ಸರ್ಕಾರ ಮಂಜೂರು ಮಾಡಿದ ಜಮೀನನ್ನು ಎರಡು ಬಾರಿ ಮಾರಾಟ ಮಾಡಿ ಪುನಃ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು (ಜೂ.25): ಸರ್ಕಾರದಿಂದ ಮಂಜೂರಾಗಿರುವ ಜಮೀನು ಮಾರಾಟ ಮಾಡಿ, ‘ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ಪರಾಭಾರೆ ನಿಷೇಧ-ಪಿಟಿಸಿಎಲ್) ಕಾಯ್ದೆ’ ಅಡಿ ಹಿಂಪಡೆದು, 2ನೇ ಬಾರಿ ಮಾರಾಟ ಮಾಡಿ ಪುನಃ ತಮಗೆ ಹಿಂದಿರುಗಿಸಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ರೀತಿ ನಿರ್ದೇಶನ ಕೋರಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕಾನೂನು ಬಾಹಿರವಾಗುತ್ತದೆ ಮತ್ತು ಕಾಯ್ದೆಯ ದುರುಪಯೋಗ ಎನಿಸಿಕೊಳ್ಳುತ್ತದೆ ಎಂದು ನ್ಯಾ.ಸಂಜಯ್ ಗೌಡ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಮಾಡಿದ್ದರೂ, ಸೆಕ್ಷನ್ 4(2)ರ ಪ್ರಕಾರ ಎಸ್‌ಸಿ ಎಸ್‌ಟಿಯವರಿಗೆ ಸರ್ಕಾರ ಮಂಜೂರು ಮಾಡಿದ್ದ ಜಮೀನನ್ನು ಯಾವುದೇ ಕಾಲಮಿತಿ ಇಲ್ಲದೆ ಪುನಃ ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಒಮ್ಮೆ ಮಾರಾಟ ಮಾಡಿ ಅದರ ಹಕ್ಕು ಪಡೆದು ಮತ್ತೆ ಮಾರಾಟ ಮಾಡಿ ಅದನ್ನು ಪುನಃ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿ ಕಾಯ್ದೆಯಲ್ಲಿ ವಿವರಣೆ ನೀಡಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.
ದಾವಣಗೆರೆ ಕೆಂಚಮ್ಮನಹಳ್ಳಿ ಗ್ರಾಮದಲ್ಲಿ ಸಿದ್ದಪ್ಪ ಎಂಬುವರಿಗೆ 1961ರಲ್ಲಿ 2.20 ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿತ್ತು. ಸಿದ್ದಪ್ಪ 1970ರಲ್ಲಿ ಕೊಟ್ರಪ್ಪ ಎಂಬುವರಿಗೆ ಜಮೀನನ್ನು ಮಾರಿದ್ದರು. ನಂತರ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿ ಜಮೀನು ವಾಪಸ್ ಪಡೆದಿದ್ದರು. ಅದಾದ ಬಳಿಕ 1985ರಲ್ಲಿ ಮತ್ತೊಮ್ಮೆ ಶಿವಪ್ಪ ಮತ್ತು ತುಂಗಮ್ಮ ಎಂಬುವರಿಗೆ ಮಾರಿ, ಕೆಲ ವರ್ಷಗಳ ಬಳಿಕ ಪಿಟಿಸಿಎಲ್ ಕಾಯ್ದೆಯಡಿ ಜಮೀನನ್ನು ತಮ್ಮ ವಶಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡನೇ ಬಾರಿ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾಡಳಿತ ತಿರಸ್ಕರಿಸಿತ್ತು. ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ, ಜಮೀನು ತಮ್ಮ ವಶಕ್ಕೆ ಕೋರಿ ಶಿವಪ್ಪ ಕುಟುಂಬದವರು ಹೈಕೋರ್ಟ್ ಮೊರೆ ಹೋಗಿದ್ದರು.
