಕ ಕಲೆಗಾಗಿಯೇ ಇರುವ  ಕುಮಾರವ್ಯಾಸ ಪ್ರಶಸ್ತಿಯನ್ನು ಮೊದಲನೆಯವರಾಗಿ ಪಡೆದವರು ಕೇಶವಮೂರ್ತಿಗಳು.
ನ್ಯಾಯಧೀಶ ಸಾಹಿತಿ ಕೊ. ಚನ್ನಬಸಪ್ಪನವರಿಂದ ’ಗಮಕ ಕೋಕಿಲ’ ಹೊಸಹಳ್ಳಿ ಗಮಕ ಕಲಾಪರಿಷತ್ತಿನಿಂದ ’ಗಮಕ ಗಂಧರ್ವ’, ಶಿವಮೊಗ್ಗ ರಸಿಕ ಶ್ರೋತೃಗಳಿಂದ ’ಗಮಕ ಗಾನವಾರಿಧಿ’, ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸಿದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸನ್ಮಾನ, ಬೆಂಗಳೂರಿನ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಗಮಕ ಸಿಂಧು’ ಮೊದಲಾದ ಬಿರುದು ಗಳಿಸಿರುವ ಕೇಶವಮೂರ್ತಿಯವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ 1994-95 ನೇ ಸಾಲಿನ ’ಕರ್ನಾಟಕ ಕಲಾತಿಲಕ’ ಬಿರುದನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರ ’ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ.

ಕೇಶವ ಮೂರ್ತಿ ಅವರಿಗೆ 70 ವರ್ಷ ತುಂಬಿದ ಸವಿನೆನಪಿಗಾಗಿ ಹೊಸಹಳ್ಳಿ ಗಮಕ ಪರಿಷತ್ತು ’ಗಮಕ ಗಂಧರ್ವ’ ಎಂಬ ಅಭಿನಂದನಾ ಗ್ರಂಥವನ್ನು ಹೊರತಂದು ಇವರಿಗೆ ಅರ್ಪಿಸಿತು. ಶಿವಮೊಗ್ಗ ಜಿಲ್ಲಾ ಗಮಕ ಪರಿಷತ್ತಿನ ಜಿಲ್ಲಾ ಮಟ್ಟದ ಸಮ್ಮೇಳನದ ಅಧ್ಯಕ್ಷರಾಗಿ ಸನ್ಮಾನಿಸಲ್ಪಟ್ಟಿದ್ದಾರೆ. ಕರ್ನಾಟಕ ಗಾನ ಕಲಾ ಪರಿಷತ್ತಿನ  37ನೇ ಸಮ್ಮೇಳನದ ವಿದ್ವತ್ ಸದಸ್ಸಿನಲ್ಲಿ ಸನ್ಮಾಾನಿಸಲ್ಪಟ್ಟಿದ್ದಾರೆ.
ಕೇಶವಮೂರ್ತಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿವುದಕ್ಕೆ ಜಿಲ್ಲೆಯ ಅವರ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

*ಹೀಗೂ ವ್ಯಾಖ್ಯಾನಿಸಬಹುದು ಎಂದು ನಿರೂಪಿಸಿದ ಕಲಾವಿದ:
ಹೊಸಳ್ಳಿ ಕೇಶವಮೂರ್ತಿ ಎಂದೊಡನೆ ನಮಗೆ ನೆನಪಿಗೆ ಬರುವುದು ಮತ್ತೂರು ಕೃಷ್ಣಮೂರ್ತಿ ಜೊತೆಗೂಡಿ ಖಾಸಗಿ ವಾಹಿನಿಯೊಂದರಲ್ಲಿ ನಿತ್ಯ ಬೆಳಗ್ಗೆ ಗಮಕ ವಾಚನದ ದೃಶ್ಯಗಳು. ಕಣ್ಣಲ್ಲಿ ನೀರು ತರಿಸುವ, ರೋಷಾಗ್ನಿ ಹುಟ್ಟಿಸುವ, ತಾವೇ ಘಟನೆಯ ಒಂದು ಭಾಗವಾಗಿರುವಂತೆ ಸಂದರ್ಭವನ್ನು ವ್ಯಾಖ್ಯಾನಿಸುವ ಮತ್ತೂರು ಕೃಷ್ಣಮೂರ್ತಿ ಜೊತೆಗೆ ಗಮಕ ವಾಚನ ಮಾಡುತ್ತಿದ್ದ ಕೇಶವಮೂರ್ತಿಗಳು..

ಇದು ಕನ್ನಡ ನಾಡಿನ ಬಹುತೇಕರ ಮನಸ್ಸಿನಲ್ಲಿರುವ ದೃಶ್ಯಗಳು. ಗಮಕಕ್ಕೆ ತಮ್ಮದೇ ರೀತಿಯಲ್ಲಿ ನ್ಯಾಯ ಒದಗಿಸಿದ ಕೇಶವಮೂರ್ತಿಗಳು ಗಮಕವನ್ನು ರಾಜ್ಯದಲ್ಲಿ ಪ್ರಚುರಪಡಿಸುವ ವ್ಯವಸ್ಥೆಯನ್ನು ಉತ್ತುಂಗ ಸ್ಥಿತಿಗೆ ಕರೆದೊಯ್ದವರು.

ಯಾವುದೇ ಪ್ರಸಂಗವಿರಲಿ, ಅದರ ಗಮಕ ವ್ಯಾಖ್ಯಾನ ಮಾಡಲಾರಂಭಿಸಿದರೆ ಆ ಕತೆಗೆ ವಿಶೇಷ ಆಯಾಮ ದೊರಕುತ್ತಿತ್ತು. ಸಾಮಾನ್ಯ ಕತೆಯೂ ಅಸಾಮಾನ್ಯವಾಗಿ ಕೇಳುಗರ ಮನಸ್ಸನ್ನು ಹೊಕ್ಕುತ್ತಿತ್ತು. ಶ್ರೋತೃಗಳು ಭಾವುಕರಾಗಿ ಆ ಕತೆಯ ಒಂದು ಭಾಗವಾಗಿ ಮಾರ್ಪಾಡುತ್ತಿದ್ದರು. ತಾವೇ ಕತೆಯ ಪಾತ್ರದಾರಿ ಎಂಬಂತೆ ಜನರು ಮರುಳಾಗುತ್ತಿದ್ದರು. ಆ ಗಮಕ ವ್ಯಾಖ್ಯಾತನಕ್ಕೆ ತಲೆದೂಗುತ್ತಾಾ ಪಾತ್ರದಾರಿಯಾಗುತ್ತಿದ್ದರು.

ಹೀಗೆ ಗಮಕವನ್ನು ಸಾಮಾನ್ಯರ ಮಟ್ಟಕ್ಕೆ ತಂದವರು ಕೇಶವಮೂರ್ತಿಗಳು. ಗಮಕ ವ್ಯಾಖ್ಯಾನವನ್ನೂ ಹೀಗೂ ಮಾಡಬಹುದು ಎಂದು ತೋರಿಸಿದವರು. ಗಮಕ ಕಲೆಯಲ್ಲಿ ಮೇರು ಪ್ರವೃತ್ತಿಯನ್ನು ತೋರಿದ ಮತ್ತೂರು ಕೃಷ್ಣಮೂರ್ತಿಗಳಿಗೆ ಸರಿಸಾಟಿಯಾಗಿ ವಾಹಿನಿಗಳಲ್ಲಿ ಮಿಂಚಿದವರು. ತಮ್ಮದೇ ಆದ ವೀಕ್ಷಕ ಬಳಗವನ್ನು ಸೃಷ್ಟಿಸಿಕೊಂಡವರು.

Follow Us:
Download App:
  • android
  • ios