Asianet Suvarna News Asianet Suvarna News

ಕೊರೋನಾ 3ನೇ ಅಲೆಗೂ ಮುನ್ನ ಸೆರೋ ಸರ್ವೇ?

*  ಮಕ್ಕಳು ಸೇರಿ ಎಲ್ಲಾ ವಯೋವರ್ಗ ಒಳಗೊಂಡ ಸರ್ವೇಗೆ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಪ್ರಸ್ತಾವನೆ
*  ಈವರೆಗೆ ಎಷ್ಟು ಮಂದಿಗೆ ಸೋಂಕು ತಗುಲಿದೆ ಎಂಬ ಅಧ್ಯಯನ
*  ಸದ್ಯದಲ್ಲೇ ನೂತನ ಕಾರ್ಯಪಡೆ ರಚನೆ
 

Sero Survey Before Corona 3rd Wave in Karnataka grg
Author
Bengaluru, First Published Aug 12, 2021, 7:11 AM IST
  • Facebook
  • Twitter
  • Whatsapp

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಆ.12): ರಾಜ್ಯದಲ್ಲಿ ಮೂರನೇ ಅಲೆ ಭೀತಿ ಆವರಿಸಿರುವ ಬೆನ್ನಲ್ಲೇ ಪೂರ್ವ ಸಿದ್ಧತೆಗೆ ಅನುವಾಗುವಂತೆ ರಾಜ್ಯಾದ್ಯಂತ 6-17 ವರ್ಷದ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ವಯಸ್ಕರಿಗೂ ಸೆರೋ ಸರ್ವೆ ನಡೆಸುವಂತೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ನೆರೆಯ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕು ತೀವ್ರಗೊಂಡಿದೆ. ರಾಜ್ಯದ ಗಡಿ ಜಿಲ್ಲೆಗಳಲ್ಲೂ ಸೋಂಕು ಹೆಚ್ಚಾಗುತ್ತಿದ್ದು ಎಂಟು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸಲಾಗಿದೆ. ಇದರ ಜತೆಗೆ 3ನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸಲಿದೆ ಎಂಬ ಅಂದಾಜಿನ ಹಿನ್ನೆಲೆಯಲ್ಲಿ ಈವರೆಗೆ ಎಷ್ಟುಮಂದಿಗೆ ಸೋಂಕು ತಗುಲಿದೆ ಎಂಬುದನ್ನು ಅಧ್ಯಯನ ಮಾಡಲು ತುರ್ತಾಗಿ ರಾಜ್ಯದಲ್ಲಿ ಮೂರನೇ ಹಂತದ ಸೆರೋ ಸರ್ವೇ ನಡೆಸಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ತಾಂತ್ರಿಕ ಸಲಹಾ ಸಮಿತಿ ಮೂಲಗಳ ಪ್ರಕಾರ, ಸದ್ಯದಲ್ಲೇ ನೂತನ ಕೊರೋನಾ ಕಾರ್ಯಪಡೆ ರಚನೆಯಾಗಲಿದೆ. ರಚನೆಯಾದ ಬೆನ್ನಲ್ಲೇ ಸೆರೋ ಸರ್ವೇಗೆ ಅನುಮೋದನೆ ದೊರೆಯಲಿದೆ. ಬಳಿಕ ರಾಜ್ಯಾದ್ಯಂತ 30 ಜಿಲ್ಲೆಗಳಲ್ಲೂ ಸೆರೋ ಸರ್ವೇ ನಡೆಸಲಾಗುವುದು ಎಂದು ತಿಳಿದುಬಂದಿದೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕರ್ನಾಟಕ

ಈ ಬಗ್ಗೆ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್‌, ಐಸಿಎಂಆರ್‌ ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಸರ್ವೇ ವೇಳೆ, ರಾಜ್ಯದ 3 ಜಿಲ್ಲೆಗಳಲ್ಲಿ ಶೇ.70 ರಷ್ಟುಮಂದಿಯಲ್ಲಿ ಪ್ರತಿ ಕಾಯ (ಆ್ಯಂಟಿಬಾಡಿಸ್‌) ಪತ್ತೆಯಾಗಿರುವುದಾಗಿ ಹೇಳಿತ್ತು. ಆದರೆ ಇದು ರಾಜ್ಯದ 30 ಜಿಲ್ಲೆಗಳನ್ನು ಪ್ರತಿನಿಧಿಸುವುದಿಲ್ಲ. ಹೀಗಾಗಿ ರಾಜ್ಯಕ್ಕೆ ಪ್ರತ್ಯೇಕವಾದ ಹಾಗೂ ವಸ್ತು ನಿಷ್ಠವಾದ ಸೆರೋ ಸರ್ವೇ ನಡೆಸಬೇಕು. 6-17 ವರ್ಷದ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ವಯಸ್ಕರಿಗೆ 30 ಜಿಲ್ಲೆಯಲ್ಲೂ ಸರ್ವೇ ನಡೆಸಬೇಕು ಎಂದು ಸರ್ಕಾರಕ್ಕೆ ತಿಳಿಸಿದ್ದೇವೆ ಎಂದರು.

ಶೇ.70 ರಷ್ಟು ಮಂದಿಗೆ ಸೋಂಕು:

ಕೇಂದ್ರದ ಐಸಿಎಂಆರ್‌ ವತಿಯಿಂದ ದೇಶಾದ್ಯಂತ ಜೂನ್‌ ತಿಂಗಳಲ್ಲಿ ನಡೆಸಿರುವ ಸೆರೋ ಸರ್ವೆಯಲ್ಲಿ ರಾಜ್ಯದ ಶೇ.70 (69.8) ಮಂದಿಯಲ್ಲಿ ಕೊರೋನಾ ಸೋಂಕಿನ ಪ್ರತಿಕಾಯ ಪತ್ತೆಯಾಗಿದೆ. ದೇಶಾದ್ಯಂತ ಎರಡನೇ ಅಲೆ ತೀವ್ರವಾಗಿ ಹರಡಿದ್ದ ಜೂನ್‌ ಹಾಗೂ ಜುಲೈ ನಡುವೆ ಐಸಿಎಂಆರ್‌ ವತಿಯಿಂದ 20 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ 70 ಜಿಲ್ಲೆಗಳಲ್ಲಿ ಸೆರೊ ಸಮೀಕ್ಷೆ ನಡೆಸಲಾಗಿದೆ.

ಈ ವೇಳೆ ಸಂಗ್ರಹಿಸಿದ್ದ ಒಟ್ಟು ಮಾದರಿಗಳಲ್ಲಿ ಶೇ.67.19 ಮಂದಿಯಲ್ಲಿ ಕೊರೋನಾ ಪ್ರತಿಕಾಯ ಪತ್ತೆಯಾಗಿತ್ತು. ರಾಜ್ಯದಲ್ಲಿ ಕಲಬುರಗಿ, ಚಿತ್ರದುರ್ಗ ಹಾಗೂ ಬೆಂಗಳೂರು ನಗರದಲ್ಲಿನ 1,326 ಮಂದಿಯಿಂದ ಮಾದರಿ ಪಡೆದು ಪರೀಕ್ಷೆ ನಡೆಸಿದ್ದು, ಈ ಪೈಕಿ 926 ಮಂದಿಯಲ್ಲಿ ಆ್ಯಂಟಿಬಾಡಿಸ್‌ ಪತ್ತೆಯಾಗಿವೆ. ಹೀಗಾಗಿ ದೇಶದ ಶೇ.67.19 ಮಂದಿಗೆ ಎರಡನೇ ಅಲೆಯಲ್ಲಿ ಸೋಂಕು ಉಂಟಾಗಿತ್ತು ಎಂದು ಕೇಂದ್ರ ವಿಶ್ಲೇಷಿಸಿದೆ. ಆದರೆ, ರಾಜ್ಯದಲ್ಲಿ ಕೇವಲ ಮೂರು ಜಿಲ್ಲೆಗಳಲ್ಲಿನ 1,326 ಮಂದಿಯಿಂದ ಸಂಗ್ರಹಿಸಿದ ಮಾದರಿಗಳ ಫಲಿತಾಂಶವನ್ನು ಇಡೀ ರಾಜ್ಯಕ್ಕೆ ಅನ್ವಯಿಸುವುದು ಸರಿಯಲ್ಲ. ಇದು ವಾಸ್ತವಕ್ಕೆ ಹತ್ತಿರವಾದ ಫಲಿತಾಂಶವನ್ನು ನೀಡುವುದಿಲ್ಲ. ಹೀಗಾಗಿ ರಾಜ್ಯದ 30 ಜಿಲ್ಲೆಗಳಲ್ಲೂ ರಾಜ್ಯ ಮಟ್ಟದಲ್ಲೇ ಸೆರೊ ಸರ್ವೆ ನಡೆಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಭವನೀಯ 3ನೇ ಅಲೆಯ ಸಿದ್ಧತೆಗಾಗಿ 6-17 ವರ್ಷದ ಮಕ್ಕಳು ಸೇರಿದಂತೆ ಎಲ್ಲ ವಯಸ್ಕರಲ್ಲೂ ರಾಜ್ಯಾದ್ಯಂತ ಸೆರೊ ಸರ್ವೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಸದ್ಯದಲ್ಲೇ ಸಚಿವರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್‌ ತಿಳಿಸಿದ್ದಾರೆ. 

ಸೆರೋ ಸರ್ವೇ ಏಕೆ?

ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ತೀವ್ರಗೊಂಡಿದೆ. ರಾಜ್ಯದ ಗಡಿ ಜಿಲ್ಲೆಗಳಲ್ಲೂ ಸೋಂಕು ಹೆಚ್ಚಾಗುತ್ತಿದೆ. ಜತೆಗೆ 3ನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸಲಿದೆ ಎಂಬ ಅಂದಾಜಿದೆ. ಹೀಗಾಗಿ ಈವರೆಗೆ ಎಷ್ಟು ಮಂದಿಗೆ ಸೋಂಕು ತಗುಲಿದೆ ಎಂಬುದನ್ನು ಅಧ್ಯಯನ ಮಾಡಲು ತುರ್ತಾಗಿ ರಾಜ್ಯದಲ್ಲಿ ಮೂರನೇ ಹಂತದ ಸೆರೋ ಸರ್ವೇ ನಡೆಸಬೇಕು.
 

Follow Us:
Download App:
  • android
  • ios