ಬೆಂಗಳೂರು(ಮಾ.26): ಹದಿನೈದು ದಿನಗಳ ಸತತ ಕಾರ್ಯಾಚರಣೆ ಬಳಿಕ ಕೊನೆಗೂ ಮಾಜಿ ಸಚಿವರ ಸಿ.ಡಿ. ಪ್ರಕರಣದ ಅಸಲಿ ಅಥವಾ ಮೂಲ ವಿಡಿಯೋ ಪತ್ತೆ ಹಚ್ಚುವಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ಯಶಸ್ಸು ಕಂಡಿದ್ದು, ಯುವತಿಯ ವ್ಯಾನಿಟಿ ಬ್ಯಾಗ್‌ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಯೇ ಖಾಸಗಿ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.

ಇದರೊಂದಿಗೆ ಲೈಂಗಿಕ ವಿವಾದದ ತನಿಖೆಗೆ ಮಹತ್ವದ ತಿರುವು ಸಿಕ್ಕಂತಾಗಿದ್ದು, ಯುವತಿಯ ಪರಿಚಯವೇ ಇಲ್ಲ ಎನ್ನುತ್ತಿದ್ದ ಮಾಜಿ ಸಚಿವರಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾದಂತಾಗಿದೆ.

ಈ ಅಸಲಿ ವಿಡಿಯೋದಲ್ಲಿ ಬೆಂಗಳೂರಿನ ಐಷಾರಾಮಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಮಾಜಿ ಸಚಿವರೊಂದಿಗೆ ವಿವಾದಿತ ಯುವತಿ ಕಳೆದಿದ್ದಾಳೆ ಎನ್ನಲಾದ ಖಾಸಗಿ ಕ್ಷಣಗಳು ಪತ್ತೆಯಾಗಿವೆ. ಅಲ್ಲದೆ ಸಿ.ಡಿ. ಸ್ಫೋಟ ತಂಡದ ಪ್ರಮುಖ ಸೂತ್ರಧಾರ ಎನ್ನಲಾದ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತ ಶ್ರವಣ್‌ ಜತೆ ಯುವತಿಯ ಸಂಭಾಷಣೆ ತುಣುಕು ಕೂಡ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಯೋಜಿತವಾಗಿ ಮಾಜಿ ಸಚಿವರೊಂದಿಗೆ ಸಲುಗೆ ಬೆಳೆಸಿ ಬಳಿಕ ಅವರನ್ನು ಶಂಕಿತ ಆರೋಪಿಗಳು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿರಬಹುದು ಎಂಬ ಶಂಕೆಯನ್ನು ಎಸ್‌ಐಟಿ ವ್ಯಕ್ತಪಡಿಸಿದೆ. ಈ ಅಸಲಿ ವಿಡಿಯೋವನ್ನು ಸಾಚಾತನದ ಪರೀಕ್ಷೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಅಧಿಕಾರಿಗಳು ಕಳುಹಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಖಾಸಗಿ ಜಾಹೀರಾತು ಸಂಸ್ಥೆಯೊಂದರ ಮೇಲೆ ಎಸ್‌ಐಟಿ ನಡೆಸಿದ ದಾಳಿ ವೇಳೆ ಲಭ್ಯವಾದ ಪೆನ್‌ಡ್ರೈವ್‌, ಲ್ಯಾಪ್‌ಟಾಪ್‌ಗಳು, ಹಾರ್ಡ್‌ ಡಿಸ್ಕ್‌ ಜಾಲಾಡಿದಾಗ ಅಸಲಿ ವಿಡಿಯೋ ಎಸ್‌ಐಟಿಗೆ ಸಿಕ್ಕಿದೆ ಎಂದು ಮೂಲಗಳು ಹೇಳಿವೆ. ಆದರೆ, ಎಸ್‌ಐಟಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

ಅಸಲಿ ವಿಡಿಯೋ ಬೆನ್ನತ್ತಿದ್ದ ಎಸ್‌ಐಟಿ:

ಮಾ.2ರಂದು ಮಾಜಿ ಸಚಿವರಿಗೆ ಸಂಬಂಧಿಸಿದೆ ಎನ್ನಲಾದ ಸಿ.ಡಿ. ಕುರಿತಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಸಿ.ಡಿ. ಸಮೇತ ದೂರು ನೀಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಮಾಜಿ ಸಚಿವರಿಗೆ ಸೇರಿದ್ದು ಎನ್ನಲಾದ ಐದಾರು ನಿಮಿಷದ ಲೈಂಗಿಕತೆಗೆ ಸಂಬಂಧಿಸಿದ ಎರಡು ವಿಡಿಯೋಗಳು ವೈರಲ್‌ ಆಗಿದ್ದವು.

ಇದರಲ್ಲಿ ಮುಖ ಮರೆಮಾಚಲಾಗಿದ್ದ ಯುವತಿ ಜತೆ ಮಾಜಿ ಸಚಿವರ ರಾಜಕಾರಣದ ಮಾತುಕತೆಯೂ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಆದರೆ ಈ ವಿಡಿಯೋ ಬಹಿರಂಗ ಬೆನ್ನಲ್ಲೇ ಸಚಿವ ಸ್ಥಾನ ತೊರೆದ ಅವರು, ನನ್ನ ರಾಜಕೀಯ ಏಳಿಗೆ ಸಹಿಸಲಾರದೆ ಷಡ್ಯಂತ್ರ ರೂಪಿಸಲಾಗಿದೆ. ಅದೊಂದು ನಕಲಿ ಸಿ.ಡಿ. ಆಗಿದ್ದು, ನಾನು ತಪ್ಪು ಮಾಡಿಲ್ಲ ಎಂದಿದ್ದರು. ಬಳಿಕ ಎರಡು ಬಾರಿ ಎಸ್‌ಐಟಿ ವಿಚಾರಣೆಯಲ್ಲಿ ಕೂಡ ನಕಲಿ ಸಿ.ಡಿ. ಎಂದೇ ಅವರು ಹೇಳಿಕೆ ಕೊಟ್ಟಿದ್ದರು.

ಇತ್ತ ಮಾಜಿ ಸಚಿವರ ಲೈಂಗಿಕ ಹಗರಣದ ತನಿಖೆ ಆರಂಭಿಸಿದ ಎಸ್‌ಐಟಿ ಅಧಿಕಾರಿಗಳು, ಅಸಲಿ ವಿಡಿಯೋ ಪತ್ತೆಗೆ ಸಿ.ಡಿ. ಪ್ರಕರಣದಲ್ಲಿ ಹೆಸರು ಪ್ರಸ್ತಾಪವಾಗಿರುವ ಪತ್ರಕರ್ತರು, ಗ್ರಾನೈಟ್‌ ಉದ್ಯಮಿ ಮನೆ, ವಿವಾದಿತ ಯುವತಿ ಕೊಠಡಿ ಹಾಗೂ ಆಕೆಯ ಸ್ನೇಹಿತರ ಮನೆಗಳ ಮೇಲೆ ದಾಳಿ ನಡೆಸಿ ಜಾಲಾಡಿದ್ದರು. ಅಲ್ಲದೆ, ಶೇಷಾದ್ರಿಪುರದಲ್ಲಿರುವ ಖಾಸಗಿ ಜಾಹೀರಾತು ಸಂಸ್ಥೆಯೊಂದರ ಮೇಲೂ ಎಸ್‌ಐಟಿ ದಾಳಿ ನಡೆದಿತ್ತು.

ಅಪಾರ್ಟ್‌ಮೆಂಟ್‌ನಲ್ಲಿ ಖಾಸಗಿ ಕ್ಷಣಗಳು:

ಬೆಂಗಳೂರು ನಗರದ ಉತ್ತರ ದಿಕ್ಕಿನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ವಿವಾದಿತ ಯುವತಿಯೊಂದಿಗೆ ಮಾಜಿ ಸಚಿವರು ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಆ ವೇಳೆ ವ್ಯಾನಿಟಿ ಬ್ಯಾಗ್‌ನಲ್ಲಿ ಆಕೆ ರಹಸ್ಯ ಕ್ಯಾಮೆರಾ ಇಟ್ಟು, ಚಿತ್ರೀಕರಿಸಿಕೊಂಡಿದ್ದಳು. ಈ ವೇಳೆ ಅಪಾರ್ಟ್‌ಮೆಂಟ್‌ ಹತ್ತಿರದಲ್ಲೇ ಪತ್ರಕರ್ತ ಶ್ರವಣ್‌ ಇದ್ದ ಎನ್ನಲಾಗಿದೆ. ಈ ಭೇಟಿ ಬಳಿಕ ಫ್ಲ್ಯಾಟ್‌ನಿಂದ ಹೊರಬಂದ ಯುವತಿ, ತಕ್ಷಣವೇ ಶ್ರವಣ್‌ಗೆ ಅಂದುಕೊಂಡಂತೆ ಕೆಲಸ ಮುಗಿದಿದೆ ಎಂದು ಹೇಳಿ ಕ್ಯಾಮೆರಾವನ್ನು ಹಸ್ತಾಂತರಿಸಿದ್ದ ವಿಡಿಯೋ ದೃಶ್ಯಾವಳಿಗಳು ಪತ್ತೆಯಾಗಿವೆ ಎನ್ನಲಾಗಿದೆ.