ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ವಾರದಲ್ಲಿ ಅಂತಿಮಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಫೆ.26): ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ವಾರದಲ್ಲಿ ಅಂತಿಮಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕರ ಹಿಂದೆ ಗಿರಕಿ ಹೊಡೆಯುವವರಿಗಿಂತ, ತಾಲೂಕು ಮಟ್ಟದಲ್ಲಿ ಹಗಲಿರುಳು ಶ್ರಮಿಸುವವರಿಗೆ ಮಾತ್ರ ಪಕ್ಷದ ಜವಾಬ್ದಾರಿ ವಹಿಸಲಾಗುವುದು. ಯಾರಿಗೆ ಜವಾಬ್ದಾರಿ ನೀಡಿದರೆ ಫಲಿತಾಂಶ ಬರುತ್ತದೆಯೋ ಅವರಿಗೆ ಮಾತ್ರ ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಿ ಅವಕಾಶ ನೀಡಲಾಗುವುದು.
ನಮಗೆ ಕೆಲಸ ಮಾಡುವವರು ಬೇಕು. ತಾಲೂಕಿನಲ್ಲಿ ಕುಳಿತು, ಅಲ್ಲಿನ ಸಮಸ್ಯೆ ಬಗೆಹರಿಸಬೇಕು. ಫಲಿತಾಂಶ ಬರುವ ನಾಯಕತ್ವಕ್ಕೆ ಮಾತ್ರ ಆದ್ಯತೆ ನೀಡಲಾಗುವುದು ಎಂದರು. ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದೆ. ಕೆಲಸ ಮಾಡಲು ಯಾರಿಗೆ ಆಸಕ್ತಿ ಇಲ್ಲವೋ ಅವರನ್ನು ಬದಲಿಸಿ, ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಲಾಗುತ್ತಿದೆ. ಪಕ್ಷ ಸಂಘಟನೆ ವಿಚಾರದಲ್ಲಿ ದಿನವಿಡೀ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಬೇಕು. ಅದಕ್ಕೆ ತಕ್ಕಂತೆ ವರದಿ ತರಿಸಿಕೊಂಡಿದ್ದು, ಸರಿಯಾಗಿ ಕೆಲಸ ಮಾಡುವವರಿಗೆ ಮಾತ್ರ ಜವಾಬ್ದಾರಿ ನೀಡಲಾಗುವುದು. ಎಐಸಿಸಿ ನಾಯಕರೂ ಅದೇ ಸೂಚನೆ ನೀಡಿದ್ದಾರೆ ಎಂದು ವಿವರಿಸಿದರು.
ಮಹಿಳೆಯರ ಪರಿಗಣನೆ: ಮೀಸಲಾತಿ ಆಧಾರದಲ್ಲಿ ಪದಾಧಿಕಾರಿ ಸ್ಥಾನಕ್ಕೆ ಮಹಿಳಾ ನಾಯಕರನ್ನೂ ಪರಿಗಣಿಸಲಾಗುತ್ತಿದೆ. ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವ ವಿಚಾರವಾಗಿ ಸಚಿವರ ಅಭಿಪ್ರಾಯವನ್ನೂ ಪಡೆಯುತ್ತಿದ್ದು, ಈ ವಾರವೇ ಪಟ್ಟಿ ಅಂತಿಮಗೊಳಿಸಿ ಪ್ರಕಟಿಸಲಾಗುವುದು ಎಂದು ಹೇಳಿದರು.
ಎಚ್‌ಡಿಕೆಗೆ ಮತ್ತೆ ಭೂ ಸಂಕಷ್ಟ: ಕೇಸು ರದ್ದು ಕೋರಿದ್ದ ಮನವಿಗೆ ಸುಪ್ರೀಂ ಕೋರ್ಟ್ ನಕಾರ
ಕೆಲಸ ಮಾಡುವವರು ಬೇಕು
-ತಾಲೂಕುಗಳಲ್ಲಿ ಹಗಲಿರುಳು ಶ್ರಮಿಸುವವರಿಗೆ ಮಾತ್ರ ಪಕ್ಷದ ಜವಾಬ್ದಾರಿ ನೀಡ್ತೀವಿ
-ಯಾರಿಗೆ ಜವಾಬ್ದಾರಿ ಕೊಟ್ರೆ ಫಲಿತಾಂಶ ಬರುತ್ತದೆಯೋ ಅವರಿಗೆ ಮಾತ್ರ ಅವಕಾಶ
-ಕೆಲಸ ಮಾಡಲು ಯಾರಿಗೆ ಆಸಕ್ತಿ ಇಲ್ಲವೋ ಅವರನ್ನು ಬದಲಿಸಿ, ಅನ್ಯರ ನೇಮಕ
-ಇದೇ ರೀತಿಯಲ್ಲಿ ನೇಮಕ ಮಾಡಲು ಎಐಸಿಸಿ ಕೂಡಾ ನಮಗೆ ಸೂಚನೆ ನೀಡಿದೆ
-ಮೀಸಲಾತಿ ಆಧಾರದಲ್ಲಿ ಪದಾಧಿಕಾರಿಗಳ ಸ್ಥಾನಕ್ಕೆ ಮಹಿಳೆಯರೂ ಪರಿಗಣನೆ
