ಶಕ್ತಿ ಯೋಜನೆ ಪರಿಷ್ಕರಣೆ: ಡಿ.ಕೆ. ಶಿವಕುಮಾರ್ ಯೂಟರ್ನ್, ಸಾರಿಗೆ ಸಚಿವ ಗರಂ!

ಕೆಲವು ಮಹಿಳೆಯರು ಬಸ್‌ನಲ್ಲಿ ಟಿಕೆಟ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ಶಕ್ತಿ ಯೋಜನೆಯನ್ನು ಪರಿಷ್ಕರಿಸುವ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈಗ ತಮ್ಮ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

Shakti Yojana revision DK Shivakumar U turn but Transport Minister anger sat

ಬೆಂಗಳೂರು (ಅ.31): ಕೆಲವು ಮಹಿಳೆಯರು ಬಸ್‌ನಲ್ಲಿ ಟಿಕೆಟ್ ಖರೀದಿ ಮಾಡುವುದಾಗಿ ಹೇಳಿದ್ದು, ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಚರ್ಚೆ ಮಾಡುವುದಾಗಿ ಹೇಳಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಾನು ಈ ರೀತಿ ಸ್ಟೇಟ್‌ಮೆಂಟ್ ಕೊಟ್ಟಿಲ್ಲ. ನೀವು ಅದನ್ನು ತಿರುಚಿ ಹಾಕಿದ್ದೀರಿ ಎಂದು ಉಲ್ಟಾ ಹೊಡೆದಿದ್ದಾರೆ.

ರಾಜ್ಯ ಸರ್ಕಾರದ ಮೊದಲ ಕಾಂಗ್ರೆಸ್ ಗ್ಯಾರಂಟಿ ಶಕ್ತಿ ಯೋಜನೆಯ ಅಡಿಯಲ್ಲಿ ಕೆಲವು ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡದೇ ಟಿಕೆಟ್‌ಗೆ ಹಣ ಪಾವತಿಸಲು ಮುಂದಾದರೂ ಕಂಡಕ್ಟರ್ ಹಣ ಪಡೆಯುತ್ತಿಲ್ಲ. ಈ ಬಗ್ಗೆ ಕೆಲವು ಮಹಿಳೆಯರು ನಾವು ಹಣ ಪಾವತಿಸಲು ಸಿದ್ಧರಿದ್ದೇವೆ ಎಂದು ಇಮೇಲ್ ಮತ್ತು ಸಂದೇಶಗಳನ್ನು ಕಳಿಸಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚೆ ಮಾಡಿ ಪರಿಷ್ಕರಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಇಂದು ನಾನು ಈ ರೀತಿ ಹೇಳಿಕೆಯನ್ನೇ ನೀಡಿಲ್ಲ, ನನ್ನ ಸ್ಟೇಟ್‌ಮೆಂಟ್ ಅನ್ನು ತಿರುಚಿ ಹಾಕಿದ್ದೀರಿ ಎಂದು ಮಾಧ್ಯಮಗಳ ವಿರುದ್ಧವೇ ಉಲ್ಟಾ ಹೊಡೆದಿದ್ದಾರೆ. ಇದೇ ವೇಳೆ ಅವರ ಪಕ್ಕದಲ್ಲಿಯೇ ಇದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನನ್ನೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಹೇಳುವ ಮೂಲಕ ಗರಂ ಆಗಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆ ಸ್ಥಗಿತವಾಗುತ್ತಾ? ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ!

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಶಕ್ತಿ ಯೋಜನೆ ಪರಾಮರ್ಶೆ ಬಗ್ಗೆ ನಾನು ಆ ರೀತಿ ಸ್ಟೇಟ್ ಮೆಂಟ್ ಕೊಟ್ಟಿಲ್ಲ. ನೀವು ಅದನ್ನ ತಿರುಚಿ ಹಾಕಿದ್ದೀರ. ಕೆಲವರು ಬೇಡ ಅಂತಾರೆ,ಕೆಲವರು ಟಿಕೆಟ್ ತೆಗೆದುಕೊಳ್ತೇವೆ ಅಂತಾರೆ. ಅದರ ಬಗ್ಗೆ ಯೋಚನೆ ಮಾಡ್ತೇವೆ ಅಂದಿದ್ದೆ. 5 ಗ್ಯಾರೆಂಟಿಗಳಲ್ಲಿ ಒಂದನ್ನೂ ವಿಥ್ ಡ್ರಾ ಮಾಡಲ್ಲ. ನಾವು ಯೋಚನೆ‌ ಮಾಡ್ತೇವೆ ಅಂದಿದ್ದೆ ನಾವು ಕೊಟ್ಟ ಗ್ಯಾರೆಂಟಿ ಮುಂದುವರಿಸ್ತೇವೆ. ಇನ್ನೂ 5 ವರ್ಷ ನಮ್ಮ‌ ಗ್ಯಾರೆಂಟಿ ಇರುತ್ತವೆ. ಮುಂದಿನ 8.5 ವರ್ಷ ನಮ್ಮ ಸರ್ಕಾರ ಇರುತ್ತದೆ ಎಂದು ಹೇಳಿದರು.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ತಡೆದುಕೊಳ್ಳೋಕೆ‌ ಆಗ್ತಿಲ್ಲ. ನಿಮ್ಮ ಕಾಲದಲ್ಲಿ ಏನೂ‌ ಮಾಡಿಲ್ಲ ಅಂತ ಜನ ಅವರನ್ನ ಧಿಕ್ಕರಿಸ್ತಿದ್ದಾರೆ. ಅದಕ್ಕೆ ನನಗೆ ಇಂತ ಅವಕಾಶ ಸಿಗ್ತಿಲ್ಲ ಅಂತ ಪೇಚಾಡ್ತಿದ್ದಾರೆ. ನಮ್ಮ ಸರ್ಕಾರವನ್ನು ಷಡ್ಯಂತ್ರ ಮಾಡಿ ಕಿತ್ತು ಹಾಕುವ ಪ್ರಯತ್ನ ಮಾಡ್ತಿದ್ದಾರೆ. ಅದನ್ನ‌ ಮಾಡೋಕೆ ಅವರಿಂದ ಸಾಧ್ಯವಾಗಲ್ಲ. ಬೇಕಾದರೆ ಇದನ್ನ ಬರೆದಿಟ್ಟುಕೊಳ್ಳಿ ನೀವು. ಇನ್ನೂ 8.5 ವರ್ಷ ನಾವೇ ಇರ್ತೇವೆ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ನನ್ನನ್ನು ಸಂಪುಟದಿಂದ ಕಿತ್ತೊಗೆಯಲು ಸಾಧ್ಯವಿಲ್ಲ: ಸಚಿವ ಜಮೀರ್ ಅಹ್ಮದ್ ಖಾನ್

ಶಕ್ತಿ ಯೋಜನೆ ಪರಿಷ್ಕರಣೆ ವಿಚಾರದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಡಿ.ಕೆ. ಶಿವಕುಮಾರ್ ಅವರು ಹೇಳಿಕೆ ಕೊಟ್ಟಾಗ ನಾನು ವೇದಿಕೆ ಮೇಲೆ ಇದ್ದೆ. ಡಿಕೆ ಶಿವಕುಮಾರ್ ನನ್ನ ಬಳಿ ಏನು ಚರ್ಚೆ ಮಾಡಿಲ್ಲ. ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಶಕ್ತಿ ಯೋಜನೆಯನ್ನ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪರಿಷ್ಕರಣೆ ಕೂಡ ಮಾಡುವುದಿಲ್ಲ. ಈ ಅವಧಿ ಅಲ್ಲದೆ ಮುಂದಿನ ಐದು ವರ್ಷ ಅವಧಿಗೂ ಶಕ್ತಿ ಯೋಜನೆ ಇರಲಿದೆ. ನನ್ನ ಬಳಿ ಯಾರೂ ನಿಲ್ಲಿಸಿ ಅಂತ, ಪರಿಷ್ಕರಣೆ ಮಾಡಿ ಅಂತ ಮನವಿ ಮಾಡಿಲ್ಲ. ಡಿ.ಕೆ. ಶಿವಕುಮಾರ್ ವೈಯಕ್ತಿಕವಾಗಿ ಹೇಳಿರಬಹುದು. ಉಪಚುನಾವಣೆಯ ವೇಳೆ ಇದು ಬೇಕಾಗಿರಲಿಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios