Asianet Suvarna News Asianet Suvarna News

ದಾಖಲೆಯ 8.34 ಲಕ್ಷ ಕೇಸ್‌ ರಾಜಿಯಲ್ಲಿ ಇತ್ಯರ್ಥ

ರಾಜ್ಯಾದ್ಯಂತ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ದಾಖಲೆಯ ಒಟ್ಟು 8.34 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ 

Record 8.34 Lakh Cases Settled in Compromise in Karnataka grg
Author
Bengaluru, First Published Aug 16, 2022, 6:48 AM IST

ಬೆಂಗಳೂರು(ಆ.16):  ರಾಜ್ಯಾದ್ಯಂತ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ದಾಖಲೆಯ ಒಟ್ಟು 8.34 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯಕಾರಿ ಅಧ್ಯಕ್ಷರೂ ಆದ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.13ರಂದು (ಶನಿವಾರ) ರಾಜ್ಯಾದ್ಯಂತ ಒಟ್ಟು 1009 ಬೈಠಕ್‌ಗಳನ್ನು ನಡೆಸಿ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿದ್ದ 1,53,024 ಮತ್ತು ವ್ಯಾಜ್ಯಪೂರ್ವ 6,81,596 ಪ್ರಕರಣ ಸೇರಿದಂತೆ ಒಟ್ಟು 8,34,620 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಲಾಗಿದೆ. ವಿಶೇಷವಾಗಿ 1,380 ವೈವಾಹಿಕ ವಿವಾದ ಪ್ರಕರಣಗಳನ್ನು ಇತ್ಯರ್ಥಪಡಿಸಿ, 120 ಜೋಡಿಗಳನ್ನು ಒಂದು ಮಾಡಲಾಗಿದೆ. ಮೈಸೂರಿನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ 27 ದಂಪತಿ ಹಾಗೂ ಬೆಂಗಳೂರಿನ 12 ದಂಪತಿಯನ್ನು ಒಂದುಗೂಡಿಸಲಾಗಿದೆ ಎಂದು ವಿವರಿಸಿದರು.

ಕಂದಾಯ ವಿಭಾಗದಲ್ಲಿ ಖಾತೆ ಬದಲಾವಣೆ, ಗುರುತಿನ ಚೀಟಿ ವಿತರಣೆ ಹಾಗೂ ಪಿಂಚಣಿ ಇತ್ಯಾದಿ 94,446 ದಾವೆ ಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಬ್ಯಾಂಕ್‌ ಸಾಲಕ್ಕೆ ಸಂಬಂಧಿಸಿದ 8,571 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿ, ಒಟ್ಟು 25,08,33,360 ರು. ವಸೂಲಿ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

National lok adalat: ಒಂದೇ ದಿನದಲ್ಲಿ  20,444  ಪ್ರಕರಣ ಇತ್ಯರ್ಥ!

95,756 ವಿದ್ಯುತ್‌ ಬಿಲ್‌ ಬಾಕಿ ಪ್ರಕರಣ ಇತ್ಯರ್ಥಪಡಿಸಿ, 13,58,15,559 ರು. ಮತ್ತು 78,716 ನೀರಿನ ಬಿಲ್‌ ಬಾಕಿ ಪ್ರಕರಣ ವಿಲೇವಾರಿ ಮಾಡಿ 13,86,19,435 ಕೋಟಿ ರು. ಸಂಗ್ರಹಿಸಿ ಕೊಡಲಾಗಿದೆ. ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ ಮತ್ತು ರಿಯಲ್‌ ಎಸ್ಟೇಟ್‌ ಮೇಲ್ಮನವಿ ನ್ಯಾಯ ಮಂಡಳಿಯಲ್ಲಿ ಬಾಕಿಯಿದ್ದ 80 ಪ್ರಕರಣ ವಿಲೇವಾರಿ ಮಾಡಿ 48,40,000 ರು. ಪರಿಹಾರ ಪಾವತಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಮಾಹಿತಿ ಹಕ್ಕು ಆಯೋಗದಲ್ಲಿನ 77 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಗ್ರಾಹಕರ ಆಯೋಗದಲ್ಲಿ ಬಾಕಿ ಇದ್ದ 136 ಪ್ರಕರಣ ಇತ್ಯರ್ಥಪಡಿಸಿ ಒಟ್ಟು 3,01,34,406 ರು. ಪಾವತಿಸಲು ನಿರ್ದೇಶಿಸಲಾಗಿದೆ. ರಾಜ್ಯದಲ್ಲಿನ ಸಿವಿಲ್‌ ನ್ಯಾಯಾಲಯಗಳು ಒಟ್ಟು 7,670  ಪ್ರಕರಣಗಳನ್ನು ರಾಜಿ ಮೂಲಕ ಮುಕ್ತಾಯ ಮಾಡಿವೆ. 2,967 ಮೋಟಾರು ವಾಹನ ಕ್ಲೇಮು ಪ್ರಕರಣ ಬಗೆಹರಿಸಿ, 125,47,35,879 ರು. ಪರಿಹಾರ ಕೊಡಿಸಲಾಗಿದೆ. ಎನ್‌ಐ ಕಾಯ್ದೆಗೆ ಸಂಬಂಧಿಸಿದ 7,178 ಪ್ರಕರಣ ಇತ್ಯರ್ಥಪಡಿಸಿ 266,75,12,358 ರು. ಪರಿಹಾರ ಕೊಡಿಸಲಾಗಿದೆ ಎಂದು ತಿಳಿಸಿದರು.

Davanagere; ವಿಚ್ಚೇದನ ಪಡೆದಿದ್ದ ದಂಪತಿಗಳನ್ನು ಒಂದು ಮಾಡಿದ ಲೋಕ ಅದಾಲತ್

ಅಪಪ್ರಚಾರ-ನ್ಯಾ. ಬೀರಪ್ಪ:

ಕೆಲವು ವಕೀಲರು, ನ್ಯಾಯಾಧೀಶರು ಮತ್ತು ಆರ್‌ಟಿಐ ಕಾರ್ಯಕರ್ತರು ಚಿಕ್ಕ ಮತ್ತು ಟ್ರಾಫಿಕ್‌ ಚಲನ್‌ ಕೇಸುಗಳನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಅವಕಾಶವಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಪ್ರಕರಣಗಳನ್ನು ಸಹ ಅದಾಲತ್‌ನಲ್ಲಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗುವುದು. ಒಂದು ಸಾವಿರ ಕೋಟಿ ರು. ದಂಡ ವಸೂಲಿಗೆ ಬಾಕಿಯಿರುವ 66 ಲಕ್ಷ ಟ್ರಾಫಿಕ್‌ ಚಲನ್‌ ಪ್ರಕರಣಗಳು (ಸಂಚಾರ ನಿಯಮ ಉಲ್ಲಂಘನೆ) ವಿಲೇವಾರಿಯಾಗದೆ ಹಾಗೆ ಉಳಿದಿದ್ದವು. ಟ್ರಾಫಿಕ್‌ ನಿಯಮ ಉಲ್ಲಂಘಿಸಿದ 2,46,890 ಪ್ರಕರಣ ಇತ್ಯರ್ಥಪಡಿಸಿ 14,35,10,566 ಕೋಟಿ ರು. ಸಂಗ್ರಹಿಸಿ ಕೊಡಲಾಗಿದೆ ಎಂದರು.

ಲೋಕ ಅದಾಲತ್‌ನಲ್ಲಿ ಯಾವ್ಯಾವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶವಿದೆ ಎಂಬ ಪಟ್ಟಿಯನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಬಿಡುಗಡೆ ಮಾಡಿದೆ. ಹಾಗಾಗಿ ಅಪಪ್ರಚಾರದಲ್ಲಿ ಭಾಗಿಯಾಗಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಜರುಗಿಸಲಾಗುವುದು. ಆ ಕುರಿತ ವರದಿಯನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
 

Follow Us:
Download App:
  • android
  • ios