ಶಕ್ತಿ ಯೋಜನೆ ಎಫೆಕ್ಟ್ : ಮಹಿಳಾ ರೋಗಿಗಳಿಗೆ ಹೊಸ ಶಕ್ತಿ!
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಸಾಕಷ್ಟು ಮಹಿಳೆಯರು ತೀರ್ಥಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದು ಸುದ್ದಿಯಾಗಿತ್ತು. ಇದೀಗ ಶಕ್ತಿ ಯೋಜನೆಯಿಂದಾಗಿ ಅನೇಕ ಮಹಿಳೆಯರು ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಅಚ್ಚರಿಯ ಬೆಳವಣಿಗೆ ನಡೆದಿದೆ.
-ಸ್ವಸ್ತಿಕ್ ಕನ್ಯಾಡಿ
ಬೆಂಗಳೂರು (ಜು.30) : ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಸಾಕಷ್ಟು ಮಹಿಳೆಯರು ತೀರ್ಥಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದು ಸುದ್ದಿಯಾಗಿತ್ತು. ಇದೀಗ ಶಕ್ತಿ ಯೋಜನೆಯಿಂದಾಗಿ ಅನೇಕ ಮಹಿಳೆಯರು ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಅಚ್ಚರಿಯ ಬೆಳವಣಿಗೆ ನಡೆದಿದೆ.
ಹೌದು, ಬೆಂಗಳೂರು ಸುತ್ತಮುತ್ತಲಿನ ಬಹುತೇಕ ಜಿಲ್ಲೆಗಳಿಂದ ಇಂದು ಮಹಿಳೆಯರು ಚಿಕಿತ್ಸೆಗಾಗಿ ನಗರಕ್ಕೆ ಆಗಮಿಸುತ್ತಿದ್ದಾರೆ. ಶಕ್ತಿ ಯೋಜನೆ(Shakti scheme) ಹಿನ್ನಲೆ ಪ್ರಯಾಣ ಉಚಿತವಾಗಿರುವುದರಿಂದ ಬಹುತೇಕ ಮಹಿಳೆಯರು ನಗರದ ಹೈಟೆಕ್ ಆಸ್ಪತ್ರೆಗಳತ್ತ ಬರುತ್ತಿರುವುದು ಒಂದರ್ಥದಲ್ಲಿ ಶಕ್ತಿಯೋಜನೆ ಮಹಿಳಾ ರೋಗಿಗಳಿಗೂ ಶಕ್ತಿ ತುಂಬಿದಂತಾಗಿದೆ.
ಮಹಿಳೆಯರ ಫ್ರೀ ಬಸ್‌ನಿಂದ ಗಂಡಸರಿಗೆ ಪ್ರಯಾಸ, ಖರೀದಿಸಿ ಮಾರುತಿ ಕಾರು ಜಾಹೀರಾತು ವೈರಲ್!
ಸಾಕಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಆಸ್ಪತ್ರೆ ಮತ್ತು ಇರುವ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕೊರತೆ ಇರುವುದರಿಂದಾಗಿ ಹಳ್ಳಿಗಳಿಂದ ನಗರದತ್ತ ಬರುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ವಾಣಿವಿಲಾಸ, ಕಿದ್ವಾಯಿ, ಕೆಸಿ ಜನರಲ್ ಹಾಗೂ ಇನ್ನಿತರ ಆಸ್ಪತ್ರೆಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಏರಿದೆ.
ವಾಣಿವಿಲಾಸ ಆಸ್ಪತ್ರೆ(Vanivilas hospital)ಯಲ್ಲಿ ಶಕ್ತಿ ಯೋಜನೆ ಜಾರಿಗೆ ಮೊದಲು ತಿಂಗಳಿಗೆ 300ರಿಂದ 400 ಹೊರರೋಗಿಗಳು ದಾಖಲಾಗುತ್ತಿದ್ದರೆ, ಈ ಯೋಜನೆ ಜಾರಿಯಾದ ಬಳಿಕ ಈ ಸಂಖ್ಯೆ 450ರಿಂದ 500ಕ್ಕೇರಿದೆ. ಜಯದೇವ ಆಸ್ಪತ್ರೆಯಲ್ಲಿ ಈ ಸಂಖ್ಯೆ 1600-1700 ಇದ್ದಿದ್ದು 2100ರಿಂದ 2200ಕ್ಕೇರಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲೂ ರೋಗಿಗಳ ಸಂಖ್ಯೆ ಏರಿಕೆಯಾಗಿದ್ದು 800-830 ಇದ್ದಿದ್ದು ಸದ್ಯ 950-1000ಕ್ಕೇರಿದೆ. ಕಿದ್ವಾಯಿಯಲ್ಲಿ ಶಕ್ತಿ ಯೋಜನೆ ಜಾರಿಗೆ ಮೊದಲು 1650-1700ರಷ್ಟಿದ್ದ ಸಂಖ್ಯೆ ಈಗ 1850ರಿಂದ 1900 ತಲುಪಿದೆ. ಇದರಲ್ಲಿ 18%-19% ಮಹಿಮಾ ಹೊರರೋಗಿಗಳೇ ಹೆಚ್ಚಾಗಿರುವುದು ವಿಶೇಷ.
ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಂಡ್ಯ, ಚಿತ್ರದುರ್ಗ, ಚಿಕ್ಕಮಗಳೂರು ಭಾಗಗಳಿಂದ ಮಹಿಳೆಯರು ಆಗಮಿಸುತ್ತಿದ್ದು ಆಸ್ಪತ್ರೆಗಳು ನಿತ್ಯ ಜನಜಂಗುಳಿಯಿಂದ ತುಂಬಿದೆ.
ಶಕ್ತಿ ಯೋಜನೆಯಿಂದ ತುಂಬಿ ತುಳುಕುತ್ತಿರುವ ದೇವಾಲಯಗಳ ಹುಂಡಿಗಳು: ಯಾವ ದೇವಾಲಯಕ್ಕೆ ಆದಾಯವೆಷ್ಟು ನೋಡಿ.
ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಹೆಚ್ಚಾಗಬೇಕಿದೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ರೋಗಿಗಳಾಗಿ ಚಿಕಿತ್ಸೆಗೆಂದು ಅಡ್ಮಿಟ್ ಆಗುವವರ ಜೊತೆ ಶುಶ್ರೂಷಕರಾಗಿ ಆಗಮಿಸುವವರಿಗೂ ಉಚಿತ ಊಟ, ವಸತಿಗಳ ವ್ಯವಸ್ಥೆ ಇದ್ದು ಸದ್ಯ ಜೊತೆಗೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ ಎಂಬುದು ಆಸ್ಪತ್ರೆಗಳಲ್ಲಿ ಕೇಳಿ ಬರುತ್ತಿರುವ ದೂರುಗಳು. ಸಾಕಷ್ಟು ಆಸ್ಪತ್ರೆಗಳಲ್ಲಿ ಇರುವ ಧರ್ಮಶಾಲೆಗಳು ಅಭಿವೃದ್ಧಿ ಕಾಣಬೇಕಾಗಿದೆ ಮತ್ತು ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಅನಿವಾರ್ಯತೆಯೂ ಬಂದೊದಗಿದೆ.