ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾವು ಹಿಂದೂ ಆಗಿ ಹುಟ್ಟಿ, ಹಿಂದೂ ಆಗಿಯೇ ಸಾಯುವುದಾಗಿ ಹೇಳಿದ್ದಾರೆ. ಎಲ್ಲಾ ಧರ್ಮದ ಬಗ್ಗೆ ತಮಗೆ ಗೌರವವಿದ್ದು, ಕುಂಭಮೇಳದಲ್ಲಿ ಉತ್ತಮ ಅನುಭವವಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು (ಫೆ.26): ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ. ನಾನು ನನ್ನ ಜೀವನದಲ್ಲಿ ಎಲ್ಲ ಧರ್ಮದ ಬಗ್ಗೆ ಗೌರವ ಇಟ್ಟಿದ್ದೇನೆ. ಕುಂಭ ಮೇಳದಲ್ಲಿ ಉತ್ತಮ ಅನುಭವ ಆಗಿದೆ. ತುಂಬಾ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕುಂಭಮೇಳದಲ್ಲಿ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಅವರು, ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ. ನಾನು ಎಲ್ಲ ಧರ್ಮದ ಬಗ್ಗೆ ಗೌರವ ಇಟ್ಟಿದ್ದೇನೆ. ಜೈಲಿನಲ್ಲಿ ಇದ್ದಾಗ ಸಿಖ್ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದೆ. ಇಸ್ಲಾಂ ಧರ್ಮದ ದರ್ಗಾಗೆ ಹಾಗೂ ಚರ್ಚ್‌ಗೂ ಹೋಗುತ್ತೇನೆ. ಕುಂಭ ಮೇಳದಲ್ಲಿ ನನಗೆ ಉತ್ತಮ ಅನುಭವ ಆಗಿದೆ. ತುಂಬಾ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ ಎಂದರು.

ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಾನು ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಆದರೆ, ಇದಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಇಶಾ ಫೌಂಡೇಶನ್ ಸಂಸ್ಥೆಯವರು ನಮ್ಮ ಮನೆಗೆ ಬಂದು ಆಹ್ವಾನ ನೀಡಿದ್ದಾರೆ. ನಾನು ಬರುವ ತನಕ ಕಾದು ಆಹ್ವಾನಿಸಿದ್ದಾರೆ. ಕಳೆದ ಬಾರಿ ನನ್ನ ಮಗಳು ಹೋಗಿದ್ದಳಂತೆ. ಈ ಬಾರಿ ನಾನು ಹೋಗುತ್ತಿದ್ದೇನೆ. ನಾನು ಬಿಜೆಪಿಯವರ ಜೊತೆ ಯಾವುದೇ ಸಂಪರ್ಕ ಇಲ್ಲ. ಜಗ್ಗಿ ವಾಸುದೇವ್ ನಮ್ಮ ಮೈಸೂರಿನವರು. ನನ್ನ ಮನೆಗೆ ಬಂದು ಆಹ್ವಾನಿಸಿದ್ದಾರೆ. ನಾನು ಇವತ್ತು ಇಶಾ ಪೌಂಡೇಶನ್ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಪಾಪ ನಾನು ಇನ್ನೂ ಅಮಿತ್‌ ಶಾರನ್ನ ಭೇಟಿ‌ಯನ್ನೇ ಮಾಡಿಲ್ಲ. ಆಗಲೇ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಗೆ ಹತ್ತಿರ ಅಂತ ವೈರಲ್ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಗಿರಕಿ ಹೊಡೆಯೋರಿಗಿಲ್ಲ, ಕೆಲಸ ಮಾಡುವವರಿಗಷ್ಟೇ ಸ್ಥಾನ: ಡಿ.ಕೆ.ಶಿವಕುಮಾರ್

ಅಸೆಂಬ್ಲಿ ಟಿಕೆಟ್ ವಂಚಿತ ಸಮುದಾಯಗಳಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ(ಎಂಎಲ್‌ಸಿ) ಮಾಡಿ ಎಂಬ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಸಚಿವ ರಾಜಣ್ಣ ನನ್ನ ಬಳಿ ಬಂದು ಮಾತನಾಡಿಲ್ಲ. ಮಾಧ್ಯಮಗಳ ಮುಂದೆ ಮಾತನಾಡೋರಿಗೆ ನಾನು ಉತ್ತರ ಕೊಡಲ್ಲ. ನನ್ನ ಬಳಿ ಬಂದು ಮಾತನಾಡಿದರೆ ಸಲಹೆ ಕೊಡುತ್ತೇನೆ ಎಂದು ಹೇಳಿದರು. 

ಇನ್ನು ಬೆಂಗಳೂರು ಅಭಿವೃದ್ಧಿ ಬಗ್ಗೆ ಡಿ.ಕೆ. ಶಿವಕುಮಾರ್ ವಿಫಲವಾಗಿದ್ದಾರೆ ಎಂಬ ಉದ್ಯಮಿ ಮೋಹನ್‌ದಾಸ್ ಪೈ ಹೇಳಿಕೆ ಕುರಿತು ಮಾತನಾಡಿ, ಮೋಹನ್ ದಾಸ್ ಪೈ ಚುನಾವಣೆಗೆ ನಿಲ್ಲಲಿ. ಬೆಂಗಳೂರು ನಗರದ ಅಭಿವೃದ್ಧಿ, ಟ್ರಾಫಿಕ್ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದಾರೆ. ಮೋಹನ್ ದಾಸ್ ಪೈ ಹಿರಿಯರು. ಅವರು ರಾಜಕೀಯಕ್ಕೆ ಬರಬೇಕು ಹಾಗೂ ಚುನಾವಣೆ ನಿಲ್ಲಬೇಕು. ಅವರು ಸಚಿವರಾದ ಬಳಿಕ ಮಾತನಾಡಲಿ. ವ್ಯವಸ್ಥೆ ಏನು ಎಂದು ಅವಾಗ ಗೊತ್ತಾಗುತ್ತದೆ. ಒಳ್ಳೆಯ ಕೆಲಸ ಮಾಡುವಾಗ ವಿರೋಧ ಟೀಕೆ ಇದ್ದೇ ಇರುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ದೆಹಲಿಗೆ ಹೋಗಿ Dk Shivakumar ಮಾಡಿದ್ದೇನು? ಏನೇನು ಚರ್ಚೆ? Suvarna News | Kannada News