ಲೋಕ ಅದಾಲತ್‌ನಲ್ಲಿ 34 ಸಾವಿರ ಪ್ರಕರಣಗಳ ಇತ್ಯರ್ಥ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೆಶನದ ಮೇರೆಗೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ನ.12ರಂದು ನಡೆದ ಲೋಕ ಅದಾಲತ್‌ನಲ್ಲಿ ಬರೋಬ್ಬರಿ 34,320 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
ಉಡುಪಿ (ನ.13) : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ನ.12ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಆಯೋಜಿಸಲಾಗಿತ್ತು. ಒಂದೇ ದಿನದಲ್ಲಿ ಬರೋಬ್ಬರಿ 34,320 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇವುಗಳಲ್ಲಿ ಒಂದೇ ಕುಟುಂಬದ ಎರಡು ನ್ಯಾಯಾಲಯ ಪ್ರಕರಣ, 13 ವರ್ಷಗಳ ನಂತರ ಒಂದಾದ ದಂಪತಿ ಹೀಗೆ ಹಲವು ವಿಶೇಷ ಪ್ರಕರಣಗಳ ಇತ್ಯರ್ಥಕ್ಕೆ ಲೋಕ ಅದಾಲತ್ ಸಾಕ್ಷಿಯಾಗಿದೆ. ಇನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದ ಪ್ರಕರಣಗಳಲ್ಲಿ 12,34,77,966 ರುಪಾಯಿ ಪರಿಹಾರದ ಮೊತ್ತವನ್ನು ಕೂಡ ಘೋಷಿಸಲಾಯಿತು.
ಲೋಕ ಅದಾಲತ್ (Lok adalat) ಮೂಲಕ ಇತ್ಯರ್ಥವಾದ ಪ್ರಕರಣಗಳಲ್ಲಿ ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ -29, ಚೆಕ್ಕು ಅಮಾನ್ಯ ಪ್ರಕರಣ (check Bounce Case) -268, ಬ್ಯಾಂಕ್ ಅಥವಾ ಹಣ ವಸೂಲಾತಿ ಪ್ರಕರಣ-21, ಮೋಟಾರು ವಾಹನ ಹಕ್ಕುಗಳು ಪ್ರಕರಣ- 86, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ-1 ಸೇರಿವೆ. ಜೊತೆಗೆ ಎಂ.ಎಂ.ಆರ್.ಡಿ ಕಾಯ್ದೆ ಪ್ರಕರಣ-15, ವೈವಾಹಿಕ ಪ್ರಕರಣ-1, ಸಿವಿಲ್ ಪ್ರಕರಣ -174, ಇತರೆ ಕ್ರಿಮಿನಲ್ ಪ್ರಕರಣ-2,538 ಹಾಗೂ ವ್ಯಾಜ್ಯ ಪೂರ್ವ ದಾವೆ-31,187 ಪ್ರಕರಣಗಳು ಇತ್ಯರ್ಥಗೊಂಡಿವೆ. ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಕೀಲರ ಸಂಘಗಳು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ (Revenuve) ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರ್ಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್ ಅನ್ನು ಯಶಸ್ವಿಗೊಳಿಸಲಾಯಿತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ತಿಳಿಸಿದ್ದಾರೆ.
ವಿಚ್ಚೇದನ ಪಡೆದಿದ್ದ ದಂಪತಿಗಳನ್ನು ಒಂದು ಮಾಡಿದ ಲೋಕ ಅದಾಲತ್
ಒಂದೇ ಕುಟುಂಬದ 2 ಪ್ರಕರಣ ಸುಖಾಂತ್ಯ:
ಜಿಲ್ಲಾ ಕೇಂದ್ರದ 4ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಪ್ರಥಮ ದರ್ಜೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (ಜೆಎಂಎಫ್‌ಸಿ) ಮುಂದಿದ್ದ 2018 ಮತ್ತು 2022ರಲ್ಲಿ ಒಂದೇ ಕುಟುಂಬಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳು ದಾಖಲಾಗಿದ್ದವು. ಎರಡೂ ದಾವೆಗಳನ್ನು ಲೋಕ್ ಅದಾಲತ್ ಕಲಾಪದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ಟೀನಾ ಪಿಂಟೋ (Tina Pinto) ತನ್ನ ತಾಯಿ, ಸಹೋದರ ಮತ್ತು ಸಹೋದರಿ ಭೌತಿಕವಾಗಿ ಹಾಜರಾಗಿ ರಾಜಿ ಪತ್ರ ಸಲ್ಲಿಸಿ, ದಾವೆಯನ್ನು ರಾಜಿ ಮಾಡಿಕೊಂಡಿರುತ್ತಾರೆ. ಮತ್ತೊಂದೆಡೆ ದುಬೈನಲ್ಲಿರುವ ಸಹೋದರಿ ಆನ್‌ಲೈನ್ ಮೂಲಕ ವರ್ಚುವಲ್ ಮೋಡ್‌ನಲ್ಲಿ (Virtual Mode) ಹಾಜರಾಗಿ ರಾಜಿ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಹಾಗಾಗಿ ಒಂದೇ ಕುಟುಂಬದ ಎರಡು ದಾವೆಗಳು ಲೋಕ ಅದಾಲತ್‌ನಲ್ಲಿ ಸುಖಾಂತ್ಯ ಕಂಡಿವೆ.
13 ವರ್ಷದ ಬಳಿಕ ಒಂದಾದ ದಂಪತಿ:
ಕಳೆದ 13 ವರ್ಷಗಳಿಂದ ಬೇರ್ಪಟ್ಟಿದ್ದ ದಂಪತಿ (Couple) ಪರಸ್ಪರ ಜತೆಗಿರುವುದಾಗಿ ಒಪ್ಪಿಕೊಂಡು ಒಂದಾದ ಘಟನೆ ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ(Family Court) ನಡೆದಿದೆ. ಬ್ರಹ್ಮಾರದ (Brahmavara) ಯುವಕ ಮಂಗಳೂರಿನ ಯುವತಿಯನ್ನು ಮಂಗಳೂರಿನಲ್ಲಿ ಮದುವೆಯಾಗಿ ಅನಂತರ ಬ್ರಹ್ಮಾವರದಲ್ಲಿ ನೆಲೆಸಿದ್ದರು. ವಿದೇಶದಲ್ಲಿ (Abroad) ಉದ್ಯೋಗದಲ್ಲಿದ್ದ ಪತಿ 2 ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದರು. ಇವರಿಗೆ 18 ವರ್ಷದ ಮಗಳಿದ್ದು ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಆದರೆ ಪತಿಯು ತನ್ನ ಹಾಗೂ ಮಗಳ ಮೇಲೆ ಪ್ರೀತಿ ತೋರಿಸುತ್ತಿಲ್ಲವೆಂದು 13 ವರ್ಷಗಳಿಂದ ಪತ್ನಿ ಪ್ರತ್ಯೇಕವಾಗಿ ವಾಸುಸುತ್ತಿದ್ದರು. ಇವರ ನಡುವೆ ಕುಟುಂಬ ಸದಸ್ಯರು ರಾಜಿ (Compromise) ನಡೆಸುವ ಅನೇಕ ಪ್ರಯತ್ನಗಳು ವಿಫಲವಾಗಿದ್ದವು. ಈ ಬಾರಿ ಪತಿ ಊರಿಗೆ ಬಂದಾಗ ಕೌಟುಂಬಿಕ ನ್ಯಾಯಾಲಯದಲ್ಲಿ ತನಗೂ ಹಾಗೂ ಮಗಳಿಗೂ ಜೀವನಾಂಶ ನೀಡಬೇಕೆಂದು ಪತ್ನಿ ಅರ್ಜಿ ಸಲ್ಲಿಸಿದ್ದರು.
ದಾಖಲೆಯ 8.34 ಲಕ್ಷ ಕೇಸ್ ರಾಜಿಯಲ್ಲಿ ಇತ್ಯರ್ಥ
ರಾಜಿ ಮಾಡಿಸಿದ ನ್ಯಾಯಮೂರ್ತಿಗಳು:
ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣವನ್ನು ಸಂದಾನ ಕೇಂದ್ರಕ್ಕೆ ರಾಜಿ ಇತ್ಯರ್ಥಕ್ಕಾಗಿ ಕಳುಹಿಸಲಾಗಿತ್ತು. ಸಂಧಾನಕಾರರಾಗಿ (negotiator) ನೇಮಕಗೊಂಡ ನ್ಯಾಯವಾದಿ ರೆನೋಲ್ಡ್ ಪ್ರವೀಣ್ ಕುಮಾರ್ (Renold Praveen Kumar), ನ್ಯಾಯವಾದಿಗಳು ಮತ್ತು ಕುಟುಂಬದ ಹಿರಿಯರನ್ನು ಕರೆಯಿಸಿ, ನಾಲ್ಕು ಬಾರಿ ಚರ್ಚಿಸಿ ಬೇರ್ಪಟ್ಟ ಕುಟುಂಬವನ್ನು ಒಂದಾಗಿಸಲು ಪ್ರಯತ್ನಿಸಿದ್ದರು. ಬಳಿಕ ನ್ಯಾಯಾಧೀಶರು ಈ ರೀತಿ ಪ್ರತ್ಯೇಕವಾಗಿ ಇರುವುದು ಸಮಂಜಸವಲ್ಲ ಮಗಳ ಭವಿಷ್ಯದ ಬಗ್ಗೆ ಆಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ತಿಳಿ ಹೇಳಿದರು. ಕ್ಷುಲಕ (trivial) ಕಾರಣಕ್ಕೆ ಬೇರ್ಪಟ್ಟ ವಿಚಾರ ದಂಪತಿಗಳಿಗೆ ಮನದಟ್ಟಾಗಿ ಅಂತಿಮವಾಗಿ ಮಗಳೊಂದಿಗೆ ಜೀವನ ನಡೆಸಲು ಒಪ್ಪಿದ್ದಾರೆ.