‘ಶಕ್ತಿ’ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗದ ಹಿನ್ನೆಲೆಯಲ್ಲಿ ಸೆ.11ರಂದು ಬೆಂಗಳೂರು ಸಾರಿಗೆ ಬಂದ್ ಮಾಡುವುದಾಗಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಘೋಷಿಸಿದೆ.
ಬೆಂಗಳೂರು (ಸೆ.02): ‘ಶಕ್ತಿ’ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗದ ಹಿನ್ನೆಲೆಯಲ್ಲಿ ಸೆ.11ರಂದು ಬೆಂಗಳೂರು ಸಾರಿಗೆ ಬಂದ್ ಮಾಡುವುದಾಗಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಘೋಷಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರಾಜ್ಯ ಬಸ್ ಮಾಲಿಕರ ಸಂಘದ ಅಧ್ಯಕ್ಷ ಎಸ್.ನಟರಾಜ ಶರ್ಮಾ, ಶಕ್ತಿ ಯೋಜನೆ ಜಾರಿ ಹಾಗೂ ರಾಜ್ಯ ಸಾರಿಗೆ ಇಲಾಖೆಯ ಕೆಲ ನೀತಿಗಳಿಂದಾಗಿ ಖಾಸಗಿ ಸಾರಿಗೆ ಉದ್ಯಮಕ್ಕೆ ಭಾರೀ ನಷ್ಟವಾಗಿದೆ.
ಅದನ್ನು ನಿವಾರಿಸುವ ಸಲುವಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆ ಜುಲೈ ತಿಂಗಳಿನಿಂದಲೂ ಆಗ್ರಹಿಸಲಾಗುತ್ತಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, 32 ಸಾರಿಗೆ ಸಂಘಟನೆಗಳು ಸೇರಿ ರಚಿಸಿರುವ ಒಕ್ಕೂಟದೊಂದಿಗೆ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಜತೆಗೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುವುದಾಗಿಯೂ ತಿಳಿಸಿದ್ದರು. ಆದರೆ, ಅವರು ಕೊಟ್ಟಮಾತಿನಂತೆ ನಡೆದುಕೊಂಡಿಲ್ಲ. ಹೀಗಾಗಿ ಸೆ.11ರಂದು ಬೆಂಗಳೂರಿನಲ್ಲಿ ಸಾರಿಗೆ ಬಂದ್ ಮಾಡಲಾಗುವುದು ಎಂದು ತಿಳಿಸಿದರು.
ನಾರಾಯಣ ಗುರುಗಳಂತಹರಿಂದಾಗಿ ನಮ್ಮ ಸಂಸ್ಕಾರಗಳು ಉಳಿದಿವೆ: ಶೋಭಾ ಕರಂದ್ಲಾಜೆ
ರಸ್ತೆ ತಡೆ, ವಾಹನ ಪ್ರವೇಶಕ್ಕೆ ಪ್ರತಿರೋಧ: ಸೆ. 10ರ ಮಧ್ಯರಾತ್ರಿ 12ರಿಂದ ಸೆ. 11ರ ಮಧ್ಯರಾತ್ರಿ 12ರವರೆಗೆ ಖಾಸಗಿ ಬಸ್, ಆಟೋ, ಮ್ಯಾಕ್ಸಿ ಕ್ಯಾಬ್, ಸರಕು ಸಾಗಣೆ ವಾಹನಗಳು ಸೇರಿದಂತೆ ಮತ್ತಿತರ ವಾಹನಗಳು ರಸ್ತೆಗಿಳಿಯುವುದಿಲ್ಲ. ಅದರ ಜತೆಗೆ ಬೆಂಗಳೂರು ಸಂಪರ್ಕಿಸುವ ನೆಲಮಂಗಲ, ಎಲೆಕ್ಟ್ರಾನಿಕ್ ಸಿಟಿ ರಸ್ತೆ, ಮೈಸೂರು ರಸ್ತೆ, ಕೆ.ಆರ್.ಪುರ ರಸ್ತೆಗಳನ್ನು ತಡೆದು ಪ್ರತಿಭಟಿಸಲಾಗುವುದು. ಈ ವೇಳೆ ಖಾಸಗಿ ಸಾರಿಗೆ ವಾಹನಗಳ ಬೆಂಗಳೂರು ಪ್ರವೇಶಕ್ಕೆ ತಡೆಯೊಡ್ಡಲಾಗುವುದು. ಈ ವೇಳೆ ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ನಟರಾಜ ಶರ್ಮಾ ಎಚ್ಚರಿಕೆ ನೀಡಿದರು.
ಬಂದ್ ಸಂದರ್ಭದಲ್ಲಿ ಸರ್ಕಾರಿ ಬಸ್ ಸೇರಿದಂತೆ ಇತರ ವಾಹನಗಳ ಓಡಾಟಕ್ಕೆ ಅಡ್ಡಿಪಡಿಸುವುದಿಲ್ಲ. ಅದರ ಜತೆಗೆ ಹಾಲು, ಪೇಪರ್ ಸಾಗಣೆ ವಾಹನಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳ ತಡೆಗೆ ಮುಂದಾಗುವುದಿಲ್ಲ. ಆದರೆ, ಉಳಿದಂತೆ ಖಾಸಗಿ ಸಾರಿಗೆ, ಗೂಡ್‌್ಸ ವಾಹನಗಳ ಓಡಾಟಕ್ಕೆ ತಡೆಯೊಡ್ಡಲಾಗುವುದು. ಹೀಗಾಗಿ ಖಾಸಗಿ ಬಸ್‌ಗಳು ಭಾನುವಾರ ನಗರ ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದು ಎಲ್ಲ ಬಸ್ ಮಾಲಿಕರಿಗೆ ಒಕ್ಕೂಟದಿಂದ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಲಿಖಿತ ಆದೇಶ ನೀಡಿದರಷ್ಟೆಬಂದ್ ವಾಪಸ್: ಸೆ.11ರಂದು ಬೆಳಗ್ಗೆ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಸಮಾವೇಶ ನಡೆಸಲಾಗುವುದು. ಅದರಲ್ಲಿ ಸಾವಿರಾರು ಸಂಖ್ಯೆಯ ವಾಹನ ಮಾಲಿಕರು, ಚಾಲಕರು, ನಿರ್ವಾಹಕರು ಪಾಲ್ಗೊಳ್ಳಲಿದ್ದು, ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುವುದು. ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸಭೆ ನಡೆಸಿದರೆ ಅದರಲ್ಲಿ ಒಕ್ಕೂಟದ ಯಾವೊಂದು ಸಂಘಟನೆಯೂ ಭಾಗವಹಿಸುವುದಿಲ್ಲ. ಬದಲಿಗೆ ಬೇಡಿಕೆ ಈಡೇರಿಕೆ ಕುರಿತಂತೆ ಲಿಖಿತ ಆದೇಶ ಮಾಡಿದರಷ್ಟೇ ಬಂದ್ ಹಿಂಪಡೆಯುವ ಬಗ್ಗೆ ಯೋಚಿಸಲಾಗುವುದು. ಒಂದು ವೇಳೆ ಬೆಂಗಳೂರು ಬಂದ್‌ಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಮುಂದೆ ಜಿಲ್ಲಾ ಬಂದ್ ಮಾಡಲಾಗುವುದು ಎಂದು ನಟರಾಜ ಶರ್ಮಾ ತಿಳಿಸಿದರು. ವಿವಿಧ ಸಾರಿಗೆ ಸಂಘಟನೆಗಳ ಪ್ರಮುಖರಾದ ಜಿ.ನಾರಾಯಣಸ್ವಾಮಿ, ರಘು ನಾರಾಯಣಗೌಡ, ಗಂಡಸಿ ಸದಾನಂದ ಸ್ವಾಮಿ, ಜಯಣ್ಣ, ಬಿ.ಚಂದ್ರಶೇಖರ್ ಇತರರಿದ್ದರು.
ನಮೋ ನಮಃ ನವ ಮಂತ್ರಾಲಯ ಸುಕ್ಷೇತ್ರ: ಶುರುವಾಗಿದೆ ಪರಿವರ್ತನೆ ಪರ್ವ
ಸಾರಿಗೆ ಇಲಾಖೆಯಿಂದ ಭ್ರಷ್ಟಾಚಾರ, ಆರೋಪ: ನಿಯಮ ಬಾಹಿರವಾಗಿ ಸೇವೆ ನೀಡುತ್ತಿರುವ ರಾರಯಪಿಡೋ ಬೈಕ್ ಟ್ಯಾಕ್ಸಿ ರದ್ದು ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ರಾರಯಪಿಡೋ ಸಂಸ್ಥೆಯಿಂದ ಲಂಚ ಪಡೆದು ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವಂತೆ ಮಾಡಿದ್ದಾರೆ. ಅದರಲ್ಲೂ ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತ ಹೇಮಂತ್ ಕುಮಾರ್ ಅವರು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಸಾರಿಗೆ ಸಚಿವರು ಹಾಗೂ ಇಲಾಖೆ ಆಯುಕ್ತರ ದಾರಿ ತಪ್ಪಿಸುವ ಕೆಲಸವನ್ನೂ ಹೇಮಂತ್ ಮಾಡುತ್ತಿದ್ದಾರೆ ಎಂದು ನಟರಾಜ ಶರ್ಮಾ ಆರೋಪಿಸಿದರು.
