Asianet Suvarna News Asianet Suvarna News

APJ Abdul Kalam's Birth Anniversary: ಎಲ್ಲರೆದೆಯನ್ನೂ ಬೆಳಗುತ್ತಿರಲಿ ಕಲಾಂ ಎಂಬ ಬೆಳಕು: ಬಿ.ವೈ.ರಾಘವೇಂದ್ರ

ಜ್ಞಾನ, ಮಾನವೀಯತೆ, ಸರಳತೆ ಮತ್ತು ಸಮಾಜ ಸೇವೆ ಈ ನಾಲ್ಕು ಆದರ್ಶಗಳ ಸಾರ್ಥಕ ಬದುಕು ಬದುಕಿದವರು, ಕಲಾಂ. ಇವತ್ತು ಅವರ ಜನ್ಮದಿನ. ಪ್ರತಿ ವರ್ಷವೂ ಈ ದಿನ ನನ್ನ ಪಾಲಿಗೆ ಅವರ ನೆನಪು, ಕೆಲಸ ಹಾಗೂ ಆಲೋಚನೆಗಳಿಂದ ನನ್ನನ್ನು ನಾನು ಪ್ರೇರೇಪಿಸಿಕೊಳ್ಳುವ ಆತ್ಮಾವಲೋಕನದ ದಿನ. ಎಲ್ಲರೆದೆಯನ್ನೂ ಅವರು ಸದಾ ಬೆಳಗುತ್ತಿರಲಿ ಅನ್ನುವುದೇ ನನ್ನ ಆಶಯ: ಬಿ.ವೈ.ರಾಘವೇಂದ್ರ, ಬಿಜೆಪಿ ಸಂಸದ

Shivamogga BJP MP BY Raghavendra talks Over APJ Abdul Kalam grg
Author
First Published Oct 15, 2023, 11:57 AM IST

ಕಲಾಂ ಅವರು ನಮ್ಮನ್ನು ಬಿಟ್ಟು ಹೋದಾಗ ಅವರ ಕಬೋರ್ಡಿನಲ್ಲಿ ಸಿಕ್ಕಿದ್ದು ಕೇವಲ ಮೂರು ಪ್ಯಾಂಟು, ಮೂರು ಶರ್ಟು, ಮೂರು ಸೂಟುಗಳು, ಅಷ್ಟೇ! ಉಳಿದಂತೆ ಅಲ್ಲಿದ್ದಿದ್ದು, ಸುಮಾರು ಎರಡೂವರೆ ಸಾವಿರ ಅಮೂಲ್ಯ ಪುಸ್ತಕಗಳು, 1 ಪದ್ಮಶ್ರೀ, 1 ಪದ್ಮಭೂಷಣ 1 ಭಾರತ ರತ್ನ ಮತ್ತು 50 ಡಾಕ್ಟರೇಟ್‌ ಪದವಿಗಳು!

ದೇಶದ ಪಾಲಿಗದು ಮಹಾನ್‌ ನಿರ್ಗಮನ.

ಅವತ್ತು 2015 ಜುಲೈ 27, ಮೇಘಾಲಯದ ಶಿಲ್ಲಾಂಗ್‌ನಿಂದ ಮಿಂಚಿನಂತೆ ಹರಿದ ಸುದ್ದಿ ಇಡೀ ದೇಶಕ್ಕೆ ಆಘಾತಕಾರಿಯಾದಂಥದ್ದು. ಭಾರತದ ಮಿಸೈಲ್‌ ಮ್ಯಾನ್‌, ೧೧ನೇ ರಾಷ್ಟ್ರಪತಿ, ʻಜನರ ರಾಷ್ಟ್ರಪತಿʼ, ಅತ್ಯಂತ ಸರಳಾತಿ ಸರಳ ವ್ಯಕ್ತಿತ್ವದ ಎಪಿಜೆ ಅಬ್ದುಲ್‌ ಕಲಾಂ ಇನ್ನಿಲ್ಲ ಎಂಬ ಸುದ್ದಿ.

ಉಡುಗೊರೆಯಾಗಿ ಸಿಕ್ಕ ವಸ್ತುವಿಗೂ ಚೆಕ್‌ ಮೂಲಕ ಹಣ ಕಳುಹಿಸಿ ಕೊಟ್ಟಿದ್ದರು ಕಲಾಂ!

ಇಡೀ ರಾಷ್ಟ್ರ ಮುಮ್ಮಲ ಮರುಗಿತು ಅಂತ ಹೇಳುವುದು, ಇಡೀ ದೇಶ ಕಂಬನಿ ಮಿಡಿಯಿತು ಅನ್ನುವುದೆಲ್ಲಾ ಅತಿಶಯೋಕ್ತಿಯಾಗಿ ಬಿಡುತ್ತದೆ. ಯಾಕೆಂದರೆ, ಆಪ್ತೇಷ್ಟರಲ್ಲದೆ ಬೇರೆ ಯಾರ ಸಾವೂ ನಮ್ಮೆದೆಯನ್ನು ತಟ್ಟದಂಥ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೂ, ಕಲಾಂ ಅವರ ಸಾವಿನ ಸುದ್ದಿ ಕೇಳಿದ ತಕ್ಷಣ ಈ ದೇಶದ ಪ್ರತಿಯೊಂದು ಮನಸ್ಸೂ, ʻಛೇ.. ಹೋಗಿಬಿಟ್ಟರಾ?ʼ ಅಂತ ಕ್ಷಣಕಾಲವಾದರೂ ಅವಾಕ್ಕಾಗಿ, ಕ್ಷಣಕಾಲವಾದರೂ ಆಘಾತ ಅನುಭವಿಸಿದ್ದು ಸುಳ್ಳಲ್ಲ. ಅವರ ನಿರ್ಗಮನದಿಂದ ನಮ್ಮ ಸ್ಫೂರ್ತಿಯ ಕಾರಂಜಿ ಥಟ್ಟನೆ ಬತ್ತಿಹೋಯಿತೇನೋ ಅನ್ನುವ ಭಾವ ಆವರಿಸಿಕೊಂಡಿದ್ದು ಸುಳ್ಳಲ್ಲ.

ಕಲಾಂ ಅವರು ವಿದ್ವಾಂಸ, ವಿಜ್ಞಾನಿ, ʻಮಿಸೈಲ್‌ ಮ್ಯಾನ್‌ʼ, ಸಾಹಿತಿ, ಚಿಂತಕ, ರಾಜಕಾರಣಿ ಹೀಗೆ ಏನೇನೆಲ್ಲಾ ಆಗಿದ್ದರೋ ಅವೆಲ್ಲವನ್ನೂ ಮೀರಿ – ಅಥವಾ ಅವೆಲ್ಲವೂ ಸೇರಿಕೊಂಡು – ಅವರೊಬ್ಬ ಅದ್ವಿತೀಯ ಸ್ಫೂರ್ತಿಯ ಸೆಲೆಯಾಗಿದ್ದರು. ಎಲ್ಲ ಮನಸ್ಸುಗಳನ್ನೂ ಸೆಳೆಯಬಲ್ಲ, ಪ್ರಭಾವಿಸಬಲ್ಲ ಅಯಸ್ಕಾಂತೀಯ ಶಕ್ತಿಯಾಗಿದ್ದರು. ವಿಶೇಷ ವೆಂದರೆ, ಅವರ ಈ ಅಯಸ್ಕಾಂತೀಯ ಗುಣಕ್ಕಿದ್ದಿದ್ದು ಒಂದೇ ಧ್ರುವ: ಅದು ಪಾಸಿಟಿವ್‌ ಧ್ರುವ! ನಕಾರಾತ್ಮಕ ನಡೆಗಳು ಬಿಡಿ, ಯೋಚನೆಗಳೂ ಅವರ ಹತ್ತಿರ ಸುಳಿಯುವಂತಿರಲಿಲ್ಲ.

ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದ ವ್ಯಕ್ತಿ

ಅವರು ರಾಷ್ಟ್ರಪತಿಯಾಗಿದ್ದಾಗ ನನಗೆ ಅವರ ಜೊತೆ ಒಡನಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಸಂಸದನಾಗುವ ಮುಂಚಿನಿಂದಲೂ ಅವರ ಸ್ಫೂರ್ತಿಯ ಪ್ರಭಾವಲಯದಲ್ಲಿ ಸ್ವಇಚ್ಛೆಯಿಂದ ಸಿಲುಕಿಕೊಂಡಿದ್ದ ನಾನು, ಸಂಸದನಾದ ಮೇಲೆ ದೆಹಲಿಯಲ್ಲಿ ಮತ್ತಿತರ ಕಡೆಗಳಲ್ಲಿ ಅವರನ್ನು ಭೇಟಿಯಾಗಿ ಅವರೊಂದಿಗೆ ವಿಚಾರಗಳನ್ನು ಹಂಚಿಕೊಂಡಿದ್ದೆ. ಅಲ್ಲಿ ನಾನು ಕಂಡ ಒಂದು ಬೆರಗಿನ ವಿಷಯವೇನೆಂದರೆ, ದೆಹಲಿಯ ಅಧಿಕಾರ ಕೇಂದ್ರದ ಪ್ರತಿಯೊಂದು ಕಾರಿಡಾರಿನಲ್ಲೂ ಅವರ ಬಗ್ಗೆ ಅದಮ್ಯ ಮೆಚ್ಚುಗೆ ಹಾಗೂ ಅಪಾರ ಆದರ ಇದ್ದಿದ್ದು. ಸಾಮಾನ್ಯವಾಗಿ ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ಅವರ ಅಧಿಕಾರಾನಂತರ ಏಕಸ್ವರೂಪವಾದ ಆರಾಧನಾಭಾವ ಇರುವುದು ಅಪರೂಪ. ಅಂಥ ಅಪರೂಪಕ್ಕೆ ಅರ್ಹರಾದ ವ್ಯಕ್ತಿಯೇ ಆಗಿದ್ದರು, ಕಲಾಂ.

ತಮ್ಮ ಬದುಕಿನ ಅಂತಿಮ ಗಳಿಗೆಯವರೆಗೆ, ಕೊನೆ ಉಸಿರಿನವರೆಗೂ ಅತ್ಯಂತ ಚೈತನ್ಯಶೀಲವಾಗಿ ದುಡಿದ, ಒಳಿತಿಗಾಗಿಯೇ ಮಿಡಿದ ಅವರು, ರಾಷ್ಟ್ರಪತಿ ಸ್ಥಾನದಿಂದ ನಿವೃತ್ತರಾದ ಬಳಿಕವೂ ದೇಶದ ಅನೇಕ ಕಾಲೇಜುಗಳಿಗೆ, ಯುನಿವರ್ಸಿಟಿಗಳಿಗೆ ಹೋಗಿಬರುತ್ತಿದ್ದರು; ಅತ್ಯಂತ ಆಪ್ತವಾಗಿ, ಅತ್ಯಂತ ಪ್ರೀತಿಯಿಂದ ತಮ್ಮ ಅನುಭವಗಳನ್ನೂ, ಆಲೋಚನೆಗಳನ್ನೂ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವತ್ತು ಶಿಲ್ಲಾಂಗ್‌ನಲ್ಲಿಯೂ ಸಹ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಲ್ಲಿ ‘Creating a Livable Planet Earth’ – ವಾಸಯೋಗ್ಯ ಪೃಥ್ವಿಯ ಸೃಷ್ಟಿ – ಎಂಬ ವಿಚಾರದ ಬಗ್ಗೆ ಮಾತಾಡಲು ಹೋಗಿದ್ದರು. ‘ಯೋಗ್ಯ ವ್ಯಕ್ತಿಗಳು, ವ್ಯಕ್ತಿತ್ವಗಳು ಸೃಷ್ಟಿಯಾದಾಗ ಸಹಜವಾಗಿಯೇ ಈ ಭೂಮಿ ವಾಸಯೋಗ್ಯವಾಗುತ್ತದೆ’ ಎಂಬುದು ಅವರ ಕಳಕಳಿ. ಕಾಕತಾಳೀಯ ಅಂದರೆ ಇದೇ ಇರಬಹುದೇನೋ? ಅವರು ಉಪನ್ಯಾಸ ಆರಂಭಿಸಿ ಕೇವಲ ೫ ನಿಮಿಷಗಳಾಗಿದ್ದುವಷ್ಟೆ. ಹೃದಯಾಘಾತದಿಂದ ವೇದಿಕೆಯಲ್ಲೇ ಕುಸಿದರು. ಅಷ್ಟೇ ವೇಗವಾಗಿ ಈ ಭೂಮಿಯಿಂದಲೇ ಅವರು ನಿರ್ಗಮಿಸಿಬಿಟ್ಟರು! ಅವರನ್ನು ಇನ್ನಷ್ಟು ದಿನ ಉಳಿಸಿಕೊಳ್ಳಲು ಪೃಥ್ವಿ ಯೋಗ್ಯವಾಗಿರಲಿಲ್ಲವೋ ಏನೋ.

ಕಲಾಂ ಇಲ್ಲದ ಎಂಟು ವರ್ಷಗಳು

ಅವರ ದೇಹಾವಸಾನವಾಗಿ ಇಂದಿಗೆ ೮ ವರ್ಷಗಳು ಸಂದಿವೆ. ಆದರೆ ನಿರ್ಗಮನ ದೇಹಕ್ಕಷ್ಟೇ, ಅವರ ಆಲೋಚನೆಗಳಿಗಲ್ಲ! ದೇಶದ ಯುವ ಮನಸ್ಸಿನಲ್ಲಿ ಬಿತ್ತಿದ ಅವರ ನೂರಾರು ಕನಸುಗಳು ನೂರಾರು, ಸಾವಿರಾರು ಶಾಖೆಗಳಾಗಿ ಇವತ್ತಿಗೂ ಚಿಗುರುತ್ತಲೇ ಇವೆ. ಸೋಜಿಗವೇನೆಂದರೆ, ಅವರು ರಾಷ್ಟ್ರಪತಿಗಳಾಗಿದ್ದಾಗ ಇನ್ನೂ ಚಿಕ್ಕ ಮಕ್ಕಳಾಗಿದ್ದವರಿಗೂ ಸಹ, ಇವತ್ತು ಹದಿಹರೆಯದ ಹುಡುಗ-ಹುಡುಗಿಯರಾಗಿ ಬೆಳೆದು ನಿಂತ ಮೇಲೂ, ಅವರೇ ಇನ್ನೂ ಆದರ್ಶದ ಹೆಗ್ಗುರುತಾಗಿ, ಸ್ಫೂರ್ತಿಯಾಗಿ ನೆಲೆ ನಿಂತಿರುವುದು. ‘ನನ್ನ ಬದುಕೇ ನನ್ನ ಸಂದೇಶ’ ಎಂದಿದ್ದರು ಗಾಂಧಿಜಿ. ಅವರಂತೆಯೇ ಬದುಕಿದರು, ಅಬ್ದುಲ್‌ ಕಲಾಂ.

ರಾಷ್ಟ್ರಪತಿ ಕಲಾಂ: ಅಟಲ್‌ ಕನಸು

೨೦೦೨ ಜುಲೈ ೨೫, ಮಿಸೈಲ್‌ ಮ್ಯಾನ್‌ ಆಫ್‌ ಇಂಡಿಯಾ ಒಬ್ಬರು ಪ್ರೆಸಿಡೆಂಟ್‌ ಆಫ್‌ ಇಂಡಿಯಾ ಆದ ಸ್ಮರಣೀಯ ದಿನ ಅದು. ೨೦೦೨ರಲ್ಲಿ ಎನ್‌ಡಿಎ ನಾಯಕರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ‘ನೀವು ರಾಷ್ಟ್ರಪತಿ ಅಭ್ಯರ್ಥಿಯಾಗಬೇಕು’ ಎಂದು ಕರೆ ಕಳುಹಿಸಿದಾಗ ಸ್ವತಃ ಕಲಾಂ ಅವರೂ ಕೂಡ ನಂಬಿರಲಿಲ್ಲವಂತೆ. ಆದರೆ ವಾಜಪೇಯಿಯವರಿಗೆ ಆದರ್ಶದ ಕನಸಿತ್ತು. ಹಟ ಹಿಡಿದರು. ಕಲಾಂ ರಾಷ್ಟ್ರಪತಿಯಾದರು. ವಾಜಪೇಯಿಯವರ ಕನಸು ಜೀವತಳೆಯಿತು, ಎಲ್ಲರೆದೆಯಲ್ಲೊಂದು ಪ್ರೇರಕ ಶಕ್ತಿಯಾಗಿ ನೆಲೆ ನಿಂತಿತು.

ದೇಶದಲ್ಲೇ ಮೊದಲ ಬಾರಿಗೆ ವಿಜ್ಞಾನಿಯೊಬ್ಬರು, ರಾಜಕಾರಣದ ಅಂಗಳಕ್ಕೆ ಕಾಲಿಟ್ಟಾಗ, ಅದರಲ್ಲೂ ರಾಷ್ಟ್ರಪತಿಯಾದಾಗ ಸಹಜವಾಗಿಯೇ ಅನೇಕ ಟೀಕೆ-ಟಿಪ್ಪಣಿಗಳು ಹರಿದಾಡಿದ್ದವು. ದೇಶದ ಅತ್ಯುನ್ನತ ವಿಜ್ಞಾನಿ ಕೇಸರಿ ಪಾಳೆಯದ ಸೂತ್ರದ ಬೊಂಬೆಯಾಗುತ್ತಾರೆ, ಹಿಂದುತ್ವದ ರಾಯಭಾರಿಯನ್ನಾಗಿಸಲೆಂದೇ ಎನ್‌ಡಿಎ ಸರ್ಕಾರ ಅವರನ್ನು ರಾಷ್ಟ್ರಪತಿ ಸ್ಥಾನದಲ್ಲಿ ಪ್ರತಿಷ್ಠಾಪಿಸಿದೆ ಎಂಬಿತ್ಯಾದಿ ವಾದಗಳೆಲ್ಲಾ ಹುಟ್ಟಿಕೊಂಡಿದ್ದವು. ಆದರೆ ಇದಾವುದಕ್ಕೂ ಕಲಾಂ ಅವರು ನೇರವಾಗಿ ಎಂದೂ ಪ್ರತಿಕ್ರಿಯಿಸಲಿಲ್ಲ. ಆದರೆ ಪರೋಕ್ಷವಾಗಿ ತಾವೇನು, ತಮ್ಮ ವ್ಯಕ್ತಿತ್ವ ಎಂತಹುದು ಎಂಬುದನ್ನು ದಿನನಿತ್ಯವೂ ನಿರೂಪಿಸುತ್ತಾ ಹೋದರು, ಈ ದೇಶ ಕಂಡ ಅತ್ಯಂತ ಜನಪ್ರಿಯ ರಾಷ್ಟ್ರಪತಿಯಾದರು.

ಕಲಾಂ ಅವರು ಅದೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ. ಆಯೋಜಕರು ದೀಪ ಪ್ರಜ್ವಲನ ಮಾಡುವಂತೆ ಅವರನ್ನು ಕೋರಿದರು. ತಕ್ಷಣ ಉರಿಯುತ್ತಿದ್ದ ಮೇಣದ ಬತ್ತಿಯನ್ನು ಹಿಡಿದು ದೀಪ ಹೊತ್ತಿಸುತ್ತಲೇ ಕಲಾಂ ಹೇಳಿದ ಮಾತಿದು- ‘ನಾನು ಜನ್ಮತಃ ಮುಸ್ಲಿಂ. ಇಲ್ಲಿ ಕ್ರಿಶ್ಚಿಯನ್ನರ ಮೇಣದ ಬತ್ತಿಯನ್ನು ಹಿಡಿದು ಹಿಂದೂ ದೀಪವನ್ನು ಬೆಳಗುತ್ತಿದ್ದೇನೆ. ಇದೇ ಭಾರತದ ಏಕತೆಯ ಸಂದೇಶವಾಗಬೇಕು!’ ಹೇಳಿದ್ದು ಮಾತ್ರವಲ್ಲ, ತಮ್ಮ ಜೀವಿತದ ಕೊನೆಯ ಉಸಿರಿನವರೆಗೂ ಅವರು ಜೀವಿಸಿದ್ದು, ಉಸಿರಾಡಿದ್ದು, ಇದೇ ಸಾಮರಸ್ಯದ ಹಾಗೂ ಜ್ಞಾನದ ಗಾಳಿಯನ್ನು!

ಕಾಶಿಗೆ ಹೋದವರು ರಾಮೇಶ್ವರಂಗೆ ಹೋಗೋದು ಯಾಕೆ?; ಇಲ್ಲಿನ ಕಲಾಂ ಸ್ಮಾರಕ ಹೇಗಿದೆ ಗೊತ್ತಾ?

ಕಲಾಂ ಬದುಕೇ ನಮಗೆ ಸಂದೇಶ

ಅವರು ನೀಡಿದ ಈ ಮತ್ತೊಂದು ಸಂದೇಶವೂ ಎಲ್ಲ ದೇಶಗಳಿಗೂ ಸದಾ ಸರ್ವದಾ ಪ್ರಸ್ತುತ. ರಾಷ್ಟ್ರಪತಿಯಾಗಿದ್ದಾಗ ಒಮ್ಮೆ ಅವರನ್ನು ಭೇಟಿ ಮಾಡಲೆಂದು ಅವರ ಕುಟುಂಬದ ಸದಸ್ಯರು ತಮಿಳುನಾಡಿನಿಂದ ಬಂದಿದ್ದರು. ಅವರು ಕೆಲ ಕಾಲ ರಾಷ್ಟ್ರಪತಿ ಭವನದಲ್ಲೇ ಉಳಿದುಕೊಂಡಿದ್ದರು. ಅವರೆಲ್ಲರೂ ಅಲ್ಲಿಂದ ಮರಳಿದ ಮೇಲೆ, ಅವರಿಂದ ರಾಷ್ಟ್ರಪತಿ ಭವನಕ್ಕೆ ಆದ ಅಷ್ಟೂ ಖರ್ಚನ್ನೂ ಖುದ್ದು ಕಲಾಂ ತಮ್ಮ ಸ್ವಂತ ದುಡ್ಡಿನಿಂದ ಭರಿಸಿದ್ದರು! ಅವರು ನಮ್ಮನ್ನು ಬಿಟ್ಟು ಹೋದಾಗ ಅವರ ಕಬೋರ್ಡಿನಲ್ಲಿ ಸಿಕ್ಕಿದ್ದು ಕೇವಲ ಮೂರು ಪ್ಯಾಂಟು, ಮೂರು ಶರ್ಟು, ಮೂರು ಸೂಟುಗಳು, ಅಷ್ಟೇ! ಉಳಿದಂತೆ ಅಲ್ಲಿದ್ದಿದ್ದು, ಸುಮಾರು ಎರಡೂವರೆ ಸಾವಿರ ಅಮೂಲ್ಯ ಪುಸ್ತಕಗಳು, 1 ಪದ್ಮಶ್ರೀ,

1 ಪದ್ಮಭೂಷಣ 1 ಭಾರತ ರತ್ನ ಮತ್ತು 50 ಡಾಕ್ಟರೇಟ್‌ ಪದವಿಗಳು!

ಜ್ಞಾನ, ಮಾನವೀಯತೆ, ಸರಳತೆ ಮತ್ತು ಸಮಾಜ ಸೇವೆ ಈ ನಾಲ್ಕು ಆದರ್ಶಗಳ ಸಾರ್ಥಕ ಬದುಕು ಬದುಕಿದವರು, ಕಲಾಂ. ಇವತ್ತು ಅವರ ಜನ್ಮದಿನ. ಪ್ರತಿ ವರ್ಷವೂ ಈ ದಿನ ನನ್ನ ಪಾಲಿಗೆ ಅವರ ನೆನಪು, ಕೆಲಸ ಹಾಗೂ ಆಲೋಚನೆಗಳಿಂದ ನನ್ನನ್ನು ನಾನು ಪ್ರೇರೇಪಿಸಿಕೊಳ್ಳುವ ಆತ್ಮಾವಲೋಕನದ ದಿನ. ಎಲ್ಲರೆದೆಯನ್ನೂ ಅವರು ಸದಾ ಬೆಳಗುತ್ತಿರಲಿ ಅನ್ನುವುದೇ ನನ್ನ ಆಶಯ: ಬಿ.ವೈ.ರಾಘವೇಂದ್ರ, ಬಿಜೆಪಿ ಸಂಸದ

Follow Us:
Download App:
  • android
  • ios