ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಟ ದಿ.ಅಂಬರೀಷ್‌ ಅವರ ಪತ್ನಿ ಸುಮಲತಾ ಸ್ಪರ್ಧೆ ವಿಚಾರ ಮಂಡ್ಯ ರಾಜಕಾರಣದಲ್ಲಿ ಹೊಸ ವಿವಾದ ಸೃಷ್ಟಿಸಿದೆ. ಸುಮಲತಾ ಸ್ಪರ್ಧೆ ವಿಚಾರವಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡುತ್ತಿದ್ದರೆ, ಸ್ಥಳೀಯ ನಾಯಕರು ಮಾತ್ರ ನೇರ ಬೆಂಬಲ ನೀಡುತ್ತಿದ್ದಾರೆ. 

ಏತನ್ಮಧ್ಯೆ, ಜೆಡಿಎಸ್‌ ಮುಖಂಡರು ಮಾತ್ರ ಸುಮಲತಾ ಸ್ಪರ್ಧೆಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಇದಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದಲೂ ಬೆಂಬಲ ಸಿಕ್ಕಿದೆ. ಮಂಡ್ಯದಿಂದ ಸ್ಪರ್ಧಿಸಲು ಕ್ಷೇತ್ರಕ್ಕೆ ಸುಮಲತಾ ಕೊಡುಗೆಯಾದರೂ ಏನು ಎಂದು ಕುಮಾರಸ್ವಾಮಿ ಖಾರವಾಗಿಯೇ ಪ್ರಶ್ನಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ, ಅಂಬರೀಷ್‌ ಹಾಗೂ ಸುಮಲತಾ ವಿರುದ್ಧ ಜೆಡಿಎಸ್‌ ಮುಖಂಡರು ನೀಡುತ್ತಿರುವ ಹೇಳಿಕೆಗಳು ಅಂಬಿ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ. ಈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ.

ಈಗ ಯಾಕೆ ಹೆಚ್ಚು ಪ್ರಚಾರ ಸಿಗ್ತಿದೆ? - ಸಿಎಂ:

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅವರಿಗೆ ಟಿಕೆಟ್‌ ನೀಡಬೇಕೆಂಬ ಒತ್ತಾಯ ಗಟ್ಟಿಧ್ವನಿಯಲ್ಲಿ ಕೇಳಿಬರುತ್ತಿರುವ ನಡುವೆಯೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದಕ್ಕೆ ಬಹಿರಂಗವಾಗಿಯೇ ತಮ್ಮ ವಿರೋಧ ದಾಖಲಿಸಿದ್ದಾರೆ.

ಬೆಂಗಳೂರಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಈ ವಿಚಾರವಾಗಿ ಮಾತನಾಡಿ, ಮಂಡ್ಯಕ್ಕೆ ಸುಮಲತಾ ಕೊಡುಗೆಯಾದರೂ ಏನು? ಈಗ ಯಾಕೆ ಸುಮಲತಾ ಅವರಿಗೆ ಹೆಚ್ಚು ಪ್ರಚಾರ ಸಿಗುತ್ತಿದೆ ಎಂದು ಪ್ರಶ್ನಿಸಿದರು. ಜತೆಗೆ, ಇದಕ್ಕೆಲ್ಲ ಅಂಬರೀಷ್‌ ಅವರ ದುರಂತ ಅಂತ್ಯ ಅಷ್ಟೆಕಾರಣ ಎಂದು ವಿಶ್ಲೇಷಿಸಿದರು.

ಸುಮಲತಾ ಮಂಡ್ಯದ ಗೌಡ್ತಿ ಅಲ್ಲ-ಶ್ರೀಕಂಠೇಗೌಡ:

 ಮಧ್ಯೆ, ಸುಮಲತಾ ಸ್ಪರ್ಧೆಗೆ ಜೆಡಿಎಸ್‌ ಮುಖಂಡ, ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡ ಅವರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಅಂಬರೀಷ್‌ ಅವರು ನನ್ನ ಮನೆಗೆ, ಪತ್ನಿಗೆ, ಪುತ್ರನಿಗೆ ರಾಜಕಾರಣದ ಸೋಂಕು ತಗುಲುವುದು ಬೇಡ ಎಂದು ಹೇಳಿದ್ದರು. ಅಲ್ಲದೆ ಸುಮಲತಾ ಅವರು ಮಂಡ್ಯದ ಗೌಡ್ತಿಯೂ ಅಲ್ಲ, ಆಂಧ್ರ ಮೂಲದವರು. ಹೀಗಿದ್ದಾಗ ಅವರು ಮಂಡ್ಯ ರಾಜಕಾರಣಕ್ಕೆ ಬರಬೇಕಾ ಎಂದು ಪ್ರಶ್ನಿಸಿದ್ದಾರೆ.

ರಾಜಕಾರಣಕ್ಕೆ ಬಂದರೆ ಸ್ವಾಗತ- ದಿನೇಶ್‌: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತ್ರ ಸುಮಲತಾ ಸ್ಪರ್ಧೆ ವಿಚಾರವಾಗಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಸುಮಲತಾ ರಾಜಕೀಯಕ್ಕೆ ಬಂದರೆ ಸ್ವಾಗತ. ಆದರೆ ಈಗಲೇ ಟಿಕೆಟ್‌ ನೀಡುವ ಬಗ್ಗೆ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿಯಿಂದ ಸ್ಪರ್ಧಿಸಲು ಹುಚ್ಚಾ:

ಒಂದು ಕಡೆ ಸುಮಲತಾ ಸ್ಪರ್ಧೆ ವಿಚಾರವಾಗಿ ಕಾಂಗ್ರೆಸ್‌-ಜೆಡಿಎಸ್‌ ನಡುವೆ ವಾಕ್ಸಮರ ನಡೆಯುತ್ತಿದ್ದರೆ ಇನ್ನೊಂದು ಕಡೆ ಸುಮಲತಾ ಬಿಜೆಪಿಗೆ ಬರುತ್ತಾರೆ ಎನ್ನುವ ಸುದ್ದಿಗಳಿಂದ ಕಳೆದ ಬಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಪಕ್ಷವನ್ನು್ನ ಪ್ರತಿನಿಧಿಸಿದ್ದ ಡಾ.ಸಿದ್ದರಾಮಯ್ಯ ಅವರಲ್ಲಿ ತೀವ್ರ ತಳಮಳ ಸೃಷ್ಟಿಸಿದೆ. ಸುಮಲತಾ ಬಿಜೆಪಿ ಪ್ರವೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸುಮಲತಾ ಕಾಂಗ್ರೆಸ್‌ ಪಕ್ಷದವರು, ಬಿಜೆಪಿಯಿಂದ ಸ್ಪರ್ಧಿಸಲು ಅವರಿಗೆ ಹುಚ್ಚು ಹಿಡಿದಿಯಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಜೆಡಿಎಸ್‌ನ ಮನೆಬಾಗಿಲಿಗೆ ಹೋಗಿಲ್ಲ-ಸಚ್ಚಿದಾನಂದ

ಸುಮಲತಾ ಮಂಡ್ಯದ ಗೌಡ್ತಿ ಅಲ್ಲ,ಆಂಧ್ರ ಮೂಲದವರು ಎನ್ನುವ ಶ್ರೀಕಂಠೇಗೌಡ ಹೇಳಿಕೆ ಬಾಲಿಶವಾದುದು. ಅಂಬರೀಷ್‌ ಅವರನ್ನು ಮದುವೆಯಾದ ನಂತರ ಸುಮಲತಾ ಕೂಡ ಮಂಡ್ಯದವರೇ. ಸುಮಲತಾ ಚುನಾವಣೆಗೆ ನಿಲ್ಲಬೇಕು ಎಂಬುವುದು ನಮ್ಮ ಆಶಯ. ನಾವೇನು ಸುಮಲತಾ ಟಿಕೆಟ್‌ಗಾಗಿ ಜೆಡಿಎಸ್‌ನವರ ಮನೆ ಬಾಗಿಲಿಗೆ ಹೋಗಿಲ್ಲ.

- ಸಚ್ಚಿದಾನಂದ, ಕೆಪಿಸಿಸಿ ಸದಸ್ಯ

ಶಿವರಾಮೇಗೌಡ, ಶ್ರೀಕಂಠೇಗೌಡ ವಿರುದ್ಧ ಆಕ್ರೋಶ

ದಿ.ನಟ ಅಂಬರೀಷ್‌ ಹಾಗೂ ಪತ್ನಿ ಸುಮಲತಾ ವಿರುದ್ಧ ಜೆಡಿಎಸ್‌ ಸಂಸದ ಶಿವರಾಮೇಗೌಡ ಹಾಗೂ ಎಂಎಲ್ಸಿ ಕೆ.ಟಿ.ಶ್ರೀಕಂಠೇ ಗೌಡ ನೀಡಿರುವ ಹೇಳಿಕೆಗೆ ಅಂಬಿ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಂಬಿ ಅಭಿಮಾನಿಗಳು ಇಬ್ಬರೂ ಮುಖಂಡರ ವಿರುದ್ಧ ಕಿಡಿಕಾರಿದ್ದು, ಮುಂದೈತೆ ಮಾರಿ ಹಬ್ಬ ಎಂದು ಎಚ್ಚರಿಕೆ ನೀಡಿದ್ದಾರೆ.