ನಾರಾಯಣ ಗುರುಗಳಂತಹರಿಂದಾಗಿ ನಮ್ಮ ಸಂಸ್ಕಾರಗಳು ಉಳಿದಿವೆ: ಶೋಭಾ ಕರಂದ್ಲಾಜೆ
ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಶಿವಶರಣ ನುಲಿಯ ಚಂದಯ್ಯ ರವರ ಆದರ್ಶಗಳು ಮತ್ತು ತತ್ತ್ವ ಸಿದ್ಧಾಂತಗಳನ್ನು ಎಲ್ಲಾ ಸಮುದಾಯದ ಜನರು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕರೆ ನೀಡಿದರು.
ಚಿಕ್ಕಮಗಳೂರು (ಸೆ.02): ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಶಿವಶರಣ ನುಲಿಯ ಚಂದಯ್ಯ ರವರ ಆದರ್ಶಗಳು ಮತ್ತು ತತ್ತ್ವ ಸಿದ್ಧಾಂತಗಳನ್ನು ಎಲ್ಲಾ ಸಮುದಾಯದ ಜನರು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಕರೆ ನೀಡಿದರು. ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶಿವಶರಣ ನುಲಿಯ ಚಂದಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಹುಟ್ಟಿ ಬರದಿದ್ದಲ್ಲಿ ದಕ್ಷಿಣ ಭಾರತದಲ್ಲಿ ಕೆಳವರ್ಗದ ಜನ ಇಂದು ಗೌರವದಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ. ನುಲಿಯ ಚಂದಯ್ಯನವರು ಭಕ್ತಿ ಭಂಡಾರಿ ಬಸವಣ್ಣನವರ ಕಾಯಕವೇ ಕೈಲಾಸ ತತ್ತ್ವದಡಿಯಲ್ಲಿ ಬಾಳಿದವರು. ಬಸವಣ್ಣ, ನುಲಿಯ ಚಂದಯ್ಯ ಮತ್ತು ನಾರಾಯಣ ಗುರುಗಳಂತಹ ಮಹಾತ್ಮರಿಂದಾಗಿ ನಮ್ಮ ಸಂಸ್ಕಾರಗಳು ಉಳಿದಿವೆ ಎಂದು ತಿಳಿಸಿದರು.
ದತ್ತಪೀಠವನ್ನ ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪ: ಶೋಭಾ ಕರಂದ್ಲಾಜೆ
ಸಮಾಜದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದಂತಹ ಸಂದರ್ಭದಲ್ಲಿ ಕೆಳವರ್ಗದ ಜನರಿಗೆ ದೇವಾಲಯ ಪ್ರವೇಶವಿಲ್ಲ ದಂತಹ ಕಾಲದಲ್ಲಿ ನಾರಾಯಣ ಗುರುಗಳು ಐವತ್ತಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದರು. ಮಾನವತ್ವದಿಂದ ದೈವತ್ವದೆಡೆಗೆ ಹೋಗಬಹುದು ಎನ್ನುವುದಕ್ಕೆ ನಾರಾಯಣ ಗುರುಗಳು ಮತ್ತು ನುಲಿಯ ಚಂದಯ್ಯನವರು ಉದಾಹರಣೆಯಾಗಿದ್ದಾರೆ. ಬಸವಣ್ಣನವರು, ನಾರಾಯಣ ಗುರುಗಳು ಮತ್ತು ನುಲಿಯ ಚಂದಯ್ಯನವರು ಕನಕದಾಸರಂತಹ ಮಹಾತ್ಮರ ಜಯಂತಿಯನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕು ಅವರ ತತ್ತ್ವ ಸಿದ್ಧಾಂತಗಳಡಿ ಸಾಗಬೇಕು ಎಂದು ಹೇಳಿದರು. ಸಮಾಜದ ಎಲ್ಲಾ ಜತಿಗಳ ಜನರೂ ಒಗ್ಗೂಡಿ ಬದುಕಿದಾಗ ಮಾತ್ರ ಮಹನೀಯರ ಆತ್ಮಕ್ಕೆ ತೃಪ್ತಿ ಸಿಗುತ್ತದೆ ಎಂದು ತಿಳಿಸಿದರು.
ಸಾಮಾಜಿಕ ಚಿಂತಕ ಎಸ್. ವಿಜಯಕುಮಾರ್ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು, ಸಾಹಿತಿ ಬಿ. ತಿಪ್ಪೇರುದ್ರಪ್ಪ ನುಲಿಯ ಚಂದಯ್ಯನವರ ಕುರಿತು ಉಪನ್ಯಾಸ ನೀಡಿದರು. ಶಾಸಕ ಎಚ್.ಡಿ. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಹಾಗೂ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
ದತ್ತಪೀಠದಲ್ಲಿನ ಬೇಲಿಗಳು ನಿವಾರಣೆ ಆಗಬೇಕು: ದತ್ತಪೀಠದ ಎಲ್ಲ ಬೇಲಿಗಳು ನಿವಾರಣೆಯಾಗಬೇಕು, ಅದು ನಮ್ಮ ಅಪೇಕ್ಷೆ, ಆಸೆಯಾಗಿದೆ. ದತ್ತಪೀಠವನ್ನು ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಹುಣ್ಣಿಮೆ ಪೂಜೆಯ ಅಂಗವಾಗಿ ತಾಲೂಕಿನ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಆಯೋಜಿಸಿದ್ದ ಹೋಮದಲ್ಲಿ ಭಾಗವಹಿಸಿ, ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ದತ್ತ ಪಾದುಕೆಯ ದರ್ಶನ ಪಡೆದರು.
ಲೋಕಸಭಾ ಚುನಾವಣೆ ಮತ ಪಟ್ಟಿ ಪರಿಷ್ಕರಣೆಗೆ ಬಿಜೆಪಿ ಅಭಿಯಾನ: ಕೇಂದ್ರ ಸಚಿವೆ ಶೋಭಾ
ಬಳಿಕ ಮಾತನಾಡಿದ ಅವರು, ದತ್ತ ಪೀಠದಲ್ಲಿಂದು ಹುಣ್ಣಿಮೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆದಿದೆ. ದತ್ತ ಪಾದುಕೆಯನ್ನು ಆರಾಧನೆ ಮಾಡಿ ಎಲ್ಲರಿಗೂ ತುಂಬಾ ಖುಷಿಯಾಗಿದೆ. ದತ್ತಾತ್ರೇಯರಿಗೆ ತ್ರಿಕಾಲ ಪೂಜೆಯಾಗಬೇಕು ಇದು ನಮ್ಮ ಅಪೇಕ್ಷೆಯಾಗಿದೆ ಎಂದರು. ನಮ್ಮೆಲ್ಲ ಕಾರ್ಯಕರ್ತರ ಹೋರಾಟ, ದತ್ತಪೀಠಕ್ಕಾಗಿ ಹಲವಾರು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ಯಶಸ್ಸು ಸಿಕ್ಕಿದೆ. ಆದರೂ, ಕೆಲವು ಬೇಲಿಗಳಿವೆ, ಆ ಎಲ್ಲ ಬೇಲಿಗಳಿಂದ ಹೊರಬಂದು, ಎಲ್ಲ ಸಮಸ್ಯೆಗಳೂ ನಿವಾರಣೆಯಾಗಬೇಕು ಎನ್ನುವ ಆಸೆಯಿದೆ. ದತ್ತಪೀಠ ನಮ್ಮದು, ದತ್ತಪೀಠ ಬೇಲಿ ರಹಿತವಾಗಬೇಕೆಂಬುದು ನಮ್ಮ ಸಂಕಲ್ಪವಾಗಿದೆ. ಈ ಸಂಕಲ್ಪ ಆದಷ್ಟು ಬೇಗ ಈಡೇರಲಿ ಎಂದು ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.