Asianet Suvarna News Asianet Suvarna News

ಹಿರಿಯ ಪತ್ರಕರ್ತ, ಕನ್ನಡಪ್ರಭ ಮಾಜಿ ಸಂಪಾದಕ ಕೆ.ಸತ್ಯನಾರಾಯಣ ನಿಧನ

: ಹಿರಿಯ ಪತ್ರಕರ್ತ, 'ಕನ್ನಡಪ್ರಭ ಸತ್ಯ' ಎಂದೇ ಖ್ಯಾತರಾಗಿದ್ದ ಕನ್ನಡ ಪ್ರಭ ಪತ್ರಿಕೆಯ ಮಾಜಿ ಸಂಪಾದಕರಾದ ಕೆ.ಸತ್ಯನಾರಾಯಣ ವಿಧಿವಶರಾಗಿದ್ದಾರೆ. ಭಾನುವಾರ ಜಯನಗರದ ಎಲ್ ಐಸಿ ಕಾಲೋನಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

Senior journalist, former editor Kannadaprabha passed away rav
Author
First Published Jan 8, 2023, 10:48 AM IST


ಬೆಂಗಳೂರು (ಜ.8) : ಹಿರಿಯ ಪತ್ರಕರ್ತ, 'ಕನ್ನಡಪ್ರಭ ಸತ್ಯ' ಎಂದೇ ಖ್ಯಾತರಾಗಿದ್ದ ಕನ್ನಡ ಪ್ರಭ ಪತ್ರಿಕೆಯ ಮಾಜಿ ಸಂಪಾದಕರಾದ ಕೆ.ಸತ್ಯನಾರಾಯಣ ವಿಧಿವಶರಾಗಿದ್ದಾರೆ. ಭಾನುವಾರ ಜಯನಗರದ ಎಲ್ ಐಸಿ ಕಾಲೋನಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕನ್ನಡಪ್ರಭ(Kannadaprabha) ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ಕೆ. ಸತ್ಯನಾರಾಯಣ(K.Satyanarayan) 'ತಾಯ್ನಾಡು' ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದ ಅವರು, ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದವರು. ಕನ್ನಡ ಪ್ರಭ(Kannadaprabha) ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಸುದೀರ್ಘ ಅವಧಿಗೆ ನಾನಾ ಹಂತದಲ್ಲಿ ದುಡಿದವರು. ಕನ್ನಡಪ್ರಭದಲ್ಲಿ ನಗರಪ್ರದಕ್ಷಣೆ, ವ್ಯಕ್ತಿ ವಿಚಾರ ಎಂಬ ಅಂಕಣ ಬರೆಯುತ್ತ ಜನಮನ ಗೆದ್ದಿದ್ದರು. ತಮ್ಮ ಬದುಕನ್ನು ಸುದ್ದಿ ಮನೆಗೆ ಸಮರ್ಪಣೆ ಮಾಡಿದ ಹಿರಿಯ ಚೇತನ. ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಾ ತಮ್ಮೊಳಗಿನ ಪತ್ರಕರ್ತನನ್ನು ಜಾಗೃತವಾಗಿ ಕಾಪಿಟ್ಟುಕೊಂಡಿದ್ದವರು.

ಕೆ.ಸತ್ಯನಾರಾಯಣ ಎನ್ನುವ ಹೆಸರಲ್ಲಿ ಕೆ ಎಂದರೆ 'ಕನ್ನಡಪ್ರಭ' ಎಂದೇ ಜನರು ಗುರುತಿಸುತ್ತಿದ್ದರು. ಹೀಗಾಗಿ  ಕೆ.ಸತ್ಯನಾರಾಯಣ 'ಕನ್ನಡಪ್ರಭ ಸತ್ಯ' ಎಂದೇ  ಚಿರಪರಿಚಿತ. ರಾಜಕಾರಣಿಗಳಿರಲಿ, ಸಾಂಸ್ಕೃತಿಕ ರಂಗದವರೇ ಇರಲಿ ಎಲ್ಲರಿಗೂ ಸತ್ಯ ಅವರೆಂದರೆ ಅಚ್ಚುಮೆಚ್ಚು. ಅದಕ್ಕೆ ಕಾರಣ ಅವರ ಸರಳ ಸಜ್ಜನಿಕೆಯ ನಡವಳಿಕೆ. ಇಂಗ್ಲಿಷ್‌ನಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ಅವರು ವಾಣಿಜ್ಯ, ವ್ಯವಹಾರ ವರದಿಗಾರಿಕೆಗೆ ಹೆಸರಾಗಿದ್ರು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ  ವರದಿಗಾರರಾಗಿ ಕೆಲಸ ಮಾಡಿದ್ರು ಬಜೆಟ್, ಅಧಿವೇಶನ ಕುರಿತ ವರದಿಗಾರಿಕೆಗೆ ಅವರದು ಎತ್ತಿದ ಕೈ.ಪತ್ರಕರ್ತ ವೃತ್ತಿಗೆ ಎಂದೂ ಕಳಂಕ ತಂದುಕೊಂಡವರಲ್ಲ. ಇತರರಿಗೆ ಆದರ್ಶಪ್ರಾಯವಾಗುವಂಥ ಜೀವನ ನಡೆಸಿದವರು. ಕನ್ನಡದ ಹಲವು ಹೆಸರಾಂತ ಪತ್ರಕರ್ತರನ್ನು ಬೆಳೆಸಿದವರು. ಸತ್ಯನಾರಾಯಣ ಅವರ ನಿಧನದಿಂದ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ.

ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Follow Us:
Download App:
  • android
  • ios